HOME » NEWS » District » RAIN WAS STOP IN UTTARA KANNADA DISTRICT BUT FLOOD WILL CONTINUE RH

ಉತ್ತರ ಕನ್ನಡ ಜಿಲ್ಲೆಯಲ್ಲಿ ತಗ್ಗಿದ ಮಳೆ, ಬಗ್ಗದ ನೆರೆ; ಪ್ರವಾಹ ಹರಿಸಿದ ನದಿ ಹರಿವಿನ ಆರ್ಭಟ ಮುಂದುವರಿಕೆ

ಇವತ್ತಿನ ಸ್ಥಿತಿ ನೋಡಿದರೆ ಮುಂದಿನ ಎರಡು ದಿನ ಪ್ರವಾಹ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಇನ್ನು‌ ಮುಂದಿನ ಎರಡು ದಿನ ಮಳೆ ಆಗುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಲಭಿಸಿದ್ದು, ಮುಂದೇನು ಅವಘಡ ಕಾದಿದೆಯೋ ಎನ್ನುವುದು ಜನರ ಆತಂಕವಾಗಿದೆ.

news18-kannada
Updated:August 11, 2020, 4:44 PM IST
ಉತ್ತರ ಕನ್ನಡ ಜಿಲ್ಲೆಯಲ್ಲಿ ತಗ್ಗಿದ ಮಳೆ, ಬಗ್ಗದ ನೆರೆ; ಪ್ರವಾಹ ಹರಿಸಿದ ನದಿ ಹರಿವಿನ ಆರ್ಭಟ ಮುಂದುವರಿಕೆ
ದಕ್ಷಿಣ ಕನ್ನಡ ಜಿಲ್ಲೆಯ ಊರುಕೇರಿ ಗ್ರಾಮ ಪ್ರವಾಹದಿಂದ ಜಲಾವೃತವಾಗಿರುವುದು.
  • Share this:
ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ ಈಗ ಕೊಂಚ ತಣ್ಣಗಾಗಿದೆ. ಮಳೆ ಏನೋ ತಣ್ಣಗಾಯ್ತು, ಆದರೆ ಮಳೆಯಿಂದ  ಹುಚ್ಚೆದ್ದು ಕುಣಿದ ನದಿಗಳ ಪ್ರವಾಹ ಇನ್ನು ಶಾಂತವಾಗಿಲ್ಲ. ನದಿ ಪ್ರವಾಹಕ್ಕೆ ಸಿಕ್ಕ ಜನರ ಸಮಸ್ಯೆ ಮಾತ್ರ ಬೆಟ್ಟದಷ್ಟಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನದಿಂದ ಭಾರೀ ಮಳೆ ಆಗುತ್ತಿದೆ. ಒಂದು ದಿನ‌ ವಿರಾಮ ನೀಡಿದ್ದ ಮಳೆ ಮತ್ತೆ ತನ್ನ ರೌದ್ರಾವತಾರದೊಂದಿಗೆ ಕರುಣೆ ಇಲ್ಲದಂತೆ ಜನರನ್ನು ನರಕಯಾತನೆಗೆ ದೂಡಿದೆ. ನೆನ್ನೆ ಏಕಾಏಕಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಕುಮಟಾ ತಾಲೂಕಿನ ಗ್ರಾಮೀಣ ಭಾಗ ಶರಾವತಿ ನದಿ ಪ್ರವಾಹಕ್ಕೆ ಸಿಲುಕಿ ಮುಳುಗಡೆ ಭಿತಿ ಎದುರಿಸಿದ್ದವು. ಜತೆಗೆ ಕುಮಟಾ ತಾಲ್ಲೂಕಿನ ಊರುಕೇರಿ ಸೇರಿ ಅಕ್ಕಪಕ್ಕದ ಗ್ರಾಮಗಳು ಮುಳುಗಡೆ ಆಗಿವೆ. ಕೆಲವು ಕಡೆ ಪ್ರವಾಹ ತಗ್ಗಿದೆ. ಮಳೆಯೂ ತಗ್ಗಿದೆ. ಆದರೆ ಊರು ಕೇರಿ ಎನ್ನುವ ಗ್ರಾಮದಲ್ಲಿ ಇನ್ನು ಕೂಡ ಪ್ರವಾಹ ಇಳಿಯದೆ ಜನ ಕಂಗಾಲಾಗಿದ್ದಾರೆ. ಮನೆ ಮಠ ಬಿಟ್ಟು ಬಂದ ಕುಟುಂಬಸ್ಥರು ಕಾಳಜಿ ‌ಕೇಂದ್ರ ಸೇರಿಕೊಂಡಿದ್ದು, ಮನೆಯಲ್ಲಿದ್ದ ಸಾಮಾನು ಸರಂಜಾಮು ಪ್ರವಾಹದ ನೀರಿಗೆ ಕೊಚ್ಚಿ ಹೋಗಿವೆ. ಜೀವ ಉಳಿದರೆ ಸಾಕು ಎಂದು ಇಲ್ಲಿನ ನಿರಾಶ್ರಿತರು ತಮ್ಮ ಮಕ್ಕಳು ಮರಿಯನ್ನು ಕಟ್ಟಿಕೊಂಡು ಕಾಳಜಿ ಕೇಂದ್ರ ಸೇರಿಕೊಂಡಿದ್ದಾರೆ. ಊರು ಕೇರಿ ಗ್ರಾಮದಲ್ಲಿ ಮಳೆ ನಿಂತರೂ ಪ್ರವಾಹ ಮಾತ್ರ ಮುಂದುವರೆದಿದೆ.

ಇನ್ನೂ ಕುಮಟಾ ಮತ್ತು ಹೊನ್ನಾವರ ತಾಲ್ಲೂಕಿನ ಸುತ್ತಮುತ್ತ ಶರಾವತಿ ನದಿಯ ಉಪನದಿ ಬಡಗಣಿ ನದಿ ತುಂಬಿ ಉಕ್ಕಿ ಹರಿದ ಪರಿಣಾಮ ಪ್ರವಾಹ ಸಂಭವಿಸಿದೆ. ಸಾವಿರಾರು ಎಕರೆ ಕೃಷಿ ಭೂಮಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಇದನ್ನು ಓದಿ: ಈ 10 ರಾಜ್ಯಗಳಲ್ಲಿ ಕೊರೋನಾ ನಿಯಂತ್ರಿಸಿದರೆ ಇಡೀ ದೇಶ ಕೋವಿಡ್ ಹೋರಾಟದಲ್ಲಿ ಗೆದ್ದಂತೆ; ಪ್ರಧಾನಿ ಮೋದಿ

ಒಮ್ಮೆಲೆ ಎರಗಿ ಬಂದ ಪ್ರವಾಹದಿಂದ ಜೀವ ಉಳಿಸಿಕೊಳ್ಳುವುದೇ ಒಂದು ಸವಾಲಾಯಿತು ಅಂತಾರೆ ಸಂತ್ರಸ್ತರು. ಸುಮಾರು 45 ಮನೆಗಳಿಗೆ ನೀರು ತುಂಬಿ ಮನೆ ಕಡೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ. ಇವತ್ತಿನ ಸ್ಥಿತಿ ನೋಡಿದರೆ ಮುಂದಿನ ಎರಡು ದಿನ ಪ್ರವಾಹ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಇನ್ನು‌ ಮುಂದಿನ ಎರಡು ದಿನ ಮಳೆ ಆಗುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಲಭಿಸಿದ್ದು, ಮುಂದೇನು ಅವಘಡ ಕಾದಿದೆಯೋ ಎನ್ನುವುದು ಜನರ ಆತಂಕವಾಗಿದೆ.
Published by: HR Ramesh
First published: August 11, 2020, 4:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories