ಮೈಸೂರು: ದಶಕಗಳ ಸುದೀರ್ಘ ಹೋರಾಟದ ಫಲವಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಮಂದಿರ ನಿರ್ಮಾಣಕ್ಕಾಗಿ ದೇಶದ ಬಹುಸಂಖ್ಯಾತರು ದೇಣಿಗೆಯನ್ನೂ ನೀಡಿದ್ದಾರೆ. ಇನ್ನೊಂದೆಡೆ ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ನೀಡಲ್ಲ ಅಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರಲ್ಲೂ ಇಂದು ರಾಮನಮಂದಿರ ಲೋಕಾರ್ಪಣೆಗೊಂಡಿದೆ. ಆದರೆ ಅಯೋಧ್ಯೆಯ ಮಂದಿರಕ್ಕೆ ದೇಣಿಗೆ ನೀಡದ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮೂರಲ್ಲಿ ನಿರ್ಮಾಣವಾದ ರಾಮಂದಿರಕ್ಕೆ ತಾವೇ ಮುಂದಾಳತ್ವ ವಹಿಸಿದ್ದಾರೆ. ದೇಣಿಗೆ ನೀಡಿ ರಾಮಮಂದಿರ ಕಟ್ಟಿಸಿದ್ದರು. ಆದರೆ ಕೋವಿಡ್ ಕಾರಣದಿಂದ ಉದ್ಘಾಟನೆಗೆ ಸಿದ್ದರಾಮಯ್ಯ ಅವರು ಗೈರಾದರು. ಪೂಜೆಯಲ್ಲಿ ಭಾಗಿಯಾಗುವಂತೆ ತಮ್ಮ ಶ್ರೀಮತಿಗೆ ಸೂಚಿಸಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ.
ಹೌದು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ದೇಣಿಗೆ ನೀಡದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತವರೂರಿನಲ್ಲಿ ಇವತ್ತು ರಾಮಮಂದಿರ ಲೋಕಾರ್ಪಣೆ ಮಾಡಲಾಯಿತು. ಮೈಸೂರು ತಾಲೂಕು ಸಿದ್ದರಾಮನಹುಂಡಿ ಗ್ರಾಮದ ಗ್ರಾಮಸ್ಥರು ಸೇರಿ ಸರಳವಾಗಿ ಕಾರ್ಯಕ್ರಮ ಮಾಡುವ ಮೂಲಕ ಜೀರ್ಣೋದ್ಧಾರಗೊಂಡ ನೂತನ ರಾಮಮಂದಿರವನ್ನು ಲೋಕಾರ್ಪಣೆಗೊಳಿಸಿದರು. ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿರುವುದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಗೈರಾಗಿದ್ದರು.
ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಪತ್ನಿ ಪಾರ್ವತಮ್ಮ ಹಾಗೂ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಖ್ಯಾತ ಆಗಮಿಕ ಗಣಪತಿ ನೇತೃತ್ವದಲ್ಲಿ ನಿನ್ನೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಇಂದು ಪುನರ್ ವಸು ನಕ್ಷತ್ರ, ರಾಮ ಹುಟ್ಟಿದ ದಿನವಾದ್ದರಿಂದ ಪ್ರತಿಷ್ಠಾಪನೆ ಕಾರ್ಯ ನಡೆದಿದೆ. ಅದಿವಾಸಿ, ಹವನ, ವಾಸ್ತು ಪೂಜೆ ಕುಂಭಾಭಿಷೇಕ. ಹೋಮ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಇಂದೇ ಒಳ್ಳೆಯ ದಿನವಾದ ಕಾರಣಕ್ಕೆ ರಾಮ ಮಂದಿರ ಲೋಕಾರ್ಪಣೆ ಕಾರ್ಯ ನಡೆಸಲಾಯಿತು ಎಂದು ಆಗಮಿಕರು ಮಾಹಿತಿ ನೀಡಿದರು.
ಇದನ್ನು ಓದಿ: ಸಿಎಂ ಆಸ್ಪತ್ರೆಯಲ್ಲಿದ್ದಾರೆ, ಸರ್ಕಾರ ಐಸಿಯುನಲ್ಲಿದೆ; ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ
ಅಯೋಧ್ಯೆಗೂ ಮುನ್ನ ನಮ್ಮೂರಿನ ರಾಮ ಮಂದಿರ ಲೋಕಾರ್ಪಣೆಗೊಂಡಿರೋದು ಖುಷಿ ತಂದಿದೆ. ನಮ್ಮ ನಾಯಕ ಸಿದ್ದರಾಮಯ್ಯ ಬಂದಿದ್ರೆ ಇನ್ನೂ ಚೆನ್ನಾಗಿರ್ತಿತ್ತು. ಆದರೂ ನಮ್ಮೂರಿನ ರಾಮ ಮಂದಿರ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದೆ. ನಮ್ಮ ದೇಗುಲ ನಿರ್ಮಾಣದಲ್ಲಿ ಯಾವುದೇ ಚೆಕ್ ಬೌನ್ಸ್ ಆಗಿಲ್ಲ. ಭಕ್ತಿ ಭಾವದಿಂದ ಸಿದ್ದರಾಮಯ್ಯ ಸೇರಿದಂತೆ ಭಕ್ತರು ಸಹಕರಿಸಿದ್ದಾರೆ ಎಂದ ಗ್ರಾಮಸ್ಥರು, ಕೋವಿಡ್ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ಯತೀಂದ್ರ ಗೈರಾಗಿದ್ದು ಮುಂದೊಂದು ದಿನ ಬರುವುದಾಗಿ ತಿಳಿಸಿದ್ದಾರೆ ಅಂತ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ