ಹಾಸನ; ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಹಾಸನದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಚನ್ನಪಟ್ಟಣ ವೃತ್ತದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿ, ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರವು 1961ರ ಭೂ ಸುಧಾರಣೆ ಕಾಯ್ದೆಯ 79ಎ,ಬಿ.ಸಿ. ಮತ್ತು 80ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸಿದೆ ಹಾಗೂ 63ನೇ ಕಲಂಗೆ ತಿದ್ದುಪಡಿ ತಂದಿದೆ. ಕೃಷಿಯೇತರ ಮೂಲಗಳಿಂದ ಹೆಚ್ಚು ಆದಾಯ ಉಳ್ಳವರು ಹಾಗೂ ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ಕಬಳಿಸದಂತೆ ಈ ಕಾಯ್ದೆ ರಕ್ಷಣೆ ಒದಗಿಸುತ್ತಿತ್ತು. 79 ಸಿ ಕಲಂ ತಾವು ನೈಜ ರೈತರೆಂದು ಸರಿಯಾದ ಪ್ರಮಾಣಪತ್ರ ಒದಗಿಸದೆ ಜಮೀನನ್ನು ಕೊಂಡವರಿಗೆ ದಂಡ ವಿಧಿಸುವ ಅವಕಾಶವನ್ನು ಒದಗಿಸುತ್ತಿತ್ತು. 79ನೇ ಕಲಂ ರೈತರಲ್ಲದವರಿಗೆ ಕೃಷಿ ಭೂಮಿ ಮಾರುವುದನ್ನು ನಿಷೇಧಿಸಿತ್ತು.
63ನೇ ಕಲಂ ಕೃಷಿ ಹಿಡುವಳಿಯ ಮೇಲ್ಮಿತಿಯು ಐವರಿಗಿಂತ ಹೆಚ್ಚು ಜನರಿರುವ ಕುಟುಂಬಕ್ಕೆ 20 ಯೂನಿಟ್ಗಿಂತ ಹೆಚ್ಚಿರಬಾರದೆಂದು ನಿಷೇಧಿಸಿತ್ತು. ಅಂದರೆ ಕೃಷಿ ಭೂಮಿಯ ವರ್ಗೀಕರಣವನ್ನು ಆಧರಿಸಿ ಒಂದು ಕೃಷಿ ಕುಟುಂಬವು ಸರಾಸರಿ 48ರಿಂದ1 108 ಎಕರೆಗಳಿಗಿಂತ ಹೆಚ್ಚು ಭೂಮಿ ಹೊಂದಿರಬಾರದೆಂಬ ಮಿತಿಯನ್ನು ವಿಧಿಸಿದೆ. ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಈಗ ಧನಾಡ್ಯರು ಮತ್ತು ದೊಡ್ಡ ಕೃಷಿ ಬಹುರಾಷ್ಟ್ರೀಯ ಕಂಪೆನಿಗಳು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು. ಸಣ್ಣ ರೈತಾಪಿಗಳು ಇನ್ನಷ್ಟು ವ್ಯವಸ್ಥಿತವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ. ಕೇಂದ್ರ ಸರ್ಕಾರವು ಜಾರಿ ಮಾಡಿರುವ ಕೃಷಿ ಮಾರುಕಟ್ಟೆ ಸಂಬಂಧಿತ ಮೂರು ಸುಗ್ರೀವಾಜ್ಞೆಗಳು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಂಪೂರ್ಣವಾಗಿ ದೊಡ್ಡ ದೊಡ್ಡ ಬಂಡವಾಳ ಹೂಡಿಕೆಗೆ ತೆರೆದಿಟ್ಟಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಸ್ತಾಪಿಸಿರುವ ವಿದ್ಯುತ್ ಸುಧಾರಣೆಗಳು, ವಿದ್ಯುತ್ ವಲಯದಲ್ಲಿನ ಇಡೀ ಉತ್ಪಾದನೆ, ಪ್ರಸರಣೆ ಹಾಗೂ ಸರಬರಾಜು ವ್ಯವಸ್ಥೆಗಳನ್ನು ಲಾಭಕೋರ ಕಾರ್ಪೋರೇಟ್ ಬಂಡವಾಳ ಸಂಸ್ಥೆಗಳಿಗೆ ಪರಭಾರೆ ಮಾಡುವ ಇರಾದೆ ಹೊಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈವರೆಗೆ ರೈತಾಪಿ ಜನರಿಗೆ ನೀಡುತ್ತಿದ್ದ ವಿದ್ಯುತ್ ರಿಯಾಯಿತಿಗಳೆಲ್ಲವನ್ನೂ ರದ್ದುಪಡಿಸುವ ಪರೋಕ್ಷ ಪ್ರಸ್ತಾಪವನ್ನೂ ಹೊಂದಿದೆ . ಕೋವಿಡ್ ಸಂಕಷ್ಟಗಳ ನಡುವೆ ಕೇಂದ್ರ ಸರ್ಕಾರವು ಇತ್ತೀಚೆಗೆ 14 ಬೆಳೆಗಳಿಗೆ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಗಳು ಕಳೆದ ವರ್ಷ ಘೋಷಿಸಿದ ಬೆಲೆಗಿಂತ ಕಡಿಮೆಯಾಗಿರುವುದೂ ಸಹ ಆಕಸ್ಮಿಕವಲ್ಲ. ವಾಸ್ತವದಲ್ಲಿ ಅದು ರೈತರಿಗೆ ಕೊಡುತ್ತಿದ್ದ ಬೆಂಬಲದ ಹಿಂತೆಗೆತದ ಘೋಷಣೆಯಾಗಿದೆ. ಕೋವಿಡ್ ಸಂಕಷ್ಟಗಳಲ್ಲೂ ಸರ್ಕಾರವು ರೈತರ ಸಹಾಯಕ್ಕೆ ಬರಲಾಗದೆಂದು ಕೊಟ್ಟಿರುವ ಸಂದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಹಣ-ಆಸ್ತಿ ಮುಂದೆ ಮರೆಯಾಯ್ತು ಮಾನವೀಯತೆ; ಪುತ್ತೂರಿನ ಕುಟುಂಬವೊಂದರ ಕರುಣಾಜನಕ ಕಥೆ!
ಇದು ಸಾರಾಂಶದಲ್ಲಿ ಬಡ ಮಧ್ಯಮ ರೈತಾಪಿಗಳು ಕೃಷಿಯಲ್ಲಿ ಮುಂದುವರೆಯುವುದು ಇನ್ನಷ್ಟು ದುಸ್ತರಗೊಳ್ಳಲಿದೆ. ಅಷ್ಟು ಮಾತ್ರವಲ್ಲ, ನೀತಿ ಆಯೋಗವು ಎರಡು ವರ್ಷಗಳಿಗೆ ಮುಂಚೆ ಪ್ರಸ್ತಾಪಿಸಿದ ಹೊಸ ಗೇಣಿ ನೀತಿಯು ಸಹ ಮೋದಿ ಸರ್ಕಾರವು ಜಾರಿ ಮಾಡ ಬಯಸಿರುವ ಗುತ್ತಿಗೆ ಆಧಾರಿತ ಕೃಷಿ ನೀತಿಯ ಭಾಗವೇ ಆಗಿದೆ. ಸರ್ಕಾರದ ನೀತಿಗಳಿಂದ ಕಂಗೆಟ್ಟು ರೈತಾಪಿಗಳೇ ಸ್ವಯಂ ಪ್ರೇರಿತರಾಗಿ ಬೇಸಾಯ ಬಿಡುವಂತೆ ಮಾಡಿದ ನಂತರ ಕಾಂಟ್ಯಾಕ್ಟ್ ಫಾರ್ಮಿಂಗ್ ಕಂಪೆನಿಗಳು ಅವರಿಂದ ಸುಲಭ ದರದಲ್ಲಿ ಗೇಣಿಗೆ ಭೂಮಿಯನ್ನು ಪಡೆದುಕೊಳ್ಳುವುದು ಮೋದಿ ಸರ್ಕಾರದ ಈ ಹೊಸ ಗೇಣಿ ನೀತಿಯ ಸಾರ, ಕೃಷಿ ಭೂಮಿಯನ್ನು ಸುಲಭವಾಗಿ ಪಡೆದುಕೊಳ್ಳಲು ಅನುವಾಗುವಂತೆ, ಭೂ ಹಿಡುವಳಿ ಕಾನೂನುಗಳಲ್ಲಿ ತಿದ್ದುಪಡಿ ತರಲಾಗಿದೆ. ಈ ಭೂ ಸುಧಾರಣೆ ತಿದ್ದುಪಡಿಗಳು, ಎ.ಪಿ.ಎಂ.ಸಿ. ತಿದ್ದುಪಡಿಗಳು, ಎಂ.ಎಸ್.ಪಿ. ನೀತಿಗಳು ಹೊಸ ವಿದ್ಯುತ್ ನೀತಿ ಪ್ರಸ್ತಾಪದಲ್ಲಿರುವ ಹೊಸ ಬೀಜ ನೀತಿಯಾಗಿದೆ ಎಂದು ದೂರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ