ಹುಬ್ಬಳ್ಳಿ; ದೇಶದಲ್ಲಿ ಕೊರೋನಾ ಎರಡನೆ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಇದು ಆತಂಕ ಸೃಷ್ಟಿಸುವಂತೆ ಮಾಡಿದೆ. ಕರ್ನಾಟಕದಲ್ಲಿ ಕೊರೋನಾ ಎರಡನೆಯ ಅಲೆ ಅಬ್ಬರ ಹೆಚ್ಚಾಗಿದ್ದು, ಕೆಲವೆಡೆ ಬೆಡ್ ಗಳು ಸಿಗದೆ ರೋಗಿಗಳು ತತ್ತರಿಸುವಂತಾಗಿದೆ. ಕಲಬುರ್ಗಿ ಜಿಲ್ಲೆ ಮತ್ತೆ ಕೆಲವೆಡೆ ಬೆಡ್ ಗಳಿಲ್ಲದೆ ರೋಗಿಗಳು ಆಸ್ಪತ್ರೆ ಎದುರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಡ್ ಗಳ ಕೊರತೆ ನೀಗಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಕಳೆದ ವರ್ಷದ ಮಾದರಿಯಲ್ಲಿ ಐಸೋಲೇಷನ್ ಬೋಗಿಗಳು ಮತ್ತೆ ಅಸ್ತಿತ್ವಕ್ಕೆ ತರಲು ರೈಲ್ವೆ ಇಲಾಖೆ ಮುಂದಾಗಿದೆ. ನೈರುತ್ಯ ರೈಲ್ವೆ ವಲಯದಿಂದ ಕಳೆದ ವರ್ಷ ಕೊರೋನಾ ಕಾಣಿಸಿಕೊಂಡ ಸಂದರ್ಭದಲ್ಲಿ ಸುಮಾರು 312 ಐಸೋಲೇಶನ್ ಬೋಗಿ ರೂಪಿಸಲಾಗಿತ್ತು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಐಸೋಲೇಷನ್ ಬೋಗಿಗಳನ್ನು ಇಡಲಾಗಿತ್ತು. ನಂತರ ಐಸೋಲೇಶನ್ ಬೋಗಿಗಳನ್ನು ಚಿಕಿತ್ಸೆಗೆ ಅಗತ್ಯವಿರೋ ಬೇರೇ ಬೇರೆ ಕಡೆ ಕಳಿಸಲಾಗಿತ್ತು. ಕೊರೋನಾ ಅಬ್ಬರ ಕಡಿಮೆಯಾದ ಸಂದರ್ಭದಲ್ಲಿ ಐಸೋಲೇಷನ್ ಬೋಗಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಇದೀಗ ಮತ್ತೆ ರಾಜ್ಯ ಸೇರಿ ದೇಶದ ಹಲವೆಡೆ ಬೆಡ್ ಗಳ ಕೊರತೆ ಎದುರಾಗಿದೆ. ಅದರಲ್ಲಿಯೂ ವೆಂಟಿಲೇಟರ್ ಗಳ ಸಮಸ್ಯೆ ತೀವ್ರಗೊಂಡಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಹಲವಾರು ಜೀವಗಳು ಬಲಿಯಾಗಲಾರಂಭಿಸಿವೆ. ಇದೀಗ ಮತ್ತೆ ಐಸೋಲೇಷನ್ ಬೋಗಿಗಳ ಅವಶ್ಯಕತೆ ಕಾಣಲಾರಂಭಿಸಿದೆ.
ಈ ಹಿನ್ನೆಲೆಯಲ್ಲಿ ಐಸೋಲೇಷನ್ ಬೋಗಿಗಳನ್ನು ಸಿದ್ಧಪಡಿಸಲು ನೈರುತ್ಯ ರೈಲ್ವೆ ವಲಯ ಮುಂದಾಗಿದೆ. ಸುಮಾರು 200 ಕ್ಕೂ ಹೆಚ್ಚು ಬೋಗಿ ಸಿದ್ಧಪಡಿಸಲು ತಯಾರಿ ನಡೆದಿದ್ದು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಇರೋ ವರ್ಕ್ ಶಾಪ್ ನಲ್ಲಿ ಸಿದ್ಧತೆ ಮಾಡಲಾಗುತ್ತಿದೆ.
ಇನ್ನೆರಡು ದಿನಗಳಲ್ಲಿ ಐಸೋಲೇಷನ್ ಬೋಗಿಗಳು ಹಳಿ ಮೇಲೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ಒಂದೊಂದು ಬೋಗಿಯಲ್ಲಿ 8 ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಆಕ್ಸಿಜನ್, ವೆಂಟಿಲೇಟರ್ ಮತ್ತಿತರ ವ್ಯವಸ್ಥೆ ಮಾಡಲಾಗುತ್ತಿದೆ. ಶೌಚಾಲಯ ವ್ಯವಸ್ಥೆ, ಆರೋಗ್ಯ ಇಲಾಖೆ ಸಿಬ್ಬಂದಿ ಇರಲೂ ವ್ಯವಸ್ಥೆಗಳನ್ನು ಮಾಡಲಾಗ್ತಿದೆ. ಸುಮಾರು 200 ಐಸೋಲೇಷನ್ ಬೋಗಿಗಳನ್ನು ಸಿದ್ಧಪಡಿಸೋ ತಯಾರಿ ನಡೆದಿದೆ. ಸದ್ಯ ಹುಬ್ಬಳ್ಳಿ ಅಥವಾ ಧಾರವಾಡಗಳಲ್ಲಿ ಬೆಡ್ ಗಳ ಕೊರತೆಯಿಲ್ಲ. ಇಲ್ಲಿಂದ ಅಗತ್ಯ ಇರುವ ಕಡೆ ಐಸೋಲೇಷನ್ ಬೋಗಿ ಕಳಿಸಲು ಚಿಂತನೆ ನಡೆದಿದೆ. ರೈಲ್ವೆ ಐಸೋಲೇಷನ್ ಬೋಗಿ ಬಂದ ಮೇಲೆ ಬೆಡ್ ಗಳ ಕೊರತೆ ನೀಗಬಹುದು ಎಂದು ನಿರೀಕ್ಷಿಸಲಾಗಿದೆ. ಕೊರೋನಾ ವ್ಯಾಪಕಗೊಳ್ಳುತ್ತಿರುವ ಈ ಸಂದರ್ಭದಲ್ಲಿ ರೋಗಿಗಳ ನೆರವಿಗೆ ರೈಲ್ವೆ ಇಲಾಖೆ ಮುಂದಾಗಿದೆ. ಬೋಗಿಗಳು ತಯಾರಾದ ಬಳಿಕ ಕೊರೋನಾ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲಿದೆ.
ಇದನ್ನು ಓದಿ: ರಾಜ್ಯದಲ್ಲಿ ದಿನಕ್ಕೆ 600 ಟನ್ ಆಕ್ಸಿಜನ್ ಉತ್ಪಾದನೆ; ಸಚಿವ ಮುರುಗೇಶ್ ನಿರಾಣಿ
ಕಾನೂನು ವಿ.ವಿ. ಪರೀಕ್ಷೆ ಮುಂದೂಡಿಕೆ
ಕೊರೋನಾ ಎರಡನೆಯ ಅಲೆ ಅಬ್ಬರ ಹಿನ್ನೆಲೆಯಲ್ಲಿ ನಾಳೆಯಿಂದ ನಡೆಯಬೇಕಿದ್ದ ಕಾನೂನು ವಿ.ವಿ ಪರೀಕ್ಷ ಮುಂದೂಡಲಾಗಿದೆ. ನಾಳೆಯಿಂದ ಏಪ್ರಿಲ್ 28 ರವರೆಗಿನ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಐದು ವರ್ಷದ ಕಾನೂನು ಪದವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿರೊ ಕಾನೂನು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ, ಲಾಕ್ ಡೌನ್ ಜಾರಿ ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಸಲು ಕುಲಪತಿಗಳ ಸೂಚನೆ ಮೇರೆಗೆ ಕಾನೂನು ವಿ.ವಿ ಪರೀಕ್ಷೆ ಮುಂದೂಡಿಕೆ ಮಾಡಿರೋದಾಗಿ ಮೌಲ್ಯಮಾಪನ ಕುಲಸಚಿವ ಪ್ರೊ.ಜಿ.ಬಿ.ಪಾಟೀಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವರದಿ - ಶಿವರಾಮ ಅಸುಂಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ