ರಾಯಚೂರು: ರಾಯಚೂರಿನ ಸಾವಿರಾರು ರೈತರ ಜೀವನಾಡಿ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಭರದಿಂದ ಸಾಗಿದೆ. ಆದರೆ ಕಾಲುವೆ ಕಾಮಗಾರಿ ಬಗ್ಗೆ ರೈತರಲ್ಲಿ ಆತಂಕ ಎದುರಾಗಿದೆ. ನೂರಾರು ಕೋಟಿ ರೂಪಾಯಿ ಖರ್ಚುಮಾಡಿ ಕಳಪೆ ಕಾಮಗಾರಿ ನಡೆದಿದೆ ಅಂತ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.
ಇದೇ ವಿಷಯವನ್ನಿಟ್ಟುಕೊಂಡು ಜೆಡಿಎಸ್ ಸಹ ಪ್ರತಿಭಟನೆ ಮಾಡಿದೆ. ಮುಂದಿನ ತಿಂಗಳಲ್ಲೇ ನೀರು ಹರಿಸಲು ಸಿದ್ದತೆ ನಡೆದಿದೆ. ನಾರಾಯಣಪುರ ಬಲದಂಡೆ ಕಾಲುವೆ ರಾಯಚೂರಿನ ದೇವದುರ್ಗ, ಲಿಂಗಸುಗೂರು ತಾಲೂಕುಗಳ ರೈತರ ಬದುಕಿನ ಚಿತ್ರಣವನ್ನೇ ಬದಲಿಸಿದ ನೀರಾವರಿಯ ಜೀವನಾಡಿ. ಆದರೆ ಈಗ ಆಧುನೀಕರಣ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿಯಾಗುತ್ತಿದೆ ಅಂತ ರೈತರು ಆರೋಪಿಸಿದ್ದಾರೆ.
ಕಾಲುವೆಯ ಆರಂಭದಿಂದ 95 ಕಿ.ಮೀ. ವರೆಗೆ ಆಧುನೀಕರಣ ಕಾಮಗಾರಿ ನಡೆದಿದೆ. ಅಂದಾಜು 956 ಕೋಟಿ ವೆಚ್ಚದ ಕಾಮಗಾರಿಯನ್ನ ಡಿ.ವೈ.ಉಪ್ಪಾರ್ ಕಂಪನಿ ಗುತ್ತಿಗೆ ಪಡೆದಿದೆ. ಕಾಮಗಾರಿ ಸ್ಥಳದಲ್ಲಿ ಇಂಜಿನಿಯರ್ಗಳು ಸಹ ಇಲ್ಲದೆ ಕಳಪೆ ಕೆಲಸ ನಡೆದಿದೆ ಅಂತ ರೈತರು ಆರೋಪಿಸಿದ್ದಾರೆ. ಜುಲೈ ಅಂತ್ಯಕ್ಕೆ ಕಾಲುವೆಗೆ ನೀರು ಹರಿಸುವ ಯೋಚನೆಯಿದ್ದು, ತುರಾತುರಿಯಲ್ಲಿ ಕಾಮಗಾರಿಯನ್ನ ಕಳಪೆ ಮಟ್ಟದಲ್ಲಿ ಮಾಡಲಾಗುತ್ತಿದೆ. ಕೃಷ್ಣ ಜಲಭಾಗ್ಯ ನಿಗಮದ ಯಾವುದೇ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಇರದೆ ಕಾಂಕ್ರೀಟ್ ಕೆಲಸ ಗುಣಮಟ್ಟದಲ್ಲಿ ನಡೆಯುತ್ತಿಲ್ಲ. ಈ ಹಿಂದೆಯೂ ಕಳಪೆ ಕಾಮಗಾರಿಯಿಂದ ಮುಖ್ಯಕಾಲುವೆ ಸಾಕಷ್ಟು ಸಾರಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಈಗ ಪುನಃ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಅಂತ ರೈತರು ಆರೋಪಿಸಿದ್ದಾರೆ.
ಈ ಕಾಲುವೆಯಲ್ಲಿ ಗುಣಮಟ್ಟದ ಬಗ್ಗೆ ಅನೇಕ ಅನುಮಾನಗಳಿವೆ. ದೇವೇಗೌಡರು ಈ ಕಾಲುವೆಗೆ ವಿಶೇಷ ಕಾಳಜಿ ವಹಿಸಿ ಮಂಜೂರು ಮಾಡಿಸಿದ್ದು, ಕಾಲುವೆಯು ಕಳಪೆಯಾದರೆ ಈ ಭಾಗದ ರೈತರ ಭೂಮಿಗೆ ನೀರು ಸಿಗುವುದಿಲ್ಲ. ಈ ಕಾಲುವೆ ಕಾಮಗಾರಿಯ ಬಗ್ಗೆ ಅಂದಾಜು ಪತ್ರಿಕೆ, ಗುಣಮಟ್ಟ ಪರೀಕ್ಷೆ ಹಾಗೂ ಥರ್ಡ್ ಪಾರ್ಟಿ ಇನ್ಸೆಫೆಕ್ಷನ್ ಆಗುತ್ತಿಲ್ಲ. ಯಾವೊಬ್ಬ ಇಂಜಿನಿಯರ್ ಈ ಕಾಲುವೆಯ ವೀಕ್ಷಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಇಂದು ಕೊತ್ತದೊಡ್ಡಿ ಬಳಿ ಪ್ರತಿಭಟನೆ ನಡೆಸಿ ಅಂದಾಜು ಪತ್ರಿಕೆ, ಗುಣಮಟ್ಟದ ಪರೀಕ್ಷೆಯಾಗಬೇಕೆಂದು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್ಎಲ್ ನ ದೇವದುರ್ಗಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಈ ಕಾಮಗಾರಿಯ ಪರಿಶೀಲನೆ ಥರ್ಡ್ ಪಾರ್ಟಿ ನೇಮಿಸಿಲ್ಲ. ಆದರೆ ಗುಣಮಟ್ಟದ ಬಗ್ಗೆ ಪರಿಶೀಲನೆಯನ್ನು ಕ್ವಾಲಿಟಿ ಕಂಟ್ರೋಲ್ ಅಧಿಕಾರಿಗಳಿಂದ ಮಾಡಿಸಲಾಗುತ್ತಿದೆ ಎಂದಿದ್ದಾರೆ.
![]()
ನಾರಾಯಣಪುರ ಬಲದಂಡೆ ಆಧುನೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದನ್ನು ಓದಿ: ಗುರುಗ್ರಾಮ ಆಕಾಶ ಆವರಿಸಿಕೊಂಡ ಬಳಿಕ ದೆಹಲಿಗೆ ಲಗ್ಗೆ ಇಟ್ಟ ಮಿಡತೆಗಳ ಹಿಂಡು; ತುರ್ತು ಸಭೆ ಕರೆದ ಪರಿಸರ ಸಚಿವ
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲುವೆ ನವೀಕರಣಕ್ಕಾಗಿ ಬಜೆಟ್ನಲ್ಲಿ 750 ಕೋಟಿ ಮೀಸಲಿಟ್ಟಿದ್ದರು. ಮೂರು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಬಳಿಕ ಬಿಜೆಪಿ ಸರ್ಕಾರಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗ ವೆಚ್ಚ 956 ಕೋಟಿಗೆ ಏರಿದೆ. ಅಲ್ಲದೆ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆ ನೀಡಲಾಗಿದೆ ಅಂತ ರೈತರು ಆರೋಪಿಸಿದ್ದಾರೆ. ಲಘು ಬೆಳೆಗಳಿಗೆ ಮಾತ್ರ ನೀರಾವರಿ ಮಾಡುವ ಉದ್ದೇಶದಿಂದ ಕಾಲುವೆ ಸಾಮರ್ಥ್ಯ ವಿನ್ಯಾಸ ಮಾಡಲಾಗಿದೆ. ಕಾಲುವೆಯಲ್ಲಿ 3600 ಕ್ಯೂಸೆಕ್ ವರೆಗೆ ನೀರು ಹರಿಸಬಹುದು. ಆದರೆ ವಾಸ್ತವದಲ್ಲಿ 2800 ಕ್ಯೂಸೆಕ್ ನಷ್ಟು ಮಾತ್ರ ನೀರು ಹರಿಸಲು ಸಾಧ್ಯವಾಗುತ್ತಿದೆ. ಆಧುನೀಕರಣ ವೇಳೆಯಾದರೂ ಇದನ್ನ ಸರಿಪಡಿಸಬಹುದಾಗಿತ್ತು. ಆದರೆ ಅವಸರವಾಗಿ ಕಾಮಗಾರಿ ಮಾಡಲಾಗುತ್ತಿದೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಶುಕ್ರವಾರ ನೀರಾವರಿ ಸಚಿವರಾದ ರಮೇಶ ಜಾರಕಿಹೊಳಿ ಸಹ ಈ ಕಾಮಗಾರಿಯ ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ ರೈತರಿಗೆ ವರವಾಗಬೇಕಾಗಿದ್ದ ಕಾಲುವೆ ನುಂಗಣ್ಣರ ಪಾಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ