ಕೊಡಗು: ಕಳೆದ ಮೂರು ವರ್ಷಗಳಿಂದಲೂ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಗೆ ಈ ಬಾರಿಯೂ ಪ್ರವಾಹ ಎದುರಾಗಬಹುದು. ಹೀಗಾಗಿಯೇ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳ ರಕ್ಷಣಾ ಕಾರ್ಯಾಚರಣೆ ತರಬೇತಿ ನಡೆಸಿವೆ. ಚನ್ನೈನಿಂದ ಬಂದಿದ್ದ ಎನ್ಡಿಆರ್ಎಫ್ ಮತ್ತು ಬೆಂಗಳೂರಿನಿಂದ ಬಂದಿದ್ದ ಎಸ್ಡಿಆರ್ಎಫ್ ತಂಡಗಳು ಜಿಲ್ಲೆಯ ರಿಸರ್ವ್ ಪೊಲೀಸ್ ಮತ್ತು ಅಗ್ನಿಶಾಮಕ ದಳಗಳ ಜೊತೆಗೂಡಿ ಅಭ್ಯಾಸ ನಡೆಸುತ್ತಿವೆ.
ಕಳೆದ ಬಾರಿ ಭೂಕುಸಿತವಾಗಿ ಐವರು ಭೂ ಸಮಾಧಿಯಾಗಿದ್ದ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಪ್ರವಾಹ ಮತ್ತು ಭೂಕುಸಿತದ ಸಂದರ್ಭ ಜನರನ್ನು ರಕ್ಷಣೆ ಮಾಡುವ ಬಗ್ಗೆ ಅಭ್ಯಾಸ ಮಾಡಲಾಗುತ್ತಿದೆ. ಅಷ್ಟಕ್ಕೂ ಮತ್ತೆ ಇದೇ ಸ್ಥಳದಲ್ಲಿ ತರಬೇತಿ ಮಾಡುತ್ತಿರುವುದಾದರೂ ಯಾಕೆ ಅನ್ನೋದು ಕೂಡ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಅಂದರೆ ಕಳೆದ ವರ್ಷ ಗಜಗಿರಿ ಬೆಟ್ಟದಲ್ಲಿ ಭೂಕುಸಿತವಾಗಿದ್ದಕ್ಕೆ ಮುಖ್ಯವಾಗಿ ತಲಕಾವೇರಿ ಮತ್ತು ಗಜಗಿರಿಬೆಟ್ಟದಲ್ಲಿ ಅರಣ್ಯ ಇಲಾಖೆ ತೆಗೆದಿದ್ದ ಇಂಗು ಗುಂಡಿಗಳೇ ಮುಖ್ಯ ಕಾರಣ ಎನ್ನೋದು ಸಾಬೀತಾಗಿದೆ. ಜೊತೆಗೆ ಬ್ರಹ್ಮಗಿರಿ ಬೆಟ್ಟದಲ್ಲೂ ಇನ್ನೂ ನೂರಾರು ಇಂಗುಗುಂಡಿಗಳು ಇವೆ. ಹೀಗಾಗಿಯೇ ತಲಕಾವೇರಿಯಲ್ಲಿ ಈ ಬಾರಿಯೂ ಮತ್ತೆ ಭೂ ಕುಸಿತವಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಕಳೆದ ಬಾರಿ ಭೂಕುಸಿತವಾಗಿದ್ದ ಜಾಗದಲ್ಲೇ ಎನ್ಡಿಆರ್ ಎಫ್ ತಂಡ ಅಭ್ಯಾಸ ಆರಂಭಿಸಿದೆ ಎನ್ನಲಾಗುತ್ತಿದೆ.
ಇದನ್ನು ಓದಿ: ಹೊಡಿಬಡಿ ಅನ್ನೋರು ರಾಜಕೀಯಕ್ಕೆ ಬಂದ ಮೇಲೆ ಮೌಲ್ಯಗಳು ಹೇಗೆ ಉಳಿಯುತ್ತವೆ?; ಸಿದ್ದರಾಮಯ್ಯ ಅಸಮಾಧಾನ
ಒಂದು ವೇಳೆ ಗಜಗಿರಿ ಬೆಟ್ಟ ಮತ್ತು ಬ್ರಹ್ಮಗಿರಿ ಏನಾದರೂ ಕುಸಿದಿದ್ದೇ ಆದಲ್ಲಿ ಬೆಟ್ಟದ ಕೆಳಭಾಗದಲ್ಲಿರುವ ಕೋಳಿಕಾಡು ಪೈಸಾರು, ಚೇರಂಗಾಲ ಮತ್ತು ಸಣ್ಣಪುಲಿಕೋಟು ಸೇರಿದಂತೆ ಹಲವು ಗ್ರಾಮಗಳು ಮುಳುಗಡೆ ಆಗಿಬಿಡುತ್ತವೆ. ಈಗಾಗಲೇ ಕಳೆದ ವರ್ಷ ಗಜಗಿರಿ ಬೆಟ್ಟ ಕುಸಿದಾಗಲೇ ಕೋಳಿಕಾಡು ಪೈಸಾರಿಗೆ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಈ ಬಾರಿ ಏನಾದರೂ ಅಂತಹ ಸ್ಥಿತಿ ಎದುರಾಗಬಹುದಾ ಎನ್ನೋದು ರಕ್ಷಣಾ ತಂಡಗಳ ಅಭ್ಯಾಸ ಎಚ್ಚರಿಕೆ ನೀಡುತ್ತಿದೆ. ರಕ್ಷಣಾ ತಂಡಗಳು ಅಭ್ಯಾಸ ಮಾಡುತ್ತಿರುವ ಜೊತೆಗೆ ಜನರು ಬೆಟ್ಟ ಕುಸಿಯುವ ಮತ್ತು ಪ್ರವಾಹ ಎದುರಾಗುವ ಅಪಾಯಕಾರಿ ಸ್ಥಳಗಳಲ್ಲಿ ಇದ್ದರೆ ಮಳೆ ಆರಂಭವಾಗುತ್ತಿದ್ದಂತೆ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಅರಿವು ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ. ಅರ್ಥಾತ್ ಮೂರು ವರ್ಷಗಳಂತೆ ಈ ಬಾರಿಯೂ ಪ್ರವಾಹ, ಭೂ ಕುಸಿತ ಕಟ್ಟಿಟ್ಟ ಬುತ್ತಿನಾ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ.
ರಕ್ಷಣಾ ತಂಡಗಳ ತರಬೇತಿ, ಜಿಲ್ಲಾಡಳಿತದ ಈ ಸಿದ್ಧತೆ ಜೊತೆಗೆ ಈ ಬಾರಿ ಜನವರಿ ತಿಂಗಳಿಂದಲೇ ಕೊಡಗಿನಲ್ಲಿ ಭಾರೀ ಮಳೆಸುರಿಯುತ್ತಿದೆ. ಇದೆಲ್ಲವನ್ನೂ ನೋಡಿದರೆ ಈ ಬಾರಿಯೂ ನಮಗೆ ಸಂಕಷ್ಟ ತಪ್ಪಿದ್ದಲ್ಲಾ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮಳೆ ಆರಂಭವಾದಾಗ ಅಪಾಯಕಾರಿ ಸ್ಥಳಗಳಿಂದ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಿ ಎಂದು ಜಿಲ್ಲಾಡಳಿತವೇನೋ ಹೇಳುತ್ತದೆ. ಆದರೆ 2018 ರಲ್ಲಿ ಮನೆ ಕಳೆದುಕೊಂಡವರಿಗೂ ಇನ್ನೂ ಮನೆ ಕೊಟ್ಟಿಲ್ಲ. ಮೂರು ವರ್ಷಗಳಿಂದ ಸಾವಿರಾರು ಜನರು ನಿರ್ಗತಿಕರಾಗಿದ್ದಾರೆ. ಅವರೆಲ್ಲಾ ಎಲ್ಲಿ ಹೋಗಬೇಕು ಎನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ