ಮುಂಗಾರು ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಹಾನಿ ; ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ವ್ಯವಸ್ಥೆ

ಕರಾವಳಿಯಲ್ಲಿ ಮುಂಗಾರು ಮಳೆ ಅತ್ಯಂತ ಕ್ಷೀಣವಾಗಿ ಆರಂಭಗೊಂಡಿದ್ದರು, ಬಳಿಕದ ದಿನಗಳಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಆಗಸ್ಟ್ ತಿಂಗಳ ಮೊದಲ ವಾರದಿಂದಲೇ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅತ್ಯಂತ ಹೆಚ್ಚಾಗಿದೆ.

ದರೆ ಕುಸಿದಿರುವುದನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು

ದರೆ ಕುಸಿದಿರುವುದನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು

  • Share this:
ಮಂಗಳೂರು(ಆಗಸ್ಟ್.10): ಕರಾವಳಿಯಲ್ಲಿ ಮುಂಗಾರು ಮಳೆ ಆರಂಭಗೊಂಡ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 824 ವಿವಿಧ ರೀತಿಯ ಹಾನಿ ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ ಹಾನಿಗೊಳಗಾದ ಎಲ್ಲಾ ಕುಟುಂಬಗಳಿಗೂ ಪರಿಹಾರವನ್ನು ಹಸ್ತಾಂತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚಿನ ಹಾನಿ ಸಂಭವಿಸಿದ್ದು, ಒಟ್ಟು 234 ಹಾನಿ ಪ್ರಕರಣಗಳು ದಾಖಲಾಗಿದೆ.

ಕರಾವಳಿಯಲ್ಲಿ ಮುಂಗಾರು ಮಳೆ ಅತ್ಯಂತ ಕ್ಷೀಣವಾಗಿ ಆರಂಭಗೊಂಡಿದ್ದರು, ಬಳಿಕದ ದಿನಗಳಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಆಗಸ್ಟ್ ತಿಂಗಳ ಮೊದಲ ವಾರದಿಂದಲೇ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಳೆಯ ಹಾನಿಯ ಪ್ರಮಾಣವೂ ಹೆಚ್ಚಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 824 ವಿವಿಧ ರೀತಿಯ ಹಾನಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಹುತೇಕ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರವನ್ನೂ ವಿತರಿಸಲಾಗಿದೆ.

ಮುಖ್ಯವಾಗಿ ಮಳೆಯಿಂದ ಮನೆಗಳಿಗೆ ಹಾನಿಯುಂಟಾದ ಪ್ರಕರಣಗಳು ಹೆಚ್ಚಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ 4 ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿಯಾಗಿದ್ದು, 91 ಮನೆಗಳಿಗೆ ಭಾಗಶ ಹಾನಿಯಾಗಿವೆ. ಬೆಳ್ತಂಗಡಿ ತಾಲೂಕಿನಲ್ಲಿ 4 ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿಯಾಗಿದ್ದು, 86 ಮನೆಗಳು ಭಾಗಶ ಹಾನಿಗೊಳಗಾಗಿವೆ. ಮಂಗಳೂರು ತಾಲೂಕಿನಲ್ಲಿ 9 ಮನೆಗಳು ಪೂರ್ಣ ಹಾನಿಯಾಗಿದ್ದು, 107 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಮೂಡಬಿದಿರೆ ತಾಲೂಕಿನಲ್ಲಿ 1 ಮನೆ ಸಂಪೂರ್ಣ ಹಾನಿಯಾಗಿದ್ದು 48 ಮನೆಗಳು ಭಾಗಶ ಹಾನಿಯಾಗಿದೆ. ಪುತ್ತೂರಿನಲ್ಲಿ ಅತೀ ಹೆಚ್ಚಿನ ಮನೆ ಹಾನಿ ಪ್ರಕರಣಗಳು ದಾಖಲಾಗಿದ್ದು, 234 ಮನೆಗಳಿಗೆ ಭಾಗಶ ಹಾನಿಯಾಗಿದೆ. ಕಡಬದಲ್ಲಿ 12 ಮನೆಗಳಿಗೆ ಪೂರ್ಣ ಹಾನಿ, 145 ಮನೆಗಳು ಭಾಗಶ ಹಾನಿಯಾಗಿವೆ. ಸುಳ್ಯದಲ್ಲಿ 1 ಮನೆ ಪೂರ್ಣ ಹಾನಿಯಾಗಿದ್ದು, 82 ಮನೆಗಳಿಗೆ ಭಾಗಶ ಹಾನಿಯಾಗಿದೆ. ಪುತ್ತೂರಿನಲ್ಲಿ ಈಗಾಗಲೇ 1 ಸಾವು ಸಂಭವಿಸಿದ್ದು, ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ನೀಡಲಾಗಿದೆ. 1 ಜಾನುವಾರು ಸಾವಿಗೀಡಾಗಿದ್ದು, 10 ಸಾವಿರ ಪರಿಹಾರವನ್ನು ಸಂಬಂಧಪಟ್ಟ ಕುಟುಂಬಗಳಿಗೆ ನೀಡಲಾಗಿದೆ. ಪುತ್ತೂರಿನಲ್ಲಿ ಒಟ್ಟು 20.5 ಲಕ್ಷ ಪರಿಹಾರವನ್ನು ನೀಡಲಾಗಿದೆ ಎಂದು ಪುತ್ತೂರು ತಹಶೀಲ್ದಾರ್  ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Karnataka KSEEB SSLC Result 2020: ಅತಿಹೆಚ್ಚು ಅಂಕ ಗಳಿಸಿದ, ವಿಷಯವಾರು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ

ಪುತ್ತೂರಿನ ಉಪ್ಪಿನಂಗಡಿಯಲ್ಲಿ ಮಳೆಯಿಂದಾಗಿ ಮೂರು ಮನೆಗಳು ಕುಸಿಯುವ ಭೀತಿಯಲ್ಲಿದೆ. ಉಪ್ಪಿನಂಗಡಿಯ ಪಾಲೆತ್ತಡಿ ಎಂಬಲ್ಲಿ ಈ ಮೂರು ಮನೆಗಳು ಅಪಾಯದ ಹಂತದಲ್ಲಿದೆ. ಆದರೆ, ಈ ಮನೆಗಳಲ್ಲಿ ವಾಸಿಸುವ ಮಂದಿ ಮಾತ್ರ ಬೇರೆಡೆಗೆ ಸ್ಥಳಾಂತರಿಸಲು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಸಂಬಂಧ ಅಧಿಕಾರಿಗಳು ಮನೆ ಮಂದಿಗೆ ನೋಟೀಸ್ ಜಾರಿ ಮಾಡಿ ತೆರವುಗೊಳಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಪೊಲೀಸ್ ಕೇಸ್ ದಾಖಲಿಸಿ ನೆರೆ ಪರಿಹಾರ ಕೇಂದ್ರಕ್ಕೆ ಸ್ಥಳಾತರಿಸಲು ಅಧಿಕಾರಿಗಳು ಸೂಚಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕೊಂಚ ಕ್ಷೀಣಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ನೆರೆ ಪರಿಹಾರ ಕೇಂದ್ರವನ್ನೂ ಸ್ಥಾಪಿಸಲಾಗಿದೆ.
Published by:G Hareeshkumar
First published: