ಹಾಸನ: ಕೊರೊನಾ ಮಹಾಮಾರಿಯಿಂದ ಕಳೆದ ಒಂದುವರೆ ವರ್ಷದಿಂದ ಶಾಲಾ-ಕಾಲೇಜುಗಳು ಆರಂಭಗೊಂಡಿಲ್ಲ. ಕೊರೋನಾ ಪರೀಕ್ಷೆಯಲ್ಲಿ ಶೇ. 2 ಕ್ಕಿಂತ ಕಡಿಮೆ ಪಾಲಿಟಿವಿಟಿ ಇರುವ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆ. 23 ರಿಂದ 9 ಮತ್ತು 10ನೇ ತರಗತಿಗಳು ಆರಂಭವಾಗಲಿದ್ದು ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಹಾಸನ ಜಿಲ್ಲೆಯಲ್ಲೂ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಶಾಲಾ-ಕಾಲೇಜು ತೆರೆಯಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಶೇ.2 ರ ಒಳಗೆ ಪಾಸಿಟಿವಿಟಿ ದರ ಇಳಿದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಆ.23 ರಿಂದ ಶಾಲಾ-ಕಾಲೇಜಿಗಳು ಆರಂಭಗೊಳ್ಳುತ್ತಿಲ್ಲ.
ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಪಾಸಿಟಿವಿಟಿ ದರ ಶೇ.2 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೂ ಆನ್ ಲೈನ್ ಕ್ಲಾಸ್ ಮುಂದುವರೆಸಲು ಸೂಚಿಸಿದೆ. ಹಾಸನ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಒಟ್ಟು 520 ಪ್ರೌಢಶಾಲೆಗಳಿದ್ದು, ಎಲ್ಕೆಜಿಯಿಂದ ಹತ್ತನೇ ತರಗತಿವರೆಗೆ ಒಟ್ಟು 2,13,379 ವಿದ್ಯಾರ್ಥಿಗಳು ಶಾಲೆಗಳಿಗೆ ದಾಖಲಾಗಿದ್ದಾರೆ. ಇದರಲ್ಲಿ ಒಂಭತ್ತನೇ ತರಗತಿ 22,191 ಹಾಗೂ ಹತ್ತನೇ ತರಗತಿಯಲ್ಲಿ 22,509 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಹನ್ನೆರಡು ಸಾವಿರ ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Guidelines for PU Class: ಸೋಮವಾರದಿಂದ ಪಿಯು ತರಗತಿಗಳು ಶುರು: ಈ ಎಲ್ಲಾ ನಿಯಮಗಳನ್ನು ಪಾಲಿಸಲೇಬೇಕು
ಶಾಲೆ ಆರಂಭಕ್ಕೂ ಮುನ್ನಾ ಶಿಕ್ಷಕರಿಗೆ ಕೊರೊನಾ ಲಸಿಕೆ ಪಡೆಯುವಂತೆ ಸರ್ಕಾರ ಆದೇಶಿಸಿದ ಹಿನ್ನೆಲೆ, ಈಗಾಗಲೇ ಎಲ್ಲಾ ಶಿಕ್ಷಕರು ಕೋವಿಡ್ ಲಸಿಕೆ ಪಡೆದಿದ್ದು ಶಿಕ್ಷಕರು ಮಕ್ಕಳಿಗೆ ಪಾಠ ಹೇಳಲು ಸಜ್ಜಾಗಿದ್ದಾರೆ. ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂದು ತಜ್ಞರು ಸರ್ಕಾರಕ್ಕೆ ವರದಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಶಾಲೆ ಆರಂಭಿಸಲು ಮುಂದಾಗಿರುವುದಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಏನೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಶಾಲೆಯಲ್ಲಿ ಮಕ್ಕಳನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಮೂರನೇ ಅಲೆ ಮುಗಿಯುವವರೆಗೂ ಶಾಲೆ ಆರಂಭ ಬೇಡ ಎಂಬುದು ಅನೇಕ ಪೋಷಕರ ಒತ್ತಾಯವಾಗಿದೆ.
ಇನ್ನೊಂದೆಡೆ ಪಿಯುಸಿ ಕಾಲೇಜು ಆರಂಭಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ತಯಾರಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 175 ಪದವಿ ಪೂರ್ವ ಕಾಲೇಜುಗಳಿದ್ದು ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸೇರಿ ಸುಮಾರು 33,500 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈಗಾಗಲೇ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಉಪನ್ಯಾಸಕರಿಗೂ ಕೊರೊನಾ ಲಸಿಕೆ ಪಡೆದಿದ್ದು, ಸರ್ಕಾರದ ಆದೇಶಕ್ಕೆ ಕಾದುಕುಳಿತ್ತಿದ್ದಾರೆ.
ಇದನ್ನೂ ಓದಿ: ಕೂಡಿಟ್ಟ ವ್ಯಾಕ್ಸಿನ್ ಖರ್ಚಾಗದೆ ಗೋಳಾಟ : ಲಸಿಕೆ ವಾಪಾಸ್ ಖರೀದಿಸುವಂತೆ ಖಾಸಗಿ ಆಸ್ಪತ್ರೆಗಳ ದುಂಬಾಲು
ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಎರಡರ ಆಸುಪಾಸಿನಲ್ಲಿದೆ. ಶೀಘ್ರದಲ್ಲಿಯೇ ಎರಡಕ್ಕಿಂತ ಕಡಿಮೆಯಾಗಬಹುದು. ಆನಂತರ ಸರ್ಕಾರ ಕಾಲೇಜು ತೆರೆಯಲು ಅನುಮತಿ ನೀಡಲಿದೆ ಎಂದು ಶಾಲಾ ಕಾಲೇಜುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಆದೇಶ ಹೊರ ಬೀಳುತ್ತಿದ್ದಂತೆ ಸ್ಯಾನಿಟೈಸ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಮೂರ್ತಿ ಅವರು ತಿಳಿಸಿದ್ದಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಶಶಿಧರ್ ಬಿ.ಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ