• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಿಥಿಲಗೊಂಡ ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ದುರಸ್ತಿಗೊಳಿಸಿ: ಬೆಂ.ಗ್ರಾಮಾಂತರ ಜಿಪಂ ಅಧ್ಯಕ್ಷೆ ಎಚ್ಚರಿಕೆ

ಶಿಥಿಲಗೊಂಡ ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ದುರಸ್ತಿಗೊಳಿಸಿ: ಬೆಂ.ಗ್ರಾಮಾಂತರ ಜಿಪಂ ಅಧ್ಯಕ್ಷೆ ಎಚ್ಚರಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭೆ.

ಗ್ರಾಮ ಪಂಚಾಯತಿಗಳಲ್ಲಿ ಕಸ ವಿಲೇವಾರಿ ಸಮಸ್ಯೆ ತೀವ್ರವಾಗಿದ್ದು, ಕಸದ ಘಟಕಗಳನ್ನು ಹೆಸರಿಗಷ್ಟೇ  ನಿರ್ಮಿಸಲಾಗುತ್ತಿದ್ದು, ಸಮೇತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸದ ಗಾಡಿಗಳು ಬರುತ್ತಿಲ್ಲ ಹಾಗೂ ರಸ್ತೆಯಲ್ಲಿ ಕಸದ ರಾಶಿ ನಿರ್ಮಾಣವಾಗುತ್ತಿದ್ದು, ಕಸದ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಜಿ.ಪಂ ಸದಸ್ಯರು ಆರೋಪ ಮಾಡಿದ್ದರು. 

ಮುಂದೆ ಓದಿ ...
  • Share this:

ದೇವನಹಳ್ಳಿ: ಗ್ರಾಮ ಪಂಚಾಯಿತಿಗಳಲ್ಲಿರುವ ಕುಡಿಯುವ ನೀರಿನ ಘಟಕಗಳು ಹಲವು ಕಡೆ ಶಿಥಿಲಗೊಂಡಿದ್ದು, ಅವುಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮೂಲಕ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಮ್ಮ  ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಕುಡಿಯುವ ನೀರು ಘಟಕ ನಿರ್ವಹಣೆ ಜವಾಬ್ದಾರಿ ಹೊತ್ತ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದರೆ ಅವರಿಗೆ ದಂಡ ವಿಧಿಸಿ, ಅಗತ್ಯ ಕ್ರಮ ಕೈಗೊಳ್ಳಿ, ಘಟಕಗಳ ನಿರ್ವಹಣೆ ಜೊತೆಗೆ ಸಾಕಷ್ಟು ನೀರು ಪೋಲಾಗುತ್ತಿದ್ದು, ನೀರಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದರು, ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಆಯಾ ಪಂಚಾಯಿತಿಗಳಿಗೆ ವಹಿಸಿಕೊಡಲು ಜಿಲ್ಲಾ ಪಂಚಾಯಿತಿ ಸದಸ್ಯರು ಒತ್ತಾಯಿಸಿದಾಗ ಜಿ.ಪಂ. ಸಿಇಓ ಎನ್.ಎಂ.ನಾಗರಾಜ ಪ್ರತಿಕ್ರಿಯಿಸಿ, ಈಗಾಗಲೇ ಹಲವು ಘಟಕಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದ್ದು, ಕೆಲವೊಂದು ಕಡೆಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪರಿಶೀಲಿಸಿ ನಿರ್ವಹಣೆಗೆ ಕ್ರಮ ವಹಿಸಲಾಗುವುದು ನಿರ್ವಹಣೆಯಲ್ಲಿ ಕಣ್ಣಾಮುಚ್ಚಾಲೆ ಆಡುವ ಗುತ್ತಿಗೆದಾರರ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.


ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಸೇರಿದಂತೆ ಅಗತ್ಯ ಸೌಲಭ್ಯಗಳು ಸೋಂಕಿತರಿಗೆ ಶೀಘ್ರವಾಗಿ ದೊರೆಯುವಂತೆ ಕ್ರಮವಹಿಸಲು ತಿಳಿಸಿದರಲ್ಲದೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರಿಗೆ  ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ‌ ಎಂದು ಗರಂ ಆದರು.  ಜಿಲ್ಲೆಯಲ್ಲಿ ಹೊಸಕೋಟೆಯ ನರಸಾಪುರ, ನೆಲಮಂಗಲ ತಾಲ್ಲೂಕಿನ ಮಾಗಡಿ ತಾಲ್ಲೂಕು ಗಡಿಭಾಗ ಹೊಂದಿರುವ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಜನರು ಆಂತಕದಲ್ಲಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು ಹಾಗೂ ಚಿರತೆ ದಾಳಿ ಮಾಡಿರುವ ಹಸು, ಕುರಿ, ಮೇಕೆಯ ವಾರಸುದಾರರಿಗೆ ಶೀಘ್ರವಾಗಿ ಪರಿಹಾರಧನವನ್ನು ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ಎರಡು ತಿಂಗಳಲ್ಲಿ ಆರು ಚಿರತೆಗಳನ್ನು ಸೆರೆಹಿಡಿಯಲಾಗಿದೆ ಎಂದರಲ್ಲದೆ, ನೆಲಮಂಗಲ ತಾಲ್ಲೂಕಿನ ಅಂಚಿನಲ್ಲಿ ಬೆಟ್ಟಗುಡ್ಡ ಹೆಚ್ಚಾಗಿದ್ದು, ಮಾಗಡಿಗೆ ಹೊಂದಿಕೊಂಡಂತೆ ಇರುವುದರಿಂದ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.


ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಬೆಣ್ಣೆ ಹಳ್ಳದ ಆರ್ಭಟಕ್ಕೆ ಸೇತುವೆಗಳು ಜಲಾವೃತ; ಜಲಾಸುರನ ಅಬ್ಬರಕ್ಕೆ ಜನರು ಕಂಗಾಲು!


ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಲ್ಲಿ ಸಮುದಾಯದ  ಶೌಚಾಲಯ ಸೇರಿದಂತೆ ಘನ ಮತ್ತು ತ್ಯಾಜ್ಯ ಘಟಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ತಿಳಿಸಿದಾಗ ಜಿಲ್ಲೆಯಲ್ಲಿ ಸಮುದಾಯ ಶೌಚಾಲಯಗಳ ಕೊರತೆ ಇದೆ ಎಂದು ಸದಸ್ಯರೋರ್ವರು ಸಭೆಯ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯಿಸಿದ ಸಿಇಓ ನಾಗರಾಜ್ ಸಮುದಾಯ ಶೌಚಾಲಯ ನಿರ್ಮಾಣಕ್ಕಿಂತ ಅವುಗಳ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದರಲ್ಲದೆ, ಸ್ವಚ್ಛ ಭಾರತ್ ಮಿಷನ್‍ನಡಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಸ್ಥಳೀಯವಾಗಿ ನಿರ್ದಿಷ್ಟ ಸ್ಥಳ, ನೀರು ಲಭ್ಯತೆ ನೋಡಿಕೊಂಡು ಶೌಚಾಲಯ ನಿರ್ಮಿಸಲಾಗುತ್ತಿದೆ ಹಾಗೂ ಶಾಲೆ, ಬಸ್ ನಿಲ್ದಾಣ, ದೇವಸ್ಥಾನ ಸಮೀಪ ಎಲ್ಲಾ ಸೌಕರ್ಯಗಳಿದ್ದರೆ ಸಮುದಾಯ ಶೌಚಾಲಯ ನಿರ್ಮಿಸಬಹುದು ಎಂದು ತಿಳಿಸಿದರು.  ಗ್ರಾಮ ಪಂಚಾಯತಿಗಳಲ್ಲಿ ಕಸ ವಿಲೇವಾರಿ ಸಮಸ್ಯೆ ತೀವ್ರವಾಗಿದ್ದು, ಕಸದ ಘಟಕಗಳನ್ನು ಹೆಸರಿಗಷ್ಟೇ  ನಿರ್ಮಿಸಲಾಗುತ್ತಿದ್ದು, ಸಮೇತನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸದ ಗಾಡಿಗಳು ಬರುತ್ತಿಲ್ಲ ಹಾಗೂ ರಸ್ತೆಯಲ್ಲಿ ಕಸದ ರಾಶಿ ನಿರ್ಮಾಣವಾಗುತ್ತಿದ್ದು, ಕಸದ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಜಿ.ಪಂ ಸದಸ್ಯರು ಆರೋಪ ಮಾಡಿದ್ದರು.

Published by:HR Ramesh
First published: