ಮಸ್ಕಿ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಪ್ರಚಾರ ಇಲ್ಲ: ಬಿಜೆಪಿ ಅಭ್ಯರ್ಥಿ ಸ್ಪಷ್ಟನೆ

ಸಿಡಿ ಪ್ರಕರಣದಲ್ಲಿ ಸಿಲುಕಿರುವ ಕಾರಣಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

ಪ್ರತಾಪ್ ಗೌಡ ಪಾಟೀಲ್

ಪ್ರತಾಪ್ ಗೌಡ ಪಾಟೀಲ್

  • Share this:
ರಾಯಚೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬರಲು ಕಾರಣವಾದ ಮುಂಬೈ ಫ್ರೆಂಡ್ಸ್ ಎಂದು ಖ್ಯಾತರಾದ 17 ಜನ ಶಾಸಕರ ನೇತೃತ್ವ ವಹಿಸಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಡಿ ಪ್ರಕರಣದಲ್ಲಿ ಸಿಕ್ಕು ಒತ್ತಾಡುತ್ತಿದ್ದಾರೆ. ಈ ಗೊಂದಲ ಮಧ್ಯೆ ಬೆಳಗಾವಿ ಸಾಹುಕಾರ್ ಮಸ್ಕಿ ಬೈ ಎಲೆಕ್ಷನ್ ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ ಅವರು ಮಸ್ಕಿ ಉಪಚುನಾವಣೆಯಿಂದ ದೂರ ಉಳಿಯುತ್ತಾರೆ ಎಂದು ಸ್ವತಃ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಹೇಳಿದ್ದಾರೆ.

2018ರಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳಿಂದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರಿಂದಾಗಿ 2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಮುಂಬೈಗೆ ಶಾಸಕರು ಹಾರುವಾಗ ಮುಖಂಡತ್ವ ವಹಿಸಿಕೊಂಡಿದ್ದು ರಮೇಶ ಜಾರಕಿಹೊಳಿ. ಇವರ ನೇತೃತ್ವದಲ್ಲಿ ಶಾಸಕರು ಬಂಡಾಯ ಎದ್ದಾಗ ಮೊದಲು ಜೊತೆ ನೀಡಿದ್ದು ಮಸ್ಕಿಯ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ. ಈ ಶಾಸಕರು ಅನರ್ಹಗೊಂಡ ನಂತರ 16 ಜನ ಶಾಸಕರ ಕ್ಷೇತ್ರದಲ್ಲಿ ಚುನಾವಣೆ ನಡೆದು ಎಂಟಿಬಿ ನಾಗರಾಜ ಹಾಗು ಹೆಚ್ ವಿಶ್ವನಾಥ ಮಾತ್ರ ಸೋಲು ಅನುಭವಿಸಿದ್ದಾರೆ. ರೋಷನ್ ಬೇಗ್ ಮತ್ತು ಆರ್ ಶಂಕರ್ ಸ್ಪರ್ಧೆ ಮಾಡಲಿಲ್ಲ. ಇನ್ನುಳಿದವರು ಗೆಲುವು ಸಾಧಿಸಿ ಮತ್ತೆ ವಿಧಾನಸಭೆ ಪ್ರವೇಶ ಮಾಡಿದ್ಧಾರೆ.

ಈಗ ರಮೇಶ‌ ಜಾರಕಿಹೊಳಿಯವರ ಆಪ್ತರು ಹಾಗೂ ಸಂಬಂಧಿಯೂ ಆಗಿರುವ ಪ್ರತಾಪಗೌಡ ಪಾಟೀಲ ಅವರು ಪ್ರತಿನಿಧಿಸುವ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಜಾರಕಿಹೊಳಿಯವರ ಸಿಡಿ ಪ್ರಕರಣ ನಡೆದಿದೆ. ಸಿಡಿ ಪ್ರಕರಣದ ಪರಿಣಾಮ ಮಸ್ಕಿ ಚುನಾವಣೆಯ ಮೇಲೆ ಬೀರುವ ಸಾಧ್ಯತೆ ಇದ್ದೇ ಇದೆ.

ಇದನ್ನೂ ಓದಿ: ಹುಷಾರ್..! ಕೊರೋನಾ ರೋಗದಿಂದ ಪುರುಷತ್ವ ಕುಂದಬಹುದು ಎನ್ನುತ್ತೆ ಒಂದು ಅಧ್ಯಯನ

ಮಸ್ಕಿಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಮತದಾರರು ಅಧಿಕವಿದ್ಧಾರೆ. ವಾಲ್ಮೀಕಿ ಜನಾಂಗದ ರಮೇಶ ಜಾರಕಿಹೊಳಿ ಅವರ ಮೇಲೆ ಆರೋಪ ಬಂದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಾಗೆಯೇ, ಸಿಡಿ ಹಿಂದಿನ ರೂವಾರಿ ಹಾಗೂ ಮಹಾನಾಯಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಂಬ ವದಂತಿ ಕೂಡ ಬೇರೆ ಬೇರೆ ರೀತಿಯ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಜಿ ಬಿಜೆಪಿ ನಾಯಕ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರನ್ನು ಕೇಳಿದರೆ, ಸಿಡಿ ವಿಷಯದ ಬಗ್ಗೆ ನಾನೇನೂ ಹೇಳುವುದಿಲ್ಲ. ನಮ್ಮ ನಾಯಕರು ಮಾತನಾಡುತ್ತಾರೆ ಎಂದು ಹೇಳಿ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಾರೆ.

ಈ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಕೇಳಿದರೆ, ಈ ಪ್ರಕರಣದಿಂದಾಗಿ ರಮೇಶ ಜಾರಕಿಹೊಳಿ ಪ್ರಚಾರಕ್ಕೆ ಬರುವುದು ಅನುಮಾನ. ಆದರೆ ಅವರ ಪುತ್ರ ಇಲ್ಲಿಯೇ ಇದ್ದು ಚುನಾವಣೆ ಪ್ರಚಾರದಲ್ಲಿ ತೊಡಗುತ್ತಾರೆ. ವಯಕ್ತಿಕವಾಗಿ ರಮೇಶ ಜಾರಕಿಹೊಳಿ ನನಗೆ ಗೊತ್ತು. ನನ್ನ ಸಂಬಂಧಿಗಳಾಗಿರುವ ಅವರು ಇಂಥ ಕೃತ್ಯ ಮಾಡಿರಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆ, ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಮುಂಬೈ ಹೋಟೆಲ್​ನಲ್ಲಿ ನಾವಿದ್ದಾಗ ಇಂಥ ಯಾವುದೇ ಘಟನೆ ನಡೆದಿಲ್ಲ, ನಡೆಯಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶ್ರೀರಾಮುಲು ಅವರು ಪ್ರತಾಪ್ ಗೌಡ ಪಾಟೀಲ್ ಅವರ ಮಾತನ್ನೇ ಪುನರುಚ್ಚರಿಸಿದ್ಧಾರೆ. ಸಿಡಿ ಪ್ರಕರಣ ಮಸ್ಕಿ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ತನಿಖೆ ನಡೆಯುತ್ತಿದೆ, ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಯುವತಿಗೆ ಅನ್ಯಾಯವಾಗಿದ್ದರೆ ಸರಕಾರ ನ್ಯಾಯ ಕೊಡಿಸುತ್ತದೆ ಎಂದು ಸಮಾಜ ಕಲ್ಯಾಣ ಸಚಿವರೂ ಆದ ಶ್ರೀರಾಮುಲು ತಿಳಿಸಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: