ರಾಯಚೂರು: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗೆ ಭೇಟಿದ್ದರು, ಕಾರ್ಮಿಕರಿಗೆ ಉತ್ತಮ ಸೇವೆ ನೀಡಲು ಆಸ್ಪತ್ರೆಯನ್ನು ಸುಸಜ್ಜಿತವಾಗಿಡಲು ಸೂಚಿಸಿದ್ದರು, ಆದರೂ ಈ ಆಸ್ಪತ್ರೆ ಸುಧಾರಿಸಿಲ್ಲ, ಮತ್ತಷ್ಟು ಹದೆಗಟ್ಟು ಹೋಗಿದೆ. ಮಳೆ ಬಂದರಂತೂ ಈ ಆಸ್ಪತ್ರೆಯು ಹೊಂಡದಲ್ಲಿರುತ್ತದೆ.ಕಳೆದ ಜುಲೈ 30 ರಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ರಾಯಚೂರಿಗೆ ಆಗಮಿಸಿದ್ದರು, ಈ ಸಂದರ್ಭದಲ್ಲಿ ಅವರ ಇಲಾಖೆ ವ್ಯಾಪ್ತಿಯ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯನ್ನು ಸರಿಪಡಿಸಲಾಗುವುದು. ಇಲ್ಲಿ ವೈದ್ಯರನ್ನು ನೇಮಿಸಲಾಗುವುದು, ಇಎಸ್ಐ ಆಸ್ಪತ್ರೆಯು ಕೇವಲ ಕಾರ್ಮಿಕರಷ್ಟೆ ಅಲ್ಲ ಸಾರ್ವಜನಿಕರಿಗೂ ಲಭ್ಯವಾಗುವಂತೆ ಮಾಡುತ್ತೇನೆ, ಒಂದು ತಿಂಗಳಲ್ಲಿ ಎಲ್ಲವೂ ಸರಿ ಪಡಿಸುತ್ತೇನೆ ಎಂದು ಹೇಳಿ ಹೋಗಿ ಒಂದುವರೆ ತಿಂಗಳಾದರೂ ಇಎಸ್ಐ ಆಸ್ಪತ್ರೆ ಸುಧಾರಣೆಯಾಗಿಲ್ಲ. ಸಾವಿರಾರು ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಕುಟುಂಬದವರಿಗೆ ಚಿಕಿತ್ಸೆ, ಔಷಧಿ ನೀಡಬೇಕಾದ ಆಸ್ಪತ್ರೆ ಇದೆ ಎಂಬುವುದೇ ಬಹುತೇಕರಿಗೆ ಗೊತ್ತಿಲ್ಲ.
ಈ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು , ಇಬ್ಬರು ನರ್ಸಗಳು ಸೇರಿದಂತೆ ಒಟ್ಟು 9 ಜನ ಸಿಬ್ಬಂದಿಗಳಿರಬೇಕು, ಆದರೆ ಈಗಿರುವುದು ಕೇವಲ 5 ಜನರು ಮಾತ್ರ, ಅದರಲ್ಲೂ ಇಬ್ಬರು ವೈದ್ಯರು ಇಲ್ಲ. ಇದರಿಂದಾಗಿ ಶಹಬಾದಿನಲ್ಲಿರುವ ಡಾ ಉಮೇಶ ಯಲಶೆಟ್ಟಿ ಎಂಬುವವರಿಗೆ ಎರಡೂ ಆಸ್ಪತ್ರೆಯಲ್ಲಿ ನೋಡಿಕೊಳ್ಳುವಂತೆ ಹೇಳಿದ್ದಾರೆ, ಇದರಿಂದಾಗಿ ಅವರ ಯಾವಾಗಲೂ ಒಮ್ಮೆ ಬಂದು ಹೋಗುತ್ತಾರೆ.
ಈ ಆಸ್ಪತ್ರೆಯು ಬಾಡಿಗೆ ಕಟ್ಟಡದಲ್ಲಿದ್ದು ಪ್ರತಿ ತಿಂಗಳು ಕಟ್ಟಡಕ್ಕೆ 45 ಸಾವಿರ ರೂಪಾಯಿ ಬಾಡಿಗೆ ನೀಡಲಾಗುತ್ತಿದೆ, ಆದರೆ ಈ ಆಸ್ಪತ್ರೆಗೆ ಮಳೆ ಬಂದರೆ ಯಾರೂ ಹೋಗಲು ಆಗುವುದಿಲ್ಲ, ಕಾರಣ ಆಸ್ಪತ್ರೆಯಲ್ಲಿ ನೀರು ನಿಲ್ಲುತ್ತಿದೆ, ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಹಾಯ ಮಾಡಬೇಕಾದ ಇಎಸ್ಐ ಆಸ್ಪತ್ರೆಯು ಕಾಟಾಚಾರಕ್ಕಿದೆ.
ಸಚಿವರು ಸೂಚಿಸಿದರೂ ಆಸ್ಪತ್ರೆಯು ಸುಧಾರಣೆಯಾಗಿಲ್ಲ. ಇಂಥ ಆಸ್ಪತ್ರೆ ಇರುವದಕ್ಕಿಂತ ಮುಚ್ಚುವದೇ ವಾಸಿ, ಮೊದಲು ಕಾರ್ಮಿಕರಿಗೆ ಆಸ್ಪತ್ರೆ ಸೇವೆಗಳು ಸಿಗುವಂತಾಗಲಿ ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ