Ram Mandir: ಶ್ರೀರಾಮ ತೋಡಿದ ಹೊಂಡವೀಗ ಪವಿತ್ರ ರಾಮತೀರ್ಥ ಕ್ಷೇತ್ರ; ಸೀತೆ ವಾಸವಿದ್ದ ಮನೆ ಸೀತಿಮನಿ

ಬಾಗಲಕೋಟೆ ಜಿಲ್ಲೆಯಲ್ಲೂ ರಾಮಾಯಣ ಕಾಲದ ಕುರುಹುಗಳನ್ನು ಕಾಣಬಹುದಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶತಮಾನದ ಕನಸು ನನಸಾಗುವ ಸಂದರ್ಭದಲ್ಲಿ ಈ ಭಾಗದಲ್ಲಿನ ಶ್ರೀರಾಮ, ಸೀತೆ, ಲಕ್ಷ್ಮಣ ಬಂದು ಹೋಗಿರುವ ಕುರುಹುಗಳಿಂದ ಇದೀಗ ಜನತೆಯಲ್ಲಿ  ಸಂತಸ  ಮನೆಮಾಡಿದೆ.

ಶ್ರೀರಾಮ ತೀರ್ಥ

ಶ್ರೀರಾಮ ತೀರ್ಥ

  • Share this:
ಬಾಗಲಕೋಟೆ (ಆ,4): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ‌. ರಾಮಾಯಣ ಕಾಲದಲ್ಲಿ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯೊಂದಿಗೂ ನಂಟಿದೆ. ರಾಮಾಯಣ ಕಾಲದಲ್ಲಿ ವನವಾಸಕ್ಕೆ ಬಂದಿದ್ದ ವೇಳೆ ಶ್ರೀರಾಮ, ಲಕ್ಷ್ಮಣ್, ಸೀತೆ, ಬಾಗಲಕೋಟೆ ಜಿಲ್ಲೆಯ ಕೆಲವು ಭಾಗಗಳಿಗೆ ಭೇಟಿ ನೀಡಿರುವ ಕುರುಹುಗಳಿವೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಾಮತೀರ್ಥ, ಹಾಗೂ ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮದಲ್ಲಿರುವ ಕುರುಹುಗಳು ಬಾಗಲಕೋಟೆ ಜಿಲ್ಲೆಯೊಂದಿಗಿನ ನಂಟು ಸಾಕ್ಷೀಕರಿಸುತ್ತಿವೆ.

ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ರಾಮತೀರ್ಥದಲ್ಲಿ ರಾಮ, ಲಕ್ಷ್ಮಣ, ಸೀತಾಮಾತೆ ವನವಾಸಕ್ಕೆ ಬಂದಾಗ ಇಲ್ಲಿಗೆ ಬಂದು  ನೆಲಸಿದ್ದರೆಂಬ ಪ್ರತೀತಿಯಿದೆ. ಬೀಳಗಿ ತಾಲೂಕಿನ ಕಾತರಕಿ, ಕುಂದರಗಿ, ಬಾವಲತ್ತಿ ಗ್ರಾಮಗಳು ಆಗಿನ ಕಾಲದಲ್ಲಿ ಅಪವಿತ್ರವಾಗಿದ್ದವು. ಈ ಭೂಮಿಯನ್ನು ಪವಿತ್ರಗೊಳಿಸಲು ಸೀತಾ ಮಾತೆಯ ಕಣ್ಣೀರಧಾರೆ ಬೇಕಾಗಿತ್ತು. ಅವರು ತೆಗೆದುಕೊಂಡು  ಬಂದಿದ್ದ ಸಾಮಾಗ್ರಿಗಳನ್ನು ನಾನೇಕೆ ಅವುಗಳೆಲ್ಲವನ್ನು ಹೊತ್ತುಕೊಳ್ಳಬೇಕೆಂದು ಲಕ್ಷ್ಮಣ ತಗಾದೆ ತಗೆದನಂತೆ. ಆಗ ಅನಿವಾರ್ಯವಾಗಿ ರಾಮ ಅವುಗಳನ್ನು ಹೊತ್ತುಕೊಂಡನಂತೆ. ಇದನ್ನು ಕಂಡ ಸೀತೆಗೆ ಕಣ್ಣೀರು ಬರಲಾರಂಭಿಸಿ, ಕಣ್ಣೀರಧಾರೆ ಹರಿದು ಭೂಮಿಗೆ ತಾಗಿ ಈ ಭಾಗ ಪವಿತ್ರವಾಯಿತು.

ರಾಮ, ಲಕ್ಷ್ಮಣರ ಬರುವಿಗಾಗಿ ಉಗಲವಾಟ, ಮುಷ್ಟೀಗೇರಿ, ನೀಲಗುಂದ ಭಾಗದಲ್ಲಿರುವ ದಟ್ಟಾರಣ್ಯದಲ್ಲಿ ಋಷಿಮುನಿಗಳು ಕಾಯ್ದು ಕುಳಿತ್ತಿದ್ದರು. ರಾಮ, ಲಕ್ಷ್ಮಣರು ಇಲ್ಲಿಗೆ ಬಂದಾಗ ಬಾಯಾರಿಕೆಯಾಗಿತ್ತು. ಅದನ್ನು ನೀಗಿಸಿಕೊಳ್ಳಲು, ರಾಮ ಕಿರಿದಾದ ಹೊಂಡ ತೆಗೆದು ಬಾಯಾರಿಕೆ ಆರಿಸಿಕೊಂಡರು. ಅಂದಿನಿಂದಿಲೂ ಹೊಂಡ ಪಡೆ (ಕಲ್ಲು)ಯಲ್ಲಿದ್ದರೂ ಎಂದು ಬತ್ತಿಲ್ಲ. ಅಲ್ಲಿ"ರಾಮನು" ತೀರ್ಥ ತಗೆದ ಪ್ರತೀಕವಾಗಿ ರಾಮತೀರ್ಥ ಅಂತ ಹೆಸರು ಬಂದಿದೆಯೆಂದು ಮಹಾರಾಷ್ಟ್ರದ ಭಕ್ತ ಶಿವಯ್ಯನವರು ಹೇಳುತ್ತಾರೆ.

ರಾಮತೀರ್ಥದಲ್ಲಿ ಭಗ್ನಗೊಂಡ ಸಪ್ತ ಮಾತೃಕೆಯರು!

ಹಳೆಯ ಕಾಲದ ಈಶ್ವರ ದೇಗುಲ ನಿಧಿಗಳ್ಳರ ಕಣ್ಣಿಗೆ ಬಿದ್ದು ನಾಶವಾಗಿದೆ. ಇಲ್ಲಿ ಕಂಡು ಬಂದ ಸಪ್ತ ಮಾತೃಕೆಯರು ಭಗ್ನಗೊಂಡು ಮೂಲೆ ಸೇರುವಂತಾಗಿದೆ. ಈಗ ಆ ದೇಗುಲ ಜೀರ್ಣೊದ್ಧಾರಗೊಂಡು ಭಕ್ತರ ಪವಿತ್ರ ಪೂಜಾ ಕ್ಷೇತ್ರವಾಗಿದೆ. ಈ ಸಪ್ತ ಮಾತೃಕೆಯರ ಬಳಿಯ ಕಲ್ಲಿನ ಪೊದೆಯಲ್ಲಿ ಹಾವೊಂದು ವಾಸವಾಗಿ, ಸಪ್ತಮಾತೃಕೆಯರನ್ನು ಹಗಲಿರುಳು ಕಾಯುತ್ತಿದೆ ಎಂದು ನಂಬಲಾಗಿದೆ. ಇಲ್ಲಿ ತೂಗುಯ್ಯಾಲಿಯೂ ಇದೆ. ಭಕ್ತರು ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಲು ಉಯ್ಯಾಲೆಯಾಡುತ್ತಾರೆ.

ಇದೀಗ ರಾಮತೀರ್ಥ ಭಕ್ತರ ಶ್ರದ್ಧಾ ಕೇಂದ್ರ

ನಯನ ಮನೋಹರ, ಹಚ್ಚಹಸಿರಿನ ದಟ್ಟಾರಣ್ಯ ಮಧ್ಯೆ ಕಂಗೊಳಿಸುವ ರಾಮ ತೀರ್ಥವು ಈ ಭಾಗದ ಭಕ್ತರ ಅಚ್ಚುಮೆಚ್ಚಿನ, ಶ್ರದ್ಧಾ ತಾಣವಾಗಿದೆ. ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳು ಇಲ್ಲಿಗೆ ಬಂದು, ಲಿಂಗ ಪ್ರತಿಷ್ಠಾಪನೆ, ವನಮಹೋತ್ಸವಕ್ಕೆ ಚಾಲನೆ ನೀಡಿದ್ದರು. ಶ್ರಾವಣ ಮಾಸದಲ್ಲಿ ರಾಮತೀರ್ಥ ಕ್ಷೇತ್ರವು ಧಾರ್ಮಿಕ ಕಾರ್ಯಗಳಿಗೆ ಸಾಕ್ಷಿಯಾಗುತ್ತದೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಕಾರ್ಯಕ್ರಮಗಳು ನಡೆಯುತ್ತಿಲ್ಲ.

ಸೀತೆ ವಾಸವಾಗಿದ್ದು ಸೀತಿಮನಿ!

ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮ ರಾಮಾಯಣ ಕಾಲದಲ್ಲಿ ಕುರುಹುಗಳಿಗೆ  ಸೀತಾದೇವಿ ಮಂದಿರ, ಸೀತಾಬಾವಿ, ವಾಲ್ಮೀಕಿ ಆಶ್ರಮ, ಕುಶ ಹೊಂಡ ಸಾಕ್ಷಿಯಾಗಿವೆ. ಇಲ್ಲಿ ಲವ ಕುಶರ ಹೆರಿಗೆಯಾಗಿತ್ತು. ಹೀಗಾಗಿ ಹೆರಿಗೆ ಮನೆ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಕುಶ, ಹೊಂಡ, ಭಾವಿ ಎಂಥ ಬರಗಾಲ ಬಂದಾಗಲೂ ಬತ್ತಿಲ್ಲ. ಸೀತಾಮಾತೆ ನೆಲೆಸಿದ್ದಳು ಎನ್ನುವ ಕಾರಣಕ್ಕೆ ಸೀತಾಮಂದಿರ ನಿರ್ಮಿಸಲಾಗಿದೆ. ಸೀತಾ ಮಂದಿರದೊಳಗೆ ಎರಡು ಮೂರ್ತಿಗಳಿದ್ದು, ಒಂದು ಉದ್ಭವ ಮೂರ್ತಿ, ಇನ್ನೊಂದು ಮೂರ್ತಿಯನ್ನು ಭಗ್ನವಾದ ಹಿನ್ನೆಲೆಯಲ್ಲಿ ಪ್ರತಿಷ್ಠಾಪಿಸಲಾಗಿದೆ‌. ಜಿಲ್ಲೆಯಲ್ಲಿ ಹನುಮ, ರಾಮಮಂದಿರ ಹೆಚ್ಚೆಚ್ಚು ನಿರ್ಮಾಣವಾಗಿದ್ದು ಕಂಡುಬಂದರೆ, ಸೀತಾಮಂದಿರ ನಿರ್ಮಾಣ ಕಂಡುಬಂದಿರುವುದು ಸೀತಿಮನಿ ಗ್ರಾಮದಲ್ಲಿಯಷ್ಟೇ ಎನ್ನಲಾಗುತ್ತಿದೆ.

ಇದನ್ನು ಓದಿ: ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ - ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಬಾಗಲಕೋಟೆ ಜಿಲ್ಲೆಯಲ್ಲೂ ರಾಮಾಯಣ ಕಾಲದ ಕುರುಹುಗಳನ್ನು ಕಾಣಬಹುದಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶತಮಾನದ ಕನಸು ನನಸಾಗುವ ಸಂದರ್ಭದಲ್ಲಿ ಈ ಭಾಗದಲ್ಲಿನ ಶ್ರೀರಾಮ, ಸೀತೆ, ಲಕ್ಷ್ಮಣ ಬಂದು ಹೋಗಿರುವ ಕುರುಹುಗಳಿಂದ ಇದೀಗ ಜನತೆಯಲ್ಲಿ  ಸಂತಸ  ಮನೆಮಾಡಿದೆ.
Published by:HR Ramesh
First published: