• Home
  • »
  • News
  • »
  • district
  • »
  • ಗುಂಡ್ಲುಪೇಟೆಯಲ್ಲಿ ಕಾಮಗಾರಿ ಮಾಡದೆ ಶಾಸಕರ ಅನುದಾನ ದುರ್ಬಳಕೆ: ರೈತಸಂಘ ಗಂಭೀರ ಆರೋಪ

ಗುಂಡ್ಲುಪೇಟೆಯಲ್ಲಿ ಕಾಮಗಾರಿ ಮಾಡದೆ ಶಾಸಕರ ಅನುದಾನ ದುರ್ಬಳಕೆ: ರೈತಸಂಘ ಗಂಭೀರ ಆರೋಪ

ರೈತ ಸಂಘದ ನಾಯಕರು

ರೈತ ಸಂಘದ ನಾಯಕರು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶಾಸಕರ ಅನುದಾನವನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನಮ್ಮ ಬಳಿ ಇದಕ್ಕೆ ದಾಖಲೆಗಳಿವೆ. ಶಾಸಕರು ಬಹಿರಂಗ ಚರ್ಚೆ ಬರಲಿ ಎಂದು ರೈತ ಸಂಘದ ನಾಯಕರು ಶಾಸಕ ನಿರಂಜನ್ ಕುಮಾರ್ಗೆ ಸವಾಲು ಹಾಕಿದ್ದಾರೆ.

  • Share this:

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ದುರ್ಬಳಕೆ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆಲವೆಡೆ ಕೆಲಸವನ್ನೇ ಮಾಡದೆ ಬಿಲ್ ಪಾಸ್ ಮಾಡಿಕೊಂಡಿದ್ದರೆ ಇನ್ನೂ ಕೆಲವೆಡೆ ಅರ್ಧಂಬರ್ಧ ಕೆಲಸ ಮಾಡಿ ಹಣ ಲಪಟಾಯಿಸಲಾಗಿದೆ. ಅಲ್ಲದೆ ಕಳಪೆ ಕಾಮಗಾರಿ ಮಾಡಿ ಹಣ ಭ್ರಷ್ಟಾಚಾರ ಎಸಗಲಾಗಿದೆ ಎಂದು ಜಿಲ್ಲಾ ರೈತ ಸಂಘ ಆಪಾದಿಸಿದೆ.


ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 89 ಲಕ್ಷ ರೂಪಾಯಿ ಹಾಗು ಮುಖ್ಯಮಂತ್ರಿಗಳ ನಿಧಿಯಿಂದ 61 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆದರೆ ಕೆಲವೆಡೆ ಕಾಮಗಾರಿಯನ್ನೇ ಮಾಡದೆ ಅನುದಾನ ದುರುಪಯೋಗ ಮಾಡಿಕೊಳ್ಳಲಾಗಿದೆ. ಇನ್ನೂ ಕೆಲವೆಡೆ ಕಾಮಗಾರಿ ಅಪೂರ್ಣವಾಗಿದ್ದರೂ ಬಿಲ್ ಪಾಸ್ ಮಾಡಲಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಮಾಡ್ರಳ್ಳಿ ಮಹದೇವಪ್ಪ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ.


ಇದನ್ನೂ ಓದಿ: ಕೇರಳದಲ್ಲಿ ವಿಜಯಯಾತ್ರೆ ಬಳಿಕ ಮಂಗಳೂರಿನ ಮಠಕ್ಕೆ ಯೋಗಿ ಆದಿತ್ಯನಾಥ್ ಭೇಟಿ


ಉದಾಹರಣೆಗೆ ಹಸಗೂಲಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ, ಮಾಡ್ರಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಭೌತಿಕವಾಗಿ ಪೂರ್ಣಗೊಂಡಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಆದರೆ ಇಲ್ಲಿ ಕಾಮಗಾರಿಯೇ ನಡೆದಿಲ್ಲ. ತೆರಕಣಾಂಬಿಯಲ್ಲಿ ರಸ್ತೆ ಅಭಿವೃದ್ಧಿ, ಶಿವಪುರದಲ್ಲಿ ರಸ್ತೆ ಅಭಿವೃದ್ಧಿ ಭೌತಿಕವಾಗಿ ಪೂರ್ಣಗೊಂಡಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದ್ದರೂ ಇಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ. 200 ಮೀಟರ್ ರಸ್ತೆ ಅಭಿವೃದ್ಧಿ ಮಾಡುವ ಕಡೆ ಕೇವಲ 100 ಮೀಟರ್ ಮಾಡಲಾಗಿದೆ. 100 ಮೀಟರ್ ಮಾಡಬೇಕಾದ ಕಡೆ ಕೇವಲ 50 ಮೀಟರ್ ರಸ್ತೆ ಕೆಲಸ ಮಾಡಲಾಗಿದೆ. ಹೀಗೆ ಕ್ಷೇತ್ರದ ಬಹುತೇಕ ಕಡೆ ಅಕ್ರಮವಾಗಿ ಬಿಲ್ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.


ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ಶಾಸಕ ನಿರಂಜನ್ ಕುಮಾರ್ ಅವರ ಹಿಂಬಾಲಕರು ನಮ್ಮ ಮೇಲೆ ರೌಡಿಸಂ ಮಾಡುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನಮ್ಮನ್ನು ತೇಜೋವಧೆ ಮಾಡುವ ಪೋಸ್ಟ್ ಗಳನ್ನು ಹಾಕುತ್ತಾರೆ. ರೈತ ಸಂಘದ ಕಾರ್ಯಕರ್ತರನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ. ಗುರುಪ್ರಸಾದ್ ಕಿಡಿಕಾರಿದ್ದಾರೆ.


ಇದನ್ನೂ ಓದಿ: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಪ್ಪಾಂಗುಚ್ಚಿ ಡ್ಯಾನ್ಸ್; ವಿಡಿಯೋ ಸಖತ್ ವೈರಲ್


“ನಾವು ಕಾಮಗಾರಿಗಳ ಲೋಪದೋಷಗಳನ್ನು ಎತ್ತಿಹಿಡಿದಿದ್ದೇವೆ. ಅನುದಾನ ಬಿಡುಗಡೆ ಮಾಡಿದ್ದೇನೆ, ಆದರೆ ಅನುಷ್ಠಾನ ಬಿಡುಗಡೆ ಮಾಡುವುದು ನನ್ನ ಕೆಲಸವಲ್ಲ ಎಂದು ಶಾಸಕ ನಿರಂಜನ್ ಕುಮಾರ್ ಬೇಜವ್ದಾರಿ ಹೇಳಿಕೆ ನೀಡುತ್ತಾರೆ. ಅನುದಾನ ಬಿಡುಗಡೆ ಮಾಡಿದ ಮೇಲೆ ಆ ಕೆಲಸ ಆಗಿದೆಯೋ ಇಲ್ಲವೋ ಎಂಬುದನ್ನು ಪರಾಮರ್ಶೆ ಮಾಡಬೇಕಾದದ್ದು ಶಾಸಕರ ಜವಾಬ್ದಾರಿ. ಆದರೆ ಇಲ್ಲಿ ಶಾಸಕ ನಿರಂಜನ್ ಕುಮಾರ್ ಇದ್ಯಾವುದನ್ನು ಮಾಡದೆ ರೈತ ಸಂಘದ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಅಪಾದಿಸಿದ್ದಾರೆ.


ಕಾಮಗಾರಿ ಮಾಡದೆ ಹೇಗೆ ಭ್ರಷ್ಠಾಚಾರ ಮಾಡಲಾಗಿದೆ, ಎಲ್ಲೆಲ್ಲಿ ಅರ್ಧ ಕೆಲಸ ಮಾಡಲಾಗಿದೆ, ಹೇಗೆ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದಾಖಲೆ ಸಮೇತ ಸಾಬೀತು ಪಡಿಸುತ್ತೇವೆ, ಶಾಸಕರು ಬಹಿರಂಗ ಚರ್ಚೆಗೆ ಬರಲಿ, ಬಹಿರಂಗ ಚರ್ಚೆಗೆ ಅವರೇ ವೇದಿಕೆ ಕಲ್ಪಿಸಲಿ ಎಂದು ಡಾ ಗುರುಪ್ರಸಾದ್ ಸವಾಲು ಹಾಕಿದ್ದಾರೆ.


ವರದಿ: ಎಸ್.ಎಂ.ನಂದೀಶ್

Published by:Vijayasarthy SN
First published: