• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಯಡಿಯೂರಪ್ಪ ಸಿಎಂ ಸ್ಥಾನ ತ್ಯಜಿಸಿದರೆ ಈಶ್ವರಪ್ಪಗೆ ಪಟ್ಟ ಕಟ್ಟಿ: ರಾಯಣ್ಣ ಬ್ರಿಗೇಡ್ ನಾಯಕರ ಆಗ್ರಹ

ಯಡಿಯೂರಪ್ಪ ಸಿಎಂ ಸ್ಥಾನ ತ್ಯಜಿಸಿದರೆ ಈಶ್ವರಪ್ಪಗೆ ಪಟ್ಟ ಕಟ್ಟಿ: ರಾಯಣ್ಣ ಬ್ರಿಗೇಡ್ ನಾಯಕರ ಆಗ್ರಹ

ಆನೇಕಲ್ ದೊಡ್ಡಯ್ಯ

ಆನೇಕಲ್ ದೊಡ್ಡಯ್ಯ

ಈಶ್ವರಪ್ಪನವರಿಗೆ ಸಿಎಂ ಗಾದಿ ನೀಡಲಾಗುವುದಿಲ್ಲ ಎಂದರೆ ದಲಿತರನ್ನಾದರೂ ಸಿಎಂ ಮಾಡಿ ರಾಜ್ಯ ಮತ್ತು ರಾಷ್ಟಕ್ಕೆ ಮಾದರಿಯಾಗಬೇಕು ಎಂದು ಆನೇಕಲ್ ದೊಡ್ಡಯ್ಯ ಒತ್ತಾಯಿಸಿದ್ದಾರೆ.

  • Share this:

ಆನೇಕಲ್: ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರ ಬಹು ಚರ್ಚಿತ ವಿಷಯವಾಗಿದೆ. ಇದರ ನಡುವೆ ಬಿಜೆಪಿ ಹಿರಿಯ ಮುಖಂಡ ಹಿಂದುಳಿದ ವರ್ಗಗಳ ನಾಯಕ ಹಾಗೂ ಹಾಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಬೇಕು ಎಂದು ರಾಜ್ಯ ರಾಯಣ್ಣ ಬ್ರಿಗೇಡ್ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಆನೇಕಲ್ ದೊಡ್ಡಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಬದಲಾವಣೆ ನಿಶ್ಚಿತವಾದರೆ ರಾಜ್ಯದ ಮುಂದಿನ ಸಿಎಂ ಆಗಿ ಹಿಂದುಳಿದ ವರ್ಗಗಳ ನಾಯಕ ಕೆ ಎಸ್ ಈಶ್ವರಪ್ಪ ಅವರನ್ನು ಆಯ್ಕೆ ಮಾಡಬೇಕು ಎಂದು ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಆಗ್ರಹಪಡಿಸಿದ್ದಾರೆ.


ಯಡಿಯೂರಪ್ಪ ಅವರ ಸರಿಸಮಾನವಾಗಿ ರಾಜ್ಯದಲ್ಲಿ ಕೆ ಎಸ್ ಈಶ್ವರಪ್ಪ ಬಿಜೆಪಿ ಪಕ್ಷವನ್ನು ಸಂಘಟಿಸಿದ್ದಾರೆ. ನಾಲ್ಕು ದಶಕಗಳಲ್ಲಿ ಯಾವತ್ತೂ ಪಕ್ಷ ನಿಷ್ಠೆ ಮತ್ತು ಹಿಂದುತ್ವ ಸಿದ್ದಾಂತದಿಂದ ಈಶ್ವರಪ್ಪನವರು ಹೊರಬಂದವರಲ್ಲ. ಆದ್ರೆ ಯಡಿಯೂರಪ್ಪನವರು ಒಮ್ಮೆ ಪಕ್ಷ ಬಿಟ್ಟು ಮರಳಿ ಬಂದಿದ್ದಾರೆ. ಹಿಂದುಳಿದ ವರ್ಗಗಳ ದನಿಯಾಗಿ ಈಶ್ವರಪ್ಪ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಆದ್ರೆ ಈಗ ಮತ್ತೊಮ್ಮೆ ಮುಂದುವರಿದ ಸಮುದಾಯಕ್ಕೆ ಸಿಎಂ ಗಾದಿ ಎಂದು ಪರೋಕ್ಷವಾಗಿ ಬಿಂಬಿಸಲಾಗುತ್ತಿದೆ. ಇದು ಹಿಂದುಳಿದ ಸಮುದಾಯಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆನೇಕಲ್ ದೊಡ್ಡಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.


ಮಾಧ್ಯಮಗಳಲ್ಲಿಯು ಸಹ ಸಾಮಾಜಿಕ ನ್ಯಾಯದ ಬಗ್ಗೆ ದ್ವನಿ ಮೂಡುತ್ತಿಲ್ಲ. ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯಿತರು ಮತ್ತು ಬ್ರಾಹ್ಮಣರು ಬಿಟ್ಟು ದಲಿತರು ಹಿಂದುಳಿದವರು ಮಾಧ್ಯಮಗಳಿಗೆ ಕಾಣುತ್ತಿಲ್ಲ ಎಂದು ಅವರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.


ಇನ್ನು, ನಿಗಮ ಮಂಡಳಿಗಳಿಗೆ ನೀಡುವ ಅನುದಾನದಲ್ಲಿಯೂ ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯ ಎಸಗಲಾಗಿದೆ. ಯಡಿಯೂರಪ್ಪನವರ ಬದಲಾವಣೆಯಾದರೆ ಕೆ ಎಸ್ ಈಶ್ವರಪ್ಪ ಅವರಿಗೆ ಸಿಎಂ ಗಾದಿ ನೀಡಬೇಕು. ಬೇರೆ ಯಾವುದೋ ಕಾರಣಗಳಿಗೆ ಕೆ ಎಸ್ ಈಶ್ವರಪ್ಪ ಅವರಿಗೆ ಸಿಎಂ ಗಾದಿ ನೀಡಲಾಗುವುದಿಲ್ಲ ಎನ್ನುವುದಾದರೆ, ದಲಿತರನ್ನು ಸಿಎಂ ಮಾಡಿ. ಈ ಮೂಲಕ ರಾಜ್ಯ ಮತ್ತು ರಾಷ್ಟಕ್ಕೆ ಮಾದರಿಯಾಗಬೇಕು ಎಂದು ಆನೇಕಲ್ ದೊಡ್ಡಯ್ಯ ಅವರು ಹೊಸ ದಾಳ ಉರುಳಿಸಿದ್ದು, ಬಿಜೆಪಿ ನಾಯಕರಿಗೆ ಹೊಸ ತಲೆನೋವು ಶುರುವಾಗುವ ಸಾಧ್ಯತೆ ಇದೆ.


ಇದನ್ನೂ ಓದಿ: Olympics 2020 - ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಎಷ್ಟು ಪದಕ ಗೆಲ್ಲುತ್ತೆ ಭಾರತ?


ಜೊತೆಗೆ ಒಂದು ವೇಳೆ ಕೆ ಎಸ್ ಈಶ್ವರಪ್ಪ ಅಥವಾ ದಲಿತರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳು ಬಿಜೆಪಿ ವಿರುದ್ಧ ತಿರುಗಿ ಬೀಳಲಿವೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರುಗಳಿಗೆ ಆನೇಕಲ್ ದೊಡ್ಡಯ್ಯ ಎಚ್ಚರಿಕೆ ಕೂಡ ನೀಡಿದ್ದಾರೆ.


ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಸಮಕಾಲೀನರು. ಶಿವಮೊಗ್ಗದವರೇ ಆದ ಇಬ್ಬರೂ ಜೋಡೆತ್ತುಗಳಂತೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ ಅಧಿಕಾರದ ಮಟ್ಟಕ್ಕೆ ತಂದಿರುವುದು ಹೌದು. ಈಶ್ವರಪ್ಪ ಕೂಡ ರಾಜ್ಯದ ಸಿಎಂ ಆಗಲು ಈ ಹಿಂದೆ ಸಾಕಷ್ಟು ಬಾರಿ ಪ್ರಯತ್ನ ಕೂಡ ಮಾಡಿದ್ಧಾರೆ. ಆದರೆ, ಸಾಧ್ಯವಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಅವರು ರಾಯಣ್ಣ ಬ್ರಿಗೇಡ್ ಸಂಘಟನೆ ಮೂಲಕ ತಮ್ಮ ಕುರುಬ ಸಮುದಾಯದ ಬೆಂಬಲ ಪ್ರದರ್ಶನ ಮಾಡಿದ್ದರು. ಈಗ ಮತ್ತೊಮ್ಮೆ ಅವರು ಕುರುಬಾಸ್ತ್ರ ಪ್ರಯೋಗಿಸಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈಶ್ವರಪ್ಪ ಪ್ರಯತ್ನಿಸುತ್ತಿದ್ದಾರೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.


ವರದಿ: ಆದೂರು ಚಂದ್ರು

top videos
    First published: