ಕೋಲಾರ(ಏಪ್ರಿಲ್ 10): ಕೋಲಾರದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವರ್ತನೆ, ಉಳ್ಳವರಿಗೊಂದು ನ್ಯಾಯ, ಬಡಪಾಯಿಗಳಿಗೆ ಮತ್ತೊಂದು ನ್ಯಾಯ ಎಂಬಂತಾಗಿದೆ. ಏಕೆಂದರೆ ಏಕಾಏಕಿ ರಸ್ತೆ ಬದಿಯಿದ್ದ ಪೆಟ್ಟಿಗೆ ಅಂಗಡಿಗಳನ್ನ ತೆರವು ಮಾಡುವ ಮೂಲಕ ಅಧಿಕಾರಿಗಳು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ. ಇದೀಗ ಅಧಿಕಾರಿಗಳ ಕಾರ್ಯವೈಖರಿ ಸಾಕಷ್ಟು ಟೀಕೆಗೆ ಒಳಗಾಗಿದ್ದು ಬಡವರ ಮೇಲೆ ಕಾನೂನಿನ ಅಸ್ತ್ರ ಬಳಸುವ ಅಧಿಕಾರಿಗಳು ಉಳ್ಳವರಿಗೂ ಹೀಗೆ ಮಾಡುವರಾ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ.
ಘಟನೆ ಏನು ?
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದರ್ಪ ಪ್ರದರ್ಶನ ಮಾಡಿದ್ದಾರೆ. ಖಾಸಗಿ ಕಾಂಪ್ಲೆಕ್ಸ್ ಮಾಲೀಕ ಹೇಳಿದರೆಂದು ಬಡವರ 4 ಪೆಟ್ಟಿಗೆ ಅಂಗಡಿಗಳನ್ನ ಅಧಿಕಾರಿಗಳು ಬುಧವಾರ ತೆರವು ಮಾಡಿ ದರ್ಪ ಪ್ರಸರ್ಶಿಸಿದ್ದಾರೆ. ಶ್ರೀನಿವಾಸಪುರದ ಪುಂಗನೂರು ಕ್ರಾಸ್ ನಲ್ಲಿ ಬಡವರು ರಸ್ತೆಯ ಪಕ್ಕದಲ್ಲಿ 4 ಪೆಟ್ಟಿ ಚಿಲ್ಲರೆ ಅಂಗಡಿಗಳನ್ನು ಇರಿಸಿಕೊಂಡು ಕಳೆದ ನಾಲ್ಕು ವರ್ಷದಿಂದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಪೆಟ್ಟಿಗೆ ಅಂಗಡಿಗಳ ಹಿಂಬದಿಯಿದ್ದ ಹೊಸ ಕಟ್ಟಡದ ಹೊರ ನೋಟದ ಸೌಂದರ್ಯಕ್ಕೆ ಪೆಟ್ಟಿಗೆ ಅಂಗಡಿಗಳು ಅಡ್ಡಿಯೆಂದು, ಕಾಂಪ್ಲೆಕ್ಸ್ ಮಾಲೀಕ ವೇಣುಗೋಪಾಲರೆಡ್ಡಿ ಎನ್ನುವರು ತೆರವು ಮಾಡಲಿಕ್ಕೆ ಹೇಳಿದರೆಂದು, ಲೋಕೋಪಯೋಗಿ ಇಲಾಖೆ ಅಧಿಕಾರಿಯಾದ ಜಗದೀಶ್ ಹಾಗು ಕಿರಿಯ ಅಧಿಕಾರಿಗಳು ಏಕಾಏಕಿ ಮಳಿಗೆಗಳನ್ನ ತೆರವು ಮಾಡಿದ್ದಾರೆ.
ಇದರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ನಾಶವಾಗಿದ್ದು, ಅಧಿಕಾರಿಗಳ ವಿರುದ್ಧ ಮಳಿಗೆ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಶಾಸಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ ನೀಡುತ್ತಿದ್ದಂತೆ, ಮಳಿಗೆಗಳನ್ನ ಕಳೆದುಕೊಂಡ ಮಾಲೀಕರು ರಮೇಶ್ ಕುಮಾರ್ ಕಾಲಿಗೆರಗಿ ಮಳಿಗೆ ವಾಪಾಸ್ ಕೊಡಿಸುವಂತೆ ಕೇಳಿಕೊಂಡರು. ಈ ವೇಳೆ ಅಧಿಕಾರಿಗಳಿಗೆ ರಮೇಶ್ ಕುಮಾರ್ ಛೀಮಾರಿ ಹಾಕಿದ್ದು, ಯಾರೋ ಹೇಳಿದರೆ ಏನು ಬೇಕಾದರು ಮಾಡುವಿರಾ, ನಾನು ಯಾರೋ ಇಷ್ಟವಿಲ್ಲ ಎನ್ನುವೆ, ಅವರ ತಲೆ ಕಡಿದು ತೆಗೆದುಕೊಂಡು ತರುವಿರಾ, ಎಂದು ಭಾವೋದ್ವೇಗಕ್ಕೆ ಒಳಗಾಗಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಅಧಿಕಾರಿಗಳನ್ನ ಪ್ರಶ್ನಿಸಿದ ರಮೇಶ್ ಕುಮಾರ್, ಪೆಟ್ಟಿಗೆ ಅಂಗಡಿಗಳನ್ನ ಸ್ಥಳದಲ್ಲಿ ಹೇಗಿತ್ತೊ ಹಾಗೆಯೆ ಕಟ್ಟಿಸಿಕೊಡಿ ಎಂದು ಎಚ್ಚರಿಕೆ ನೀಡಿ, ಮುಂದಿನ 10 ದಿನಗಳ ಗಡುವು ನೀಡಿದರು. ಈ ವೇಳೆ ಮಾತನಾಡಿದ ಮಳಿಗೆ ಕಳೆದುಕೊಂಡವರು, ಆಂಧ್ರ ಪ್ರದೇಶದ ಪುಂಗನೂರಿನ ಎಮ್ ಎಲ್ ಎ ಒಬ್ಬರು ಕಾಂಪ್ಲೆಕ್ಸ್ ಹಿಂಭಾಗ ಮಾವಿನ ತೋಟವನ್ನು ಖರೀದಿ ಮಾಡಿದ್ದು, ಅದರ ಮುಂದಿರುವ ಕಾಂಪ್ಲೆಕ್ಸ್ ಸಹ ಕೊಂಡುಕೊಳ್ಳಲು ಇಚ್ಚಿಸಿದ್ದಾರೆ. ಅದಕ್ಕಾಗಿಯೇ ಮುಂಬದಿಯಿರೊ ಅಂಗಡಿಗಳನ್ನ ತೆರವು ಮಾಡಿಸಿದ್ದಾರೆಂದು ಆರೋಪಿಸಿದ್ದಾರೆ. ಇದಕ್ಕೆ ಶ್ರೀನಿವಾಸಪುರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ಸಹಕಾರ ನೀಡಿದ್ದು ಇದರ ಪರಿಣಾಮವಾಗಿ ಮಳಿಗೆಗಳನ್ನು ಧ್ವಂಸ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಬದಿಯ ಪೆಟ್ಟಿಗೆ ಅಂಗಡಿಗಳನ್ನ ತೆರವು ಮಾಡಬೇಕಿದ್ದರೆ, ಬೆಳಗಿನ ಜಾವ ಪೊಲೀಸರ ಬಿಗಿ ಭದ್ರತೆಯಿಂದ ತೆರವು ಮಾಡಬಹದಿತ್ತು. ಹಾಗಾಗಿದ್ದರೆ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ನಾಶವಾಗದೆ ಉಳಿಯುತ್ತಿತ್ತು. ಆದರೆ ಶ್ರೀನಿವಾಸಪುರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಬೆಳಕು ಹರಿಯುವ ಮುನ್ನವೇ ಮನಸೋ ಇಚ್ಚೆ ಜೆಸಿಬಿಯಿಂದ ಕಾರ್ಯಾಚರಣೆ ನಡೆಸಿ, ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ