news18-kannada Updated:December 27, 2020, 1:34 PM IST
ಸಚಿವ ರಮೇಶ್ ಜಾರಕಿಹೋಳಿ
ಬೆಳಗಾವಿ(ಡಿ. 27): ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಚಿವ ರಮೇಶ ಜಾರಕಿಹೊಳಿ ನಡುವಿನ ಫೈಟ್ ಮತ್ತಷ್ಟು ತಾರಕಕ್ಕೆ ಏರಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಲು ರಮೇಶ ಜಾರಕಿಹೊಳಿ ಸಂಕಲ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಟಕ್ಕರ್ ಕೊಡಲು ಶಾಸಕಿ ಹೆಬ್ಬಾಳ್ಕರ್ ಸಹ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಹೆಬ್ಬಾಳ್ಕರ್, ಜಾರಕಿಹೊಳಿ ನಡುವೆ ಜಗಳ ಆರಂಭವಾಯಿತು. ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ವಿಚಾರವಾಗಿ ಇಬ್ಬರ ನಡುವೆ ಮೈಮಸ್ಸು ಉಂಟಾಯಿತು. ನಂತರ ಇದು ಎಚ್ ಡಿ ಕುಮಾರಸ್ವಾಮಿ ಸರ್ಕಾರವನ್ನು ಪತನಗೊಳಿಸುವಷ್ಟರ ಮಟ್ಟಿಗೆ ಹೋಗಿದ್ದು ಇತಿಹಾಸ. ಅಲ್ಲಿಂದ ನಿರಂತರ ಇಬ್ಬರ ನಡುವೆ ಜಿದ್ದಾಜಿದ್ದಿನ ರಾಜಕಾರಣ ಆರಂಭವಾಗಿದೆ. ಸಚಿವ ರಮೇಶ ಜಾರಕಿಹೊಳಿ ಈ ಸಲ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಗ್ರಾಮೀಣ ಕ್ಷೇತ್ರದ ಅನೇಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸಚಿವ ರಮೇಶ ಜಾರಕಿಹೊಳಿ ಇತ್ತೀಚೆಗೆ ಮಾರಿಹಾಳ ಗ್ರಾಮದ 5 ಗ್ರಾಪಂ ಸದಸ್ಯರನ್ನು ಅವಿರೋಧ ಮಾಡಿದ್ದಾರೆ. ಜತಗೆ ಹಿಂಡಲಗಾ ಗ್ರಾಮದ ಅನೇಕರು ಸಚಿವರ ಜತೆಗೆ ನೇರವಾಗಿ ಸಂಪರ್ಕವನ್ನು ಹೊಂದಿದ್ದಾರೆ. ಇದೇ ಗ್ರಾಮದ ಪೃಥ್ವಿ ಸಿಂಗ್ ಫೌಂಡೇಶನ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನೂರಾರು ಜನ ಯುವಕರು ಪಾಲ್ಗೊಂಡಿದ್ದರು. ಸಚಿವ ರಮೇಶ ಜಾರಕಿಹೊಳಿ ಭಾವಚಿತ್ರ ಇರುವ 10 ಸಾವಿರ ಕ್ಯಾಲೆಂಡರ್ಗಳು ಗ್ರಾಮೀಣ ಕ್ಷೇತ್ರದ ಮನೆ ಮನೆಗೂ ತಲುಪಿವೆ. ಈ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಪ್ರಭುತ್ವ ಸಾಧಿಸಲು ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ.
ಇದನ್ನೂ ಓದಿ: ಕಲಬುರ್ಗಿಯಲ್ಲಿ 2ನೇ ಹಂತದ ಗ್ರಾ.ಪಂ. ಚುನಾವಣೆ; ಮತದಾನಕ್ಕೂ ಮುನ್ನವೇ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ
ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ, ಮುಂಬರುವ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಿಜೆಪಿ ವಶ ಮಾಡುತ್ತೇವೆ. ಗ್ರಾಮೀಣದಲ್ಲಿ ಗೆಲ್ಲಲೇಬೇಕೆಂಬ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬೆಳಗಾವಿ ಗ್ರಾಮದಲ್ಲಿ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ದಾಖಲಿಸಿದ್ದರು. ಮುಂಬರುವ ಚುನಾವಣೆ ಅತ್ಯಂತ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಲಿದೆ. ಬಿಜೆಪಿಯಿಂದ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಮಾತ್ರ ಇನ್ನೂ ನಿಗದಿಯಾಗಿಲ್ಲ.
ವರದಿ: ಚಂದ್ರಕಾಂತ ಸುಗಂಧಿ
Published by:
Vijayasarthy SN
First published:
December 27, 2020, 1:34 PM IST