ರಾಮ ಮಂದಿರದ ಲೆಕ್ಕ ಕೇಳುವ ಮುನ್ನ ರಾಜ್ಯಕ್ಕೆ 2.86 ಲಕ್ಷ ಕೋಟಿ ಸಾಲದ ಹೊರೆಯ ಲೆಕ್ಕ ಕೊಡಿ; ಪ್ರತಾಪ್​ ಸಿಂಹ

ರಾಮಮಂದಿರಕ್ಕೆ ದೇಣಿಗೆ ನೀಡಿದವರು ಲೆಕ್ಕ ಕೇಳೋದ್ರಲ್ಲಿ ಅರ್ಥವಿದೆ. ಆದ್ರೆ ಒಂದು ರೂಪಾಯಿಯನ್ನು ದೇಣಿಗೆ ನೀಡದ ಸಿದ್ದರಾಮಯ್ಯನವರು ಅದ್ಯಾವ ಅರ್ಥದಲ್ಲಿ ಲೆಕ್ಕ ಕೇಳ್ತಿದ್ದಾರೆ ಎಂದು ಸಂಸದ ಪ್ರತಾಪ್​ ಸಿಂಹ ಪ್ರಶ್ನಿಸಿದ್ದಾರೆ.

ಸಂಸದ ಪ್ರತಾಪ್​ ಸಿಂಹ.

ಸಂಸದ ಪ್ರತಾಪ್​ ಸಿಂಹ.

  • Share this:
ಮೈಸೂರು (ಫೆಬ್ರವರಿ 22); ಮುಖ್ಯಮಂತ್ರಿಯಾಗಿ 5 ವರ್ಷ ಆಡಳಿತ ನೀಡಿದ ತಮ್ಮ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ 2.86 ಲಕ್ಷ ಕೋಟಿ ಸಾಲದ ಹೊರೆ‌ ನೀಡಿದ ಲೆಕ್ಕವನ್ನ ಕೊಡಿ, ಆ ನಂತರ ರಾಮಮಂದಿರದ ಲೆಕ್ಕ ಕೇಳಿ ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯಗೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಟಾಂಗ್ ನೀಡಿದ್ದಾರೆ. ರಾಜ್ಯದಲ್ಲಿ ಕಳೆದೊಂದು ವಾರದಿಂದ ರಾಮಮಂದಿರದ ಲೆಕ್ಕದ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಯಲ್ಲಿ, ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹ, "ನೀವು ನಿಮ್ಮೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೀರಿ, ಅದರ ಅಂದಾಜು ಎಷ್ಟು ಅಂತ ಲೆಕ್ಕ ಕೇಳಿದ ಪತ್ರಕರ್ತರಿಗೆ, ನೀವು ನಾನು ಲೆಕ್ಕ ಕೊಡಲ್ಲ ಅಂತ ಹೇಳಿದ್ದೀರಿ.  ಆದ್ರೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಲೆಕ್ಕ ಮಾತ್ರ ಕೇಳ್ತಿರಾ? ಇದೇಂತ ದ್ವಂದ್ವ ನಡೆ ನಿಮ್ಮದು" ಎಂದು ಸಿದ್ದರಾಮಯ್ಯನವರನ್ನ ಪ್ರತಾಪ್‌ಸಿಂಹ ಪ್ರಶ್ನಿಸಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಬರುವ ಮುನ್ನ ರಾಜ್ಯ ಬೊಕ್ಕಸದ ಒಟ್ಟು ಸಾಲ 1 ಲಕ್ಷ ಕೋಟಿ ಇತ್ತು. ನೀವು ಬಂದು 5 ವರ್ಷ ಆಡಳಿತ ಮಾಡಿ ವಾಪಾಸ್‌ ಹೋಗುವಷ್ಟರಲ್ಲಿ, ಅದನ್ನ 2.86 ಲಕ್ಷ ಕೋಟಿಗೆ ಏರಿಕೆ ಮಾಡಿದ್ದೀರಿ, ನಿಮ್ಮ ಅವಧಿಯಲ್ಲಿ ಮಾಡಿದ 1.86 ಲಕ್ಷ ಕೋಟಿ ಸಾಲದ ಹಣ ಎಲ್ಲಿಗೆ ಹೋಯ್ತು, ಅಷ್ಟು ಹಣವನ್ನ ಯಾವುದಕ್ಕೆ ಖರ್ಚು ಮಾಡದ್ರಿ? ಅಥವ ಯಾವುದಕ್ಕೆ ದುರುಪಯೋಗ ಮಾಡಿದ್ರಿ ಅಂತ ಹೇಳಿ, ಆಮೇಲೆ ಅಯೋಧ್ಯೆಯ ರಾಮಮಂದಿರದ ಲೆಕ್ಕ ಕೇಳಿ ಎಂದು ಸಿದ್ದು ವಿರುದ್ದ ವಾಗ್ದಾಳಿ ನಡೆಸಿದರು.

ರಾಮಮಂದಿರಕ್ಕೆ ದೇಣಿಗೆ ನೀಡಿದವರು ಲೆಕ್ಕ ಕೇಳೋದ್ರಲ್ಲಿ ಅರ್ಥವಿದೆ. ಆದ್ರೆ ಒಂದು ರೂಪಾಯಿಯನ್ನು ದೇಣಿಗೆ ನೀಡದ ಸಿದ್ದರಾಮಯ್ಯನವರು ಅದ್ಯಾವ ಅರ್ಥದಲ್ಲಿ ಲೆಕ್ಕ ಕೇಳ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರ ಹೆಸರಲ್ಲೆ ರಾಮನಿದ್ದಾನೆ, ಅವರ ಊರಿನಲ್ಲು ರಾಮಮಂದಿರ ಕಟ್ಟಿಸುತ್ತಿದ್ದಾರೆ‌, ಹಾಗಾಗಿ ಅವರು ಮುಸ್ಲಿಂಮರನ್ನ ಓಲೈಸೋದಕ್ಕೆ ಸುಮ್ಮನೆ ಹೇಳಿಕೆ‌ ಕೊಡ್ತಾರೆ. ಅವರ ಹೇಳಿಕೆಗಳನ್ನ ಗಂಭೀರವಾಗಿ ತೆಗೆದುಕೊಳ್ಳಬೇಡಿ ಅಂತ ಪತ್ರಕರ್ತರಿಗೆ ಪ್ರತಾಪ್‌ಸಿಂಹ ಸಲಹೆ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್ ನೇತೃತ್ವದ ಪುದುಚೇರಿ ಸರ್ಕಾರ ಪತನ; ಬಹುಮತ ಪರೀಕ್ಷೆಯಲ್ಲಿ ಸಿಎಂ ನಾರಾಯಣಸ್ವಾಮಿಗೆ ಸೋಲು

ರಾಮಮಂದಿರಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಬಿಜೆಪಿ ಆರ್‌ಎಸ್ಎಸ್‌ ಕಾರ್ಯಕರ್ತರ ನಡೆಯನ್ನ ಪ್ರಶ್ನಿಸಿ, ರಾಜ್ಯದಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೇಳಿದ್ದ ಸಿದ್ದರಾಮಯ್ಯ ವಿರುದ್ದ ಬಿಜೆಪಿಯ ನಾಯಕರು ಒಬ್ಬೋಬ್ಬರಾಗಿ ಮಾತಿನ ದಾಳಿ ಆರಂಭಿಸಿದ್ದು, ವಾರದಿಂದ ಸುಮ್ಮನಿದ್ದ ಪ್ರತಾಪ್‌ಸಿಂಹ ಇಂದು ಸಿದ್ದು ವಿರುದ್ದ ವಾಗ್ದಾಳಿ ನಡೆಸಿ, ಲೆಕ್ಕ ಕೇಳಿದ್ದ ಸಿದ್ದರಾಮಯ್ಯರನ್ನೆ ಸಾಲದ ಲೆಕ್ಕ ಕೇಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡದ್ದಾರೆ.

ಈ ಮೊದಲು ಸಚಿವರಾದ ಆರ್.ಅಶೋಕ್, ಈಶ್ವರಪ್ಪ ಸೇರಿದಂತೆ ಹಲವರು ಸಿದ್ದು ವಿರುದ್ದ ವಾಗ್ದಾಳಿ ಮಾಡಿದ್ದರು. ಇದೀಗ ಆ ಸಾಲಿಗೆ ಪ್ರತಾಪ್‌ಸಿಂಹ ಸೇರಿದ್ದು, ಇಷ್ಟು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಒಬ್ಬರೆ ತಲೆನೋವಾಗಿ ಪರಿಣಮಿಸಿದ್ದಾರೆ. ಬಿಜೆಪಿ ನಾಯಕರ ಈ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅದ್ಯಾವ ಉತ್ತರ ನೀಡ್ತಾರೆ ಅನ್ನೋದೆ ಇದೀಗ ಮೂಡಿರುವ ಕುತೂಹಲವಾಗಿದೆ.
Published by:MAshok Kumar
First published: