ಪುತ್ತೂರು (ಮೇ 25, ಮಂಗಳವಾರ): ಸಿದ್ದರಾಮಯ್ಯ ಅವರ ಆಡಳಿತದ ಕಾಲದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟೋಪಚಾರಕ್ಕಾಗಿ ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟೀನ್ ಆರಂಭಿಸಲಾಯಿತು. ಈ ಕ್ಯಾಂಟೀನ್ನಿಂದ ಲಕ್ಷಾಂತರ ಜನರು ಕೇವಲ ಐದು ರೂಪಾಯಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಈ ಕ್ಯಾಂಟೀನ್ ಮೂಲಕ ಮಾಡಲಾಗಿದೆ. ಕೊರೋನಾ ಕಾಲದಲ್ಲೂ ಇಂದಿರಾ ಕ್ಯಾಂಟೀನ್ ಹಲವಾರು ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಕೊರೋನಾ ಕಾರಣದಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಎಲ್ಲಾ ಇಂದಿರಾ ಕ್ಯಾಂಟೀನ್ ನಲ್ಲಿ ಅಗತ್ಯವಿರುವ ಬಡವರಿಗೆ ಹಾಗೂ ಕಾರ್ಮಿಕರಿಗೆ ಉಚಿತವಾಗಿ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟವನ್ನು ನೀಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
ಕೊರೋನಾ ಕಾರಣಕ್ಕಾಗಿ ಈ ಕ್ಯಾಂಟೀನ್ಗಳಲ್ಲಿ ಆಹಾರವನ್ನು ಗ್ರಾಹಕರಿಗೆ ಪಾರ್ಸಲ್ ಮೂಲಕ ನೀಡಲಾಗುತ್ತಿದೆ. ಸರಕಾರ ಯಾವಾಗ ಉಚಿತ ಆಹಾರ ಪೂರೈಕೆಯ ನಿರ್ಧಾರ ಕೈಗೊಂಡಿದೆಯೋ, ಅಂದಿನಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಪ್ರತಿನಿತ್ಯ 300 ಪಾರ್ಸಲ್ ಗಳ ಲೆಕ್ಕ ಕಾಣಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲೂ ಇದೇ ರೀತಿ ಲೆಕ್ಕಾಚಾರ ಕಾಣಲಾರಂಭಿಸಿದ್ದು, ಈ ಬಗ್ಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಕ್ಯಾಂಟೀನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕ್ಯಾಂಟೀನ್ ಸಿಬ್ಬಂದಿಗಳು ನಡೆಸುತ್ತಿರುವ ಗೋಲ್ ಮಾಲ್ ಒಂದು ಬೆಳಕಿಗೆ ಬಂದಿದೆ.
ಸರಕಾರದ ಆದೇಶದ ಪ್ರಕಾರ ಇಂದಿರಾ ಕ್ಯಾಂಟೀನ್ ನಲ್ಲಿ ಪ್ರತಿದಿನ 300 ಜನರಿಗೆ ಉಚಿತ ಆಹಾರ ನೀಡಲು ಅವಕಾಶ ನೀಡಲಾಗಿದೆ. ಆಹಾರವನ್ನು ಪಾರ್ಸಲ್ ಕೊಂಡೊಯ್ಯುವ ಗ್ರಾಹಕ ತನ್ನ ಮೊಬೈಲ್ ನಂಬರ್ ಅಥವಾ ಅಧಾರ್ ಕಾರ್ಡ್ ತೋರಿಸಿ ಆಹಾರವನ್ನು ಪಡೆದುಕೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಪುತ್ತೂರು ಇಂದಿರಾ ಕ್ಯಾಂಟೀನ್ ನಲ್ಲೂ ಇದೇ ರೀತಿ ಪಾರ್ಸಲ್ ವ್ಯವಸ್ಥೆ ಮಾಡಲಾಗಿದ್ದರೂ, ಕ್ಯಾಂಟೀನ್ ದಾಖಲೆ ಪುಸ್ತಕದಲ್ಲಿ ಗ್ರಾಹಕರಿಗಿಂದ ಪಾರ್ಸಲ್ ಗಳ ಸಂಖ್ಯೆಯೇ ಹೆಚ್ಚಾಗಿರುವುದು ಶಾಸಕರ ಗಮನಕ್ಕೆ ಬಂದಿದೆ. ಒಂದೊಂದು ಮೊಬೈಲ್ ನಂಬರ್ ನಲ್ಲಿ ಎಂಟರಿಂದ ಹತ್ತು ಪಾರ್ಸಲ್ ಗಳನ್ನು ಕೊಂಡೊಯ್ದಿರುವುದನ್ನು ದಾಖಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕ್ಯಾಂಟೀನ್ ನಿಂದ ಪೂರೈಕೆಯಾದ ಆಹಾರಗಳ ಲೆಕ್ಕಾಚಾರದ ಮೇಲೆ ಸರಕಾರ ಕ್ಯಾಂಟೀನ್ ನಿರ್ವಹಣೆ ಹೊತ್ತವರಿಗೆ ಹಣ ನೀಡುತ್ತಿದ್ದು, ಇದನ್ನೇ ಬಂಡವಾಳವನ್ನಾಗಿಸಲು ಕ್ಯಾಂಟೀನ್ ಸಿಬ್ಬಂದಿಗಳು ಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳನ್ನೂ ಕೇಳಿಬಂದಿವೆ.
ಗ್ರಾಹಕರು ಬಾರದಿದ್ದರು, ಮೊಬೈಲ್ ನಂಬರ್ ಗಳನ್ನು ದಾಖಲೆ ಪುಸ್ತಕದಲ್ಲಿ ನಮೂದಿಸಿ ಸುಳ್ಳು ಲೆಕ್ಕಾಚಾರವನ್ನು ಸರಕಾರಕ್ಕೆ ನೀಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಇಂದಿರಾ ಕ್ಯಾಂಟೀನ್ ನಲ್ಲಿ ಕಂಡು ಬಂದ ಈ ಗೋಲ್ ಮಾಲ್ ಬಗ್ಗೆ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರಕಾರ ಬಡ ವರ್ಗದ ಜನರು ಎರಡು ಹೊತ್ತಿನ ಊಟ ಮಾಡಲಿ ಎನ್ನುವ ಕಾರಣಕ್ಕಾಗಿ, ಉಚಿತ ಆಹಾರ ನೀಡುವ ಯೋಜನೆಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಮಾಡಿದೆ. ಆದರೆ ಬಡವರಿಗೆ ಸೇರಬೇಕಾದ ಆ ಯೋಜನೆಯಲ್ಲೂ ಅವ್ಯವಹಾರ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಕ್ಯಾಂಟೀನ್ ನ ದಾಖಲೆ ಪುಸ್ತಕದಲ್ಲಿ ನಮೂದಿಸಲಾದ ಎಲ್ಲಾ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ