ಕೋಲಾರ(ಏಪ್ರಿಲ್ 10): ಸಾರಿಗೆ ನೌಕರರ ಮುಷ್ಕರದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿಯಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಪಿಸಿದ್ದಾರೆ. ಕೋಲಾರದ ಶ್ರೀನಿವಾಸಪುರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಮೇಶ್‍ಕುಮಾರ್, ಕೂಡಲೇ ಸರ್ಕಾರ ನೌಕರರ ಸಮಸ್ಯೆಗಳನ್ನ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಗಳು ಕೆಲಸ ಮಾಡುತ್ತಿದ್ದಲ್ಲಿ, ಸರ್ಕಾರ ಕೂಡಲೇ ಮುಷ್ಕರದ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಇನ್ನು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ದ ಕಿಡಿಕಾರಿದ ರಮೇಶ್‍ಕುಮಾರ್, ಜನರ ಕಷ್ಟಗಳ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಯಾವುದೇ ಕಾಳಜಿಯಿಲ್ಲ, ಸಾರಿಗೆ ಇಲಾಖೆಯ ನೌಕರರೇ ಸತ್ತರೂ ಅವರ ಕುಟುಂಬಕ್ಕೆ ಅನುಕಂಪ ತೋರಿಸಲ್ಲ. ಅನುಕಂಪದ ಆಧಾರದಲ್ಲಿ ಕೆಲಸ ಪಡೆಯಲು ತಿಂಗಳಾನುಗಟ್ಟಲೆ ಅಲೆಯಬೇಕು, ಅಂತಹ ದುಸ್ಥಿತಿ ಸಾರಿಗೆ ಇಲಾಖೆಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಮುಷ್ಕರ ನಿರತ ನೌಕರರನ್ನ ವರ್ಗಾವಣೆ ಮಾಡುವುದು ಹಾಗು ಅಮಾನತು ಮಾಡುವ ಕ್ರಮಕ್ಕೆ ಮುಂದಾಗಿದ್ದು, ಇದಕ್ಕೆ ಕಿಡಿಕಾರಿದ ಅವರು, ಇದೊಂದು ಸರ್ಕಾರದ ಪರೋಕ್ಷವಾಗಿ ಹೆದರಿಸುವ ತಂತ್ರವಾಗಿದೆ. ದಬ್ಬಾಳಿಕೆ ಮೂಲಕ ಬೆದರಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ , ಖಂಡಿತ ಇದು ಸಹಿಸುವಂತದ್ದು ಅಲ್ಲ. ವರ್ಗಾವಣೆ ಸಾರ್ವಜನಿಕ ಪ್ರಕ್ರಿಯೆಯಾಗಿರಬೇಕು, ಇಂತಹ ಸಮಯದಲ್ಲಿ ವರ್ಗಾವಣೆಗೆ ಕೈಹಾಕಬಾರದು ಎಂದರು. ಇನ್ನು ಸರ್ಕಾರದ ಇಂತಹ ನಿರ್ಧಾರದ ಹಿಂದೆ ಅಧಿಕಾರಿಗಳ ಕೈವಾಡ ಇದೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದರು. ಇಂತಹ ವಿಚಾರದಲ್ಲಿ ಸಾರಿಗೆ ಅಧಿಕಾರಿಗಳನ್ನ ಯಾರೊಬ್ಬ ಸಾರ್ವಜನಿಕರು ಪ್ರಶ್ನೆ ಮಾಡೊಲ್ಲ, ಎಲ್ಲರು ಪ್ರಶ್ನಿಸೋದು ಜನ ಪ್ರತಿನಿಧಿಗಳನ್ನ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.
ಸಾರಿಗೆ ನೌಕರರ ವಿರುದ್ದ ಎಸ್ಮಾ ಜಾರಿ ಮಾಡುವ ಕುರಿತು ಮಾತನಾಡಿದ ರಮೇಶ್‍ಕುಮಾರ್, ನೌಕರರ ಮೇಲೆ ಎಸ್ಮಾ ಜಾರಿ ಮಾಡುವುದು ಬೆದರಿಸುವ ತಂತ್ರವಷ್ಟೆ. ನಿಗಮವನ್ನ ಖಾಸಗೀಕರಣ ಮಾಡುವುದು ಕೇವಲ ಭ್ರಮೆಯಷ್ಟೆ. ಸಾರಿಗೆ ನೌಕರರು ತಮ್ಮ ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಎಲ್ಲರು ಒಂದಾಗಿದ್ದಾರೆ, ಅವರದು ಯಾವುದೇ ಸಂಘಟನೆಯಲ್ಲ, ಸದ್ಯಕ್ಕೆ ಅವರು ನೆಮ್ಮದಿಯಿಂದಿಲ್ಲ. ಅವರು ನೆಮ್ಮದಿಯಿಂದ ಇರುವಂತೆ ನಾವು ಮಾಡಬೇಕು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ