ರಾಜ್ಯಕ್ಕೆ ಮಾದರಿಯಾಗಿದೆ ಪುತ್ತೂರಿನ ಈ ಕೋವಿಡ್ ಕೇರ್ ಸೆಂಟರ್! ಇಲ್ಲಿನ ವ್ಯವ್ಯಸ್ಥೆ ಹೇಗಿದೆ ಗೊತ್ತಾ?

ಕೋವಿಡ್ ಕೇರ್ ಸೆಂಟರ್‌ನಲ್ಲಿ ದಿನದ  24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುತ್ತಿದ್ದು, ಮಾದರಿ ಕೋವಿಡ್ ಸೆಂಟರ್ ಆಗಿ ಗುರುತಿಸಿಕೊಂಡಿದೆ.

ಪುತ್ತೂರು ಕೋವಿಡ್ ಕೇರ್ ಸೆಂಟರ್.

ಪುತ್ತೂರು ಕೋವಿಡ್ ಕೇರ್ ಸೆಂಟರ್.

  • Share this:
ಪುತ್ತೂರು: ಕೋವಿಡ್ ಕೇರ್ ಸೆಂಟರ್‌ ಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇರೋದು ಸಾಮಾನ್ಯವೇ. ಆದರೆ ಪುತ್ತೂರಿನ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಹೇಳಿಕೊಳ್ಳುವಂತಹ  ಯಾವುದೇ ಸಮಸ್ಯೆಗಳಿಲ್ಲ. ಪುತ್ತೂರಿನ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್‌ ಮಾದರಿ ಸೆಂಟರ್ ಆಗಿ ಕಾರ್ಯಾಚರಿಸುತ್ತಿದೆ. ಇಲ್ಲಿ ಕ್ವಾರಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್- 19 ಸೋಂಕಿತರಿಗೆ ಉತ್ತಮ ವ್ಯವಸ್ಥೆಗಳಿದ್ದು, ಸಮಯಕ್ಕೆ ಸರಿಯಾಗಿ ಬಿಸಿನೀರು ಸಹಿತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ನಾವಿಲ್ಲಿ ಹ್ಯಾಪಿಯಾಗಿದ್ದೇವೆ ಯಾವುದೇ ಸಮಸ್ಯೆಗಳಿಲ್ಲದೆ ಗುಣಮುಖರಾಗುತ್ತಿದ್ದೇವೆ ಎಂದು ಸೋಂಕಿತರು ಭರವಸೆಯ ಮಾತುಗಳನ್ನಾಡುತ್ತಾರೆ ಇಲ್ಲಿರುವ ಕೋವಿಡ್ ಸೋಂಕಿತರು.

ಪುತ್ತೂರಿನಲ್ಲಿ ಬಲ್ನಾಡು ಕೋವಿಡ್ ಕೇರ್ ಸೆಂಟರ್, ಪುತ್ತೂರು ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಹಾಗೂ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದೆ. ಈ ಪೈಕಿ ಪ್ರಸ್ತುತ ಬಲ್ನಾಡುವಿನಲ್ಲಿ 28 ಮಂದಿ, ಪುತ್ತೂರಿನಲ್ಲಿ 12 ಮಂದಿ ಮತ್ತು ಉಪ್ಪಿನಂಗಡಿಯಲ್ಲಿ 3 ಮಂದಿ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಲ್ನಾಡುವಿನಲ್ಲಿ 43 ಮಂದಿ ಕೋವಿಡ್ ಸೋಂಕಿತರಾಗಿ ದಾಖಲಾತಿಗೊಂಡಿದ್ದು, 15 ಮಂದಿ ಗುಣಮುಖರಾಗಿ ಹಿಂದಿರುಗಿದ್ದಾರೆ. 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರಿನಲ್ಲಿ 34 ಮಂದಿ ದಾಖಲಾಗಿದ್ದು, 4 ಮಂದಿ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದು, 30 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಉಪ್ಪಿನಂಗಡಿಯಲ್ಲಿ 3 ಮಂದಿ ದಾಖಲಾಗಿದ್ದು ಮೂವರೂ ಚಿಕಿತ್ಸೆಯಲ್ಲಿದ್ದಾರೆ.

ಕೋವಿಡ್ ಪೀಡಿತರಿಗೆ ಔಷಧಿಗಿಂತಲೂ ಪೌಷ್ಠಿಕ ಆಹಾರ ಒದಗಿಸುವುದು ಮುಖ್ಯವಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿರುವವರಿಗೆ ಬೆಳಗ್ಗೆ ತಿಂಡಿ ಚಹಾ, ಮಧ್ಯಾಹ್ನ ಊಟದ ಜೊತೆಗೆ ಮೊಟ್ಟೆ, ಹಣ್ಣುಗಳು, ಸಂಜೆ ಕಷಾಯ, ರಾತ್ರಿ ಚಪಾತಿ, ಊಟ ನೀಡಲಾಗುತ್ತಿದೆ. ಅಲ್ಲದೇ ನಿರಂತರ ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಕೋವಿಡ್ ಕೇರ್ ಸೆಂಟರ್‌ನ ನೋಡಲ್ ಅಧಿಕಾರಿಯಾಗಿರುವ ಪ್ರಾಂಶುಪಾಲ ಸುಬ್ರಹ್ಮಣ್ಯ ನಾಯಕ್ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಸೋಂಕು ಹೆಚ್ಚಳಕ್ಕೆ ಪಂಚರಾಜ್ಯಗಳ ಚುನಾವಣೆ ಕೂಡ ಕಾರಣವಾಗಿರಬಹುದು; ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪ

ಮನೆಯಲ್ಲಿ ಕ್ವಾರಂಟೈನ್ ಮಾಡಿಕೊಂಡಿರುವ ಸಂದರ್ಭದಲ್ಲಿ ಮನೆಯ ಇತರ ಸದಸ್ಯರಿಗೆ ರೋಗ ಹರಡುವ ಅಪಾಯಗಳಿವೆ. ಆದರೆ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದರೆ ಇತರರಿಗೆ ಹರಡುವ ಅಪಾಯವಿಲ್ಲ. ಈ ಹಿನ್ನಲೆಯಲ್ಲಿ ಕೋವಿಡ್ ಸೆಂಟರ್ ಸೋಂಕಿತರಿಗೆ ಅತೀ ಸುರಕ್ಷಿತ ಸ್ಥಳವಾಗಿದೆ. ಸರ್ಕಾರದ ಆದೇಶದಂತೆ ಇಲ್ಲಿ ಎಲ್ಲಾ ರೀತಿಯ ಆರೈಕೆಯನ್ನು ಮಾಡಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ ಬಗ್ಗೆ ಭಯ, ಆತಂಕ ಬೇಡ, ಕೋವಿಡ್ ಕೇರ್ ಸೆಂಟರ್‌ನ ಬಗ್ಗೆ ನಡೆಸಲಾಗುವ ಅಪಪ್ರಚಾರ, ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಕೋವಿಡ್ ಸೋಂಕಿತರು ಇಲ್ಲಿ ದಾಖಲಾಗಿ ಸಂಪೂರ್ಣ ಆರೈಕೆಯೊಂದಿಗೆ ಕೋವಿಡ್ ಮುಕ್ತರಾಗುವುದರ ಜೊತೆಗೆ ತಮ್ಮ ಕುಟುಂಬಗಳಿಗೂ ಈ ರೋಗ ಹರಡದಂತೆ ಸುರಕ್ಷಿತತೆಯನ್ನು ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ತಹಸೀಲ್ದಾರ್ ರಮೇಶ್ ಬಾಬು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ದಿನದ  24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುತ್ತಿದ್ದು, ಮಾದರಿ ಕೋವಿಡ್ ಸೆಂಟರ್ ಆಗಿ ಗುರುತಿಸಿಕೊಂಡಿದೆ.
Published by:HR Ramesh
First published: