Remdesivir Black Marketing: ಗದಗದಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಅಕ್ರಮ ಮಾರಾಟ ಜಾಲ ಪತ್ತೆ; ನಾಲ್ವರ ಬಂಧನ, ಓರ್ವ ಪರಾರಿ

ಈ ಪ್ರಕರಣದಲ್ಲಿ ಆಸ್ಪತ್ರೆಯ ನರ್ಸ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ಆರೋಪಿಗಳು  3 ಸಾವಿರದ ಔಷಧವನ್ನು ಸುಮಾರು ರೂ. 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ನಾಲ್ವರು ಆರೋಪಿಗಳು (ಮುಂದಿನ ಸಾಲಿನಲ್ಲಿ ಕುಳಿತಿರುವವರು)

ನಾಲ್ವರು ಆರೋಪಿಗಳು (ಮುಂದಿನ ಸಾಲಿನಲ್ಲಿ ಕುಳಿತಿರುವವರು)

  • Share this:
ಗದಗ(ಮೇ 24): ಕೊರೋನಾ ಅಟ್ಟಹಾಸ ಮಿತಿಮೀರಿದೆ. ಕೊರೋನಾ ಹೆಮ್ಮಾರಿಗೆ ಸಾಲು ಸಾಲು ಹೆಣಗಳು ಆಸ್ಪತ್ರೆಯಿಂದ ಹೊರಬರುತ್ತಿವೆ. ಇನ್ನೊಂದೆಡೆ ಜೀವರಕ್ಷಕ ರೆಮ್ಡಿಸಿವರ್ ಕೊರತೆಯಾಗ್ತಿದೆ. ಕೊರೋನಾ ಸೋಂಕಿತರ ಜೀವ ಹೋಗ್ತಿದೆ ಅನ್ನೋ ಆತಂಕ ಎದುರಾಗಿದೆ. ಈ ನಡುವೆ ಲಭ್ಯವಿರುವ ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ ಅನ್ನೋದು ಸರಕಾರಕ್ಕೆ ತಲೆನೋವಾಗಿದೆ. ಈ ನಡುವೆ ಈಗ ಗದಗನಲ್ಲಿ ಈ ಮಹಾಜಾಲದಲ್ಲಿ ನಾಲ್ವರು ಸಿಕ್ಕಿಬಿದ್ದಿದ್ದಾರೆ.

ಗದಗದಲ್ಲಿಯೂ ಸಹ ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಈ ಬಗ್ಗೆ ಜಾಲ ಪತ್ತೆ ಮಾಡಿ ನಾಲ್ವರನ್ನು ಜಿಲ್ಲಾ ಸೈಬರ್ ವಿಭಾಗದ ಪೊಲೀಸರು  ಬಂಧಿಸಿದ್ದಾರೆ. ಸದ್ಯ ನಾಲ್ವರ ಬಂಧನವಾಗಿದ್ದು ಇನ್ನೊಬ್ಬ ಆರೋಪಿತೆ ನರ್ಸ್ ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಆಸ್ಪತ್ರೆಯ ನರ್ಸ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ಆರೋಪಿಗಳು  3 ಸಾವಿರದ ಔಷಧವನ್ನು ಸುಮಾರು ರೂ. 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಮಹ್ಮದ್ ಇಸ್ಮಾಯಿಲ್ ಓದೇಕಾರ, ಪಿರೋಜ್ ಖಾನ್ ಪಠಾಣ, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್ ಗವಿಸಿದ್ದಯ್ಯ ಹಿರೇಮಠ, ರಮೇಶ ಚವಟಗಿ ಬಂಧಿತರು. ಇನ್ನು ಖಾಸಗಿ ಆಸ್ಪತ್ರೆಯ ನರ್ಸ್ ಜ್ಯೋತಿ ಲಮಾಣಿ ಪರಾರಿಯಾಗಿದ್ದಾಳೆ. ಜೀವ ರಕ್ಷಕ ಇಂಜೆಕ್ಷನ್ ಔಷಧಿಯನ್ನು ಇವರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ಗುಪ್ತ ಮಾಹಿತಿ ಸಂಗ್ರಹಿಸಲಾಗಿತ್ತು. ಸೈಬರ್ ಪೊಲೀಸ್ ಇನ್ಸ್​​ಪೆಕ್ಟರ್ ಮಹಾಂತೇಶ ಟಿ ಅವರ ನೇತೃತ್ವದ ತಂಡ, ಗದಗ–ಮುಳಗುಂದ ರಸ್ತೆಯ ರಾಧಾಕೃಷ್ಣ ನಗರದ ಹತ್ತಿರ ನಿಗದಿತ ಬೆಲೆಗಿಂತ ಹೆಚ್ಚು 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನೂ ಮೂವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Bangalore Lockdown: ಬೆಂಗಳೂರಲ್ಲಿ ನಿಯಮ ಮೀರಿ ರಸ್ತೆಗಿಳಿದವರಿಗೆ ಶಾಕ್​ ಕೊಟ್ಟ ಪೊಲೀಸರು

ಸದ್ಯ ಅವರಿಗಾಗಿ ಹುಡುಕಾಟ ನಡೆದಿದೆ. ಬಂಧಿತ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 409, 420 ಸಹ ಕಲಂ- 34, ಐಪಿಸಿ ಮತ್ತು ಕಲಂ – 4,5,6 ಮತ್ತು 13, ಡ್ರಗ್ಸ್ ಕಂಟ್ರೋಲ್ ಕಾಯ್ದೆ -1950ರ ಅಡಿ ಪ್ರಕರಣ ದಾಖಲಾಸಿಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಬಂಧಿತರಿಂದ ವಶಪಡಿಸಿಕೊಂಡಿರುವ 14 ರೆಮಿಡಿಸಿವರ್ ನ ಸರ್ಕಾರ ನಿಗದಿಪಡಿಸಿದ ಮೌಲ್ಯ ರೂ. 48,860 ಇದೆ. ಆದರೆ, ಆರೋಪಿತರು ರೂ. 30 ಸಾವಿರದಂತೆ ರೂ. 4,20,000 ನ ಲೆಕ್ಕಾಚಾರದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಸದ್ಯ ಬಂಧಿತರಿಂದ ರೂ. 2,500 ನಗದ ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೇ, ಈ ಪ್ರಕರಣದ ಮುಂದುವರಿದ ತನಿಖೆಯನ್ನು ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರಿಗೆ ವಹಿಸಲಾಗಿದೆ. ಯಾಕೆಂದರೆ ಈ ಪ್ರಮಾಣದಲ್ಲಿ ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ ಅಂದ್ರೆ, ಅದರ ಹಿಂದೆ ದೊಡ್ಡ ಜಾಲವೇ ಇದೆ ಅಂತ ಹೇಳಲಾಗ್ತಿದೆ‌. ಈ ವೈದ್ಯಕೀಯ ಸಿಬ್ಬಂದಿ ಜೊತೆಗೆ ಇದರಲ್ಲಿ ಇನ್ನು ವೈದ್ಯರುಗಳ ಕೈವಾಡವೂ ಇದದೆಯಾ ಅಂತ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಇನ್ನು ಜಿಮ್ಸ್ ನ ಓರ್ವ ಸಿಬ್ಬಂದಿ ಈ ಜಾಲದಲ್ಲಿ ಭಾಗಿಯಾಗಿದ್ದು ಬಹಳಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇನ್ನು ರೆಮ್ಡಿಸಿವರ್ ಚಿಕಿತ್ಸೆ ನೀಡಿರುವ ಬಗ್ಗೆ ಖಚಿತವಾದ ದಾಖಲು‌ ಮಾಡಿರಬೇಕಾಗುತ್ತದೆ. ಆದ್ರೆ ಇವರು ಸುಳ್ಳು ದಾಖಲೆ ತೋರಿಸಿ ಔಷಧಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡ್ತಿದ್ದಾರೆ ಎನ್ನುವ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಒಟ್ಟಿನಲ್ಲಿ ಜೀರ ರಕ್ಷಕ ರೆಮ್ಡಿಸಿವರ್ ಗದಗನಲ್ಲಿಯೂ ಸಹ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ ಅನ್ನೋ ವಿಷಯ ಈಗ ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.‌
Published by:Latha CG
First published: