ಐದು ವರ್ಷದಲ್ಲಿ ನಗರಪಾಲಿಕೆಯಾಗಲಿದೆ ರಾಮನಗರ-ಚನ್ನಪಟ್ಟಣ ನಗರಸಭೆ: ಡಿಸಿಎಂ

ರಾಮನಗರ ನಗರಸಭೆಯನ್ನ ನಗರಪಾಲಿಕೆಯನ್ನಾಗಿ ಮಾಡುವುದು ಬಿಜೆಪಿಯ ಗುರಿಯಾಗಿದೆ. ಇನ್ನು ಐದು ವರ್ಷದಲ್ಲಿ ಇದನ್ನು ಪಾಲಿಕೆಯನ್ನಾಗಿ ಮಾಡುತ್ತೇವೆ ಎಂದು ಡಿಸಿಎಂ ಡಾ. ಅಶ್ವಥ ನಾರಾಯಣ ಹೇಳಿದ್ದಾರೆ.

ಡಾ. ಸಿಎನ್ ಅಶ್ವತ್ಥ ನಾರಾಯಣ

ಡಾ. ಸಿಎನ್ ಅಶ್ವತ್ಥ ನಾರಾಯಣ

  • Share this:
ರಾಮನಗರ: ಮುಂದಿನ ಐದು ವರ್ಷಗಳಲ್ಲಿ ರಾಮನಗರ ನಗರಸಭೆಯನ್ನು ನಗರ ಪಾಲಿಕೆಯನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ ಎನ್ ‌ಅಶ್ವತ್ಥನಾರಾಯಣ ತಿಳಿಸಿದರು. ನಗರಸಭೆ ಚುನಾವಣೆ ಹಿನ್ನೆಲೆ ರಾಮನಗರದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಂತರ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಚುನಾವಣೆಯ ಪ್ರಚಾರವನ್ನೂ ಅವರು ಮಾಡಿದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಬರುತ್ತಿವೆ. ಜನರನ್ನ ವಿಭಜನೆ ಮಾಡುವ ಕೆಲಸ ಮಾಡುತ್ತಿವೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಮತದಾರರನ್ನ ಓಲೈಕೆ ಮಾಡಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಆದರೆ ಬಿಜೆಪಿ ಪಕ್ಷ ಎಲ್ಲರೂ ಒಂದೇ ಎಂಬ ಸಿದ್ದಾಂತದೊಂದಿಗೆ ಕೆಲಸ ಮಾಡುತ್ತಿದೆ. ನಮಗೆ ಯಾವ ದ್ವೇಷವೂ ಇಲ್ಲ. ವೈಮನಸ್ಸೂ ಇಲ್ಲ. ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಮೂರು ಬಾಗಿಲು ಇಲ್ಲ. ನಮ್ಮಲ್ಲಿ ಒಂದೇ ಬಾಗಿಲು ಮಾತ್ರ ಇರೋದು ಎಂದರು.

ಇನ್ನು ರಾಮನಗರ-ಚನ್ನಪಟ್ಟಣ ಅವಳಿ ನಗರಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗಿದೆ. ರಾಮನಗರ ಮತ್ತು ಬೆಂಗಳೂರು ನಡುವೆ ಉಪ ನಗರ ರೈಲು ಸಂಚಾರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗುತ್ತಿರುವ ಬೆಂಗಳೂರು ಸ್ನಾತಕೋತ್ತರ ಕೇಂದ್ರ ಶೀಘ್ರದಲ್ಲೇ ಪೂರ್ಣ ಪ್ರಮಾಣ ವಿಶ್ವವಿದ್ಯಾಲಯ ಆಗಲಿದೆ ಎಂದು ಡಿಸಿಎಂ ಜಿಲ್ಲೆಯ ಜನತೆಗೆ ಭರವಸೆ ನೀಡಿದರು.

ಐದು ವರ್ಷಗಳಲ್ಲಿ ರಾಮನಗರ ನಗರಸಭೆ ಆಗಲಿದೆ ನಗರ ಪಾಲಿಕೆ:

ರಾಮನಗರ ನಗರಸಭೆಯನ್ನು ಇನ್ನೈದು ವರ್ಷಗಳಲ್ಲಿ ನಗರಪಾಲಿಕೆಯಾಗಿ ಮಾಡುತ್ತೇವೆ. ನಗರ ಪಾಲಿಕೆ ಮಾಡುವುದಾಗಿ ನಾವು ಕೇವಲ ಬಾಯಿ ಮಾತಿನ ವಾಗ್ದಾನ ಮಾಡುತ್ತಿಲ್ಲ. ಇದು ಬಿಜೆಪಿಯ ಗುರಿಯೂ ಹೌದು. ಈಗಾಗಲೇ ಅದಕ್ಕೆ ಬೇಕಾದ ಎಲ್ಲ ಪೂರಕ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತದೆ ಎಂದು ಡಿಸಿಎಂ ಅಶ್ವಥ ನಾರಾಯಣ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಇದನ್ನೂ ಓದಿ: Vaccine Rate - ಕೋವಿಶೀಲ್ಡ್ ಲಸಿಕೆ ದರ ಪರಿಷ್ಕರಣೆ; ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಆಗಲಿದೆ ದುಬಾರಿ

ರಾಮನಗರ ತಾಲೂಕು ಮತ್ತು ಇಡೀ ಜಿಲ್ಲೆಯ ಜನರಿಗೆ ಬಹಳಷ್ಟು ಸಹಕಾರಿ ಆಗುವ ಉಪ ನಗರ ರೈಲು ಸಂಚಾರ ಆರಂಭಿಸಲಾಗುವುದು. ಬೆಂಗಳೂರಿನ 57 ರೈಲು ನಿಲ್ದಾಣಗಳನ್ನು ಸಂಪರ್ಕಿಸಬಲ್ಲ ಈ ರೈಲು ಸಂಪರ್ಕ ಯೋಜನೆ ರೇಷ್ಮೆ ನಾಡಿಗೆ ವರದಾನವಾಗಿದೆ. ಒಟ್ಟು ನಾಲ್ಕು ಕಾರಿಡಾರ್‌ಗಳಿದ್ದು ಇಲ್ಲಿಂದಲೇ ರೋಲಿಂಗ್‌ ಸೆಂಟರ್‌ ಸ್ಥಾಪನೆಯಾಗಲಿದೆ ಎಂದು ಡಿಸಿಎಂ ಪ್ರಕಟಿಸಿದರು. ಉಪ ನಗರ ವ್ಯವಸ್ಥೆ ಬರುವುದಿಂದ ಜಿಲ್ಲೆಯಲ್ಲಿ ಉದ್ಯಮವೂ ಸೃಷ್ಟಿ ಹೆಚ್ಚುತ್ತದೆ. ಮುಖ್ಯವಾಗಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುವ ಜನರಿಗೆ ಬಹಳ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.

ಇನ್ನು ರಾಮನಗರದಲ್ಲಿ 190 ಕಿ.ಮೀ ಉದ್ದದ ರಸ್ತೆ ಇದೆ. ಇದರಲ್ಲಿ 150 ಕಿ.ಮೀ ಯಷ್ಟು ರಸ್ತೆ ಡಾಂಬರೀಕರಣಗೊಂಡಿದೆ. ಉಳಿದ 40 ಕಿ.ಮೀ ರಸ್ತೆಯಲ್ಲಿ ಬರೀ ಮಣ್ಣು ಬಿಟ್ಟರೆ ಅಲ್ಲಿ ಏನೂ ಇಲ್ಲ. ಇನ್ನು ಡಾಂಬರು ರಸ್ತೆ ಕೂಡ ಪರಮ ಕಳಪೆ. ಇದೆಲ್ಲವನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಮಾಡಲಾಗುವುದು. ಆಧುನಿಕ ಮಾನದಂಡಗಳ ಪ್ರಕಾರ ಗುಣಮಟ್ಟದ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಕೇಂದ್ರದ ಪ್ರಗತಿಯ ಬಗ್ಗೆ ಬಿಜೆಪಿಯ ಕಾರ್ಯಸೂಚಿಯನ್ನು ಅವರು ವಿವರಿಸಿದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳುವ ಹಾಗೆಯೇ ಇಲ್ಲ. ನಾಲ್ಕು ದಿನಕ್ಕೊಮ್ಮೆ ನೀರು ಬರುತ್ತದೆ. ಆದರೆ, ಪ್ರತಿ ದಿನವೂ, ದಿನದ 24 ಗಂಟೆ ನೀರು ಕೊಡುವ ಯೋಜನೆ ನಮ್ಮದು. ಕೆಲ ದಿನಗಳಲ್ಲಿಯೇ ನದಿಮೂಲಗಳಿಂದ ಪ್ರತಿ ಮನೆಗೂ ಪೈಪುಗಳ ಮೂಲಕ ನೀರೊದಿಗಿಸುವ ಮಹತ್ವಾಕಾಂಕ್ಷೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: