ರೇಷ್ಮೆಗೂಡು ಮಾರಾಟ ಮಾಡಿದರೂ ರೈತರ ಸೇರದ ಹಣ; ಬ್ಯಾಂಕ್ ಖಾತೆ ತೊಂದರೆಯಿಂದ ಅನ್ನದಾತರು ಹೈರಾಣ
ವಿವಿಧ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಿಂದಾಗಿ ಕೆಲ ನಿರ್ದಿಷ್ಟ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವ ರಾಮನಗರದ ರೇಷ್ಮೆ ಬೆಳೆಗಾರರಿಗೆ ತಾವು ಮಾರಿದ ರೇಷ್ಮೆಗೂಡಿನ ಹಣ ಡೆಪಾಸಿಟ್ ಆಗುತ್ತಿಲ್ಲ. ಹೊಸ ಖಾತೆ ಮಾಡಿಸುವುದೂ ಕಷ್ಟವಾಗಿದೆ.
ರಾಮನಗರ: ರಾಮನಗರ ರೇಷ್ಮೆ ಮಾರುಕಟ್ಟೆ ಏಷ್ಯಾದಲ್ಲಿಯೇ ನಂ.1 ಸ್ಥಾನ ಪಡೆದಿದೆ. ಆದರೆ ಈ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನ ಮಾರಾಟ ಮಾಡುತ್ತಿರುವ ರೈತರು ಕಂಗಾಲಾಗಿದ್ದಾರೆ. ರೈತರು ಮಾರಾಟ ಮಾಡಿದ ನಂತರ ಗೂಡಿನ ಹಣ ಅವರ ಬ್ಯಾಂಕ್ ಖಾತೆಗಳಿಗೆ ಸೇರುತ್ತಿಲ್ಲ. ಇದಕ್ಕೆ ಕಾರಣ ರೈತರ ಖಾತೆ ಇರುವ ಕೆಲ ಬ್ಯಾಂಕ್ಗಳು ವಿಲೀನವಾಗಿರುವುದು. ಕರ್ನಾಟಕ ಗ್ರಾಮೀಣ ಬ್ಯಾಂಕ್, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕೆಲ ಬ್ಯಾಂಕ್ಗಳು ಇತರೆ ಬ್ಯಾಂಕ್ಗಳೊಂದಿಗೆ ವಿಲೀನವಾಗಿರುವ ಕಾರಣ ರೈತರ ಬ್ಯಾಂಕ್ ಖಾತೆಗಳಿಗೆ ತಾವು ಮಾರಾಟ ಮಾಡುತ್ತಿರುವ ಗೂಡಿನ ಹಣ ಜಮೆಯಾಗುತ್ತಿಲ್ಲ.
ಈ ಹಿಂದೆ ಇದ್ದ ಬ್ಯಾಂಕ್ ಅಕೌಂಟ್ ನಂಬರ್ಗಳೂ ಈಗ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಸಂಬಂಧಪಟ್ಟ ಬ್ಯಾಂಕ್ಗೆ ರೈತರು ಹೋಗಿ ಹೊಸ ಖಾತೆಯನ್ನ ತೆರೆಯಬೇಕಿದೆ. ನಂತರ ಆ ಹೊಸ ಅಕೌಂಟ್ ನಂಬರ್ ಅನ್ನ ಮಾರುಕಟ್ಟೆಯಲ್ಲಿ ನಮೂದನೆ ಮಾಡಿಸಿದ ನಂತರ ಹಣ ಜಮೆಯಾಗಲಿದೆ ಎಂದು ರೇಷ್ಮೆ ಮಾರುಕಟ್ಟೆಯ ಉಪನಿರ್ದೇಶಕ ಮುನ್ಸಿ ಬಸಪ್ಪ ನ್ಯೂಸ್ 18 ಗೆ ತಿಳಿಸಿದ್ದಾರೆ. ಆದರೆ ಈಗ ಕೊರೋನಾ ಹಿನ್ನೆಲೆಯಲ್ಲಿ ಬ್ಯಾಂಕ್ನಲ್ಲಿ ಹೆಚ್ಚು ಜನರು ಸೇರಲು ಅವಕಾಶವಿಲ್ಲ. ಹಾಗಾಗಿ ರೈತರು ತಮ್ಮ ಹೊಸ ಬ್ಯಾಂಕ್ ಅಕೌಂಟ್ ಮಾಡಿಸುವಷ್ಟರಲ್ಲಿ ಸಾಕಷ್ಟು ಸಮಯವಾಗುತ್ತಿದ್ದು ಇದರಿಂದಾಗಿ ರೈತರಿಗೆ ಬಹಳಷ್ಟು ತೊಂದರೆಯಾಗ್ತಿದೆ ಎನ್ನಲಾಗ್ತಿದೆ.
ಈ ಬಗ್ಗೆ ಹಿರಿಯ ರೈತ ಮುಖಂಡರಾದ ಸಿಂ.ಲಿಂ. ನಾಗರಾಜ್ ಮಾತನಾಡಿ, ರೈತರು ಅವರೇ ಸ್ವತಃ ಬ್ಯಾಂಕ್ಗೆ ಹೋಗಿ ಹೊಸ ಖಾತೆ ಮಾಡಿಸುವುದು ಕಷ್ಟವಾಗಲಿದೆ. ಹಾಗಾಗಿ ಮಾರುಕಟ್ಟೆಯ ಅಧಿಕಾರಿಗಳೇ ಈ ಜವಾಬ್ದಾರಿಯನ್ನ ತೆಗೆದುಕೊಂಡು ರೈತರಿಗೆ ಸಂಬಂಧಪಟ್ಟ ಬ್ಯಾಂಕ್ನಲ್ಲಿ ಹೊಸ ಅಕೌಂಟ್ ಮಾಡಿಸಿಕೊಡುವ ಕೆಲಸ ಮಾಡಬೇಕಿದೆ. ಸರ್ಕಾರಗಳು ಈ ನಿರ್ಧಾರ ಮಾಡುವುದರಿಂದ ರೈತರಿಗೆ ಕಷ್ಟವಾಗುತ್ತಿದೆ. ಎಲ್ಲಾ ರೈತರು ಸಹ ವಿದ್ಯಾವಂತರಲ್ಲ, ಕೆಲವರು ನೇರವಾಗಿ ಬ್ಯಾಂಕ್ಗೆ ಹೋಗಿ ವ್ಯವಹಾರ ನಡೆಸಬಹುದು. ಆದರೆ ಅನಕ್ಷರಸ್ಥ ರೈತರಿಗೆ ಇದು ಸಾಕಷ್ಟು ಅನನುಕೂಲವಾಗಲಿದೆ. ಕಷ್ಟಪಟ್ಟು ಗೂಡು ಮಾರಾಟ ಮಾಡಿದರೂ ಸಹ ಹಣ ಕೈಗೆ ಸಿಗದಿರುವುದು ನಿಜಕ್ಕೂ ಬೇಸರದ ವಿಚಾರ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳೇ ರೈತರ ಪರವಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಿಂ.ಲಿಂ. ನಾಗರಾಜ್ ಅವರು ನ್ಯೂಸ್ 18 ಮೂಲಕ ಒತ್ತಾಯಿಸಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ