ಕೊರೋನಾ ಎಫೆಕ್ಟ್ ; ಆನ್‌ಲೈನ್ ಪರೀಕ್ಷೆಗೆ ರಾಯಚೂರು ಕೃಷಿ ವಿಜ್ಞಾನ ವಿವಿ ಸಿದ್ಧತೆ

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿನ ಎಂಎಸ್ಸಿ ಅಗ್ರಿ, ಬಿಎಸ್ಸಿ ಅಗ್ರಿ, ಪಿಹೆಚ್‌ಡಿ ಹಾಗೂ ಡಿಪ್ಲೊಮಾ ಅಭ್ಯಾಸ ಮಾಡುತ್ತಿರುವ 1,200 ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು

ರಾಯಚೂರು ಕೃಷಿ ವಿಜ್ಞಾನಗಳ ವಿವಿ

ರಾಯಚೂರು ಕೃಷಿ ವಿಜ್ಞಾನಗಳ ವಿವಿ

  • Share this:
ರಾಯಚೂರು(ಆಗಸ್ಟ್​. 03): ಮಹಾಮಾರಿ ಕೊರೋನಾ  ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಬಿಕ್ಕಟ್ಟು ಸೃಷ್ಠಿಸಿದೆ. ಬಹುತೇಕ ವಿಶ್ವವಿದ್ಯಾಲಯಗಳು ಆನ್‌ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಲು ಮುಂದಾಗಿದವೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆಗಸ್ಟ್ 14 ರಿಂದ ಆನ್‌ಲೈನ್‌ನಲ್ಲಿ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿನ ಎಂಎಸ್ಸಿ ಅಗ್ರಿ, ಬಿಎಸ್ಸಿ ಅಗ್ರಿ, ಪಿಎಚ್‌ಡಿ ಹಾಗೂ ಡಿಪ್ಲೊಮಾ ಅಭ್ಯಾಸ ಮಾಡುತ್ತಿರುವ 1,200 ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಮಾತ್ರ ಇರುವುದರಿಂದ ಅವರಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ. ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿಯೇ ಕುಳಿತು ವೀಕ್ಷಿಸುವಂತಹ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಉಪನ್ಯಾಸಕರಿಗೆ ತರಬೇತಿಯನ್ನು ನೀಡಲಾಗಿದ್ದು, ಪ್ರಾಯೋಗಿಕವಾಗಿ ಪರಿಶೀಲನೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೂ ಪರೀಕ್ಷೆ ಹೇಗೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.

ಪ್ರಸ್ತುತ 50 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದ್ದು, ಉಳಿದ 50 ಅಂಕಗಳನ್ನು ಹಿಂದಿನ ಸೆಮಿಸ್ಟರ್ ಅಂಕಗಳ ಸರಾಸರಿಯಲ್ಲಿ ಅಂಕಗಳನ್ನು ನೀಡಲಾಗುತ್ತಿದೆ. 35 ಅಂಕಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕಾಗಿದ್ದು, 5 ಅಂಕಗಳನ್ನು ಹಾಜರಾತಿ ಆಧಾರದ ಮೇಲೆ ಹಾಗೂ 10 ಅಂಕಗಳನ್ನು ಅಸೈನ್‌ಮೆಂಟ್ ಆಧಾರಿಸಿ ನೀಡಲಾಗುತ್ತಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಕಲಬುರ್ಗಿ, ಭೀಮರಾಯನಗುಡಿ ಹಾಗೂ ರಾಯಚೂರಿನ ಕ್ಯಾಂಪಸ್‌ನಲ್ಲಿ ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಆಗಸ್ಟ್​  29 ರೊಳಗೆ ಪರೀಕ್ಷೆಗಳನ್ನು ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮೊಬೈಲ್ ನೆಟ್‌ವರ್ಕ್ ಇರುವ ಸ್ಥಳದಲ್ಲಿ ಪರೀಕ್ಷೆ ಬರೆಯುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ಕೋವಿಡ್ ರೋಗಿಗಳಿಗೆ ನೀಡಿದ ಬೆಡ್ ಗಳ ತಿರಸ್ಕಾರ ; ರಸ್ತೆ ಮೇಲೆಯೇ ಬೆಡ್ ಮೇಲೆ ಮಲಗಿ ಕಾಂಗ್ರೆಸ್ ಪ್ರತಿಭಟನೆ

ವಿದ್ಯಾರ್ಥಿಗಳಿಗೆ ಐದು ನಿಮಿಷಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ಕಳುಹಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಗೆರೆ ಇರುವ ಪೇಪರ್‌ನಲ್ಲಿ ಒಂದೂವರೆಗೆ ಗಂಟೆಗಳಲ್ಲಿ ಉತ್ತರ ಬರೆಯಬೇಕು. ನಂತರ 10 ನಿಮಿಷಗಳಲ್ಲಿ ವಾಟ್ಸಪ್ ಇಲ್ಲವೇ ಇ ಮೇಲ್ ಮೂಲಕ ಅದನ್ನು ಉಪನ್ಯಾಸಕರಿಗೆ ಕಳುಹಿಸಬೇಕು. ಪ್ರಾಕ್ಟಿಕಲ್‌ಗೆ ಸಂಬಂಧಿಸಿದ ವಿಷಯವನ್ನು ವಿದ್ಯಾರ್ಥಿಗಳು ಕೈ ಬರಹದಲ್ಲಿಯೇ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ.ಮುಂಬರುವ ಶೈಕ್ಷಣಿಕ ವರ್ಷದ ತರಗತಿಗಳನ್ನು ಆನ್‌ಲೈನ್ ನಲ್ಲಿ​​ ಆರಂಭಿಸಲು ವಿಶ್ವವಿದ್ಯಾಲಯ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಅದಕ್ಕಾಗಿ ಸಿಸ್ಕೋ ಟ್ರೇನಿಂಗ್ ಸಾಪ್ಟ್​​ವೇರ್ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಕೃಷಿ ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಕೂಡಾ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆ ನಡೆಸಿದ್ದು, ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.
Published by:G Hareeshkumar
First published: