ಪೆನ್ನು, ಪುಸ್ತಕ ಹಿಡಿದ ಶಿಕ್ಷಕರ‌ ಕೈಗೆ ಸೌಟು ; ಜೀವನ ನಿರ್ವಹಣೆಗೆ ಆಹಾರ ಉದ್ಯಮಕ್ಕೆ ಇಳಿದ ಶಿಕ್ಷಕರು

ತಿಂಡಿ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಬಂದಲ್ಲಿ ಆನ್ ಲೈನ್ ಮೂಲಕವೂ ಮಾರಾಟ ಮಾಡುವ ಯೋಜನೆಯನ್ನೂ ಶಿಕ್ಷಕರು ಹಾಕಿಕೊಂಡಿದ್ದಾರೆ.

ಅಡುಗೆ ಮಾಡುತ್ತಿರುವ ಶಿಕ್ಷಕಿಯರು

ಅಡುಗೆ ಮಾಡುತ್ತಿರುವ ಶಿಕ್ಷಕಿಯರು

  • Share this:
ಪುತ್ತೂರು(ಜೂ.23): ವಿಶ್ವವನ್ನೇ ಕಾಡಿದ ಮಹಾಮಾರಿ ಕೊರೋನಾ ಎಲ್ಲಾ ವರ್ಗಕ್ಕೂ ಭಾರೀ ಹೊಡೆತ ನೀಡಿದೆ. ಕೊರೋನಾ ಬಳಿಕದ ಬೆಳವಣಿಗೆಯು ಹಲವರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಪೆನ್ನು, ಪುಸ್ತಕ, ಚಾಕ್  ಹಿಡಿದು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕರ ಕೈಗೆ ಬಾಣಲೆ, ಸೌಟು ಬಂದಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರ ಕೊರೊನಾ ನಂತರದ ಹೊಸ ಲೈಫ್ ಸ್ಟೈಲ್.

ವಿಶ್ವದ ವ್ಯವಹಾರವನ್ನೇ ಬುಡಮೇಲು ಮಾಡಿದ ಮಹಾಮಾರಿ ಕೊರೋನಾದಿಂದಾಗಿ ಸಂಕಷ್ಟಕ್ಕೆ ಒಳಗಾಗದವರಿಲ್ಲ. ಬೀದಿ ಬದಿಯಲ್ಲಿ ಹಣ್ಣು ಮಾರುವವನಿಂದ ಹಿಡಿದು, ಹವಾನಿಯಂತ್ರಿತ ಮಳಿಗೆಯಲ್ಲಿ ಐಷಾರಾಮಿ ವಸ್ತುಗಳನ್ನು ಮಾರುವವನೂ ಕೊರೋನಾ ಸಂಕಷ್ಟಕ್ಕೆ ಸಿಲುಕಿ ಪರಿತಪಿಸಿದ್ದಾನೆ. ಕೊರೋನಾ ಲಾಕ್ ಡೌನ್ ಬಳಿಕ ಕೆಲಸವಿಲ್ಲದೆ ಬೀದಿಗೆ ಬಂದವರ ಜೊತೆಗೆ ಇದ್ದ ಕೆಲಸವನ್ನು ತೊರೆದು ಪರ್ಯಾಯ ಮಾರ್ಗ ಹುಡುಕಿಕೊಂಡವರೂ ಹಲವರು. ಇಂಥಹುದೇ ಸಂಕಷ್ಟಕ್ಕೆ ಸಿಲುಕಿದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕರು ಪೆನ್ನು, ಪುಸ್ತಕದ ಜೊತೆಗೆ ಸೌಟು, ಬಾಣಲೆಯನ್ನೂ ಹಿಡಿಯಲು ಆರಂಭಿಸಿದ್ದಾರೆ.

ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ಸುಮಾರು 90 ಕ್ಕೂ ಮಿಕ್ಕಿದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿದ್ದು, ಇವರಿಗೆ ಸಂಬಳ ನೀಡುವುದೇ ಶಿಕ್ಷಣ ಸಂಸ್ಥೆಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳ ಫೀಸ್ ಹಣದಿಂದಲೇ ಸಂಸ್ಥೆ ನಡೆಸುತ್ತಿರುವ ಈ ಸಂಸ್ಥೆಗೆ ಸಂಕಷ್ಟವನ್ನು ಮನಗಂಡ ಶಿಕ್ಷಕರು ಶಾಲಾ ಕೊಠಡಿಯಲ್ಲಿ ಇದೀಗ ಆಹಾರ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಹಲಸಿನ ಚಿಪ್ಸ್, ಹಲಸಿನ ಬೀಜದ ಲಡ್ಡು ಹೀಗೆ ವಿವಿಧ ಪ್ರಕಾರದ ತಿಂಡಿ-ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ದು, ಶಿಕ್ಷಕರಿಗೆ ಸಂಸ್ಥೆಯ ವತಿಯಿಂದಲೇ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡಲಾಗಿದೆ.

ಸಂಸ್ಥೆಯಲ್ಲಿ ದುಡಿಯುತ್ತಿರುವ ಹಲವು ಶಿಕ್ಷಕರ ಆರ್ಥಿಕ ಸಮಸ್ಯೆಯನ್ನು ಎದುರಿಸುವ ಕುಟುಂಬಗಳಿಂದಲೇ ಬಂದವರಾಗಿದ್ದು, ತಿಂಡಿ-ತಿನಿಸುಗಳ ಮಾರಾಟದಿಂದ ಬಂದ ಹಣವನ್ನು ಹಂಚಿಕೊಳ್ಳಲು ಈ ಶಿಕ್ಷಕರು ತೀರ್ಮಾನಿಸಿದ್ದಾರೆ. ತಿಂಡಿ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಬಂದಲ್ಲಿ ಆನ್ ಲೈನ್ ಮೂಲಕವೂ ಮಾರಾಟ ಮಾಡುವ ಯೋಜನೆಯನ್ನೂ ಶಿಕ್ಷಕರು ಹಾಕಿಕೊಂಡಿದ್ದಾರೆ.

ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಪರಾಮರ್ಶಿಸಿದಾಗ ಶಾಲೆ ಪ್ರಾರಂಭವಾಗಲು ಇನ್ನೂ ನಾಲ್ಕೈದು ತಿಂಗಳೇ ಹಿಡಿಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುವ ಶಿಕ್ಷಕರ ಪಾಡೇನು ಎನ್ನುವ ಚಿಂತೆಯಲ್ಲಿರುವ ಶಿಕ್ಷಕ ವರ್ಗಕ್ಕೆ ಅಂಬಿಕಾ ಶಿಕ್ಷಣ ಸಂಸ್ಥೆಯ ಶಿಕ್ಷಕರು ಆರ್ಥಿಕ ಸ್ವಾವಲಂಭನೆಯ ಹೊಸ ಮಾರ್ಗವನ್ನು ತೋರಿಸಿಕೊಟ್ಟಂತಾಗಿದೆ. ತರಗತಿಯಲ್ಲಿ ಪೆನ್ನು, ಪೆನ್ಸಿಲ್, ಪುಸ್ತಕಗಳಿಗೆ ಸೀಮಿತವಾಗಿದ್ದ  ಅಂಬಿಕಾ ಸಂಸ್ಥೆಯ ಶಿಕ್ಷಕರು ಇದೀಗ ತಿಂಡಿ-ತಿನಿಸುಗಳನ್ನು ತಯಾರಿಸಿ ತಮ್ಮದೇ ಆದಾಯ ಮೂಲವನ್ನು ಹುಡುಕಿಕೊಂಡಿದ್ದಾರೆ.

ಕೇವಲ ‍ಒಬ್ಬರು, ಇಬ್ಬರು ಸೇರಿ ಇಂಥಹ ಉದ್ಯಮವನ್ನು ನಿರ್ವಹಿಸುವುದು ಸಾಧ್ಯವಿಲ್ಲದ ಕಾರಣ ಎಲ್ಲಾ ಶಿಕ್ಷಕರು ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನುತ್ತಾರೆ ಅಂಬಿಕಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ.

ಶಿಕ್ಷಕರ ಈ ನಿರ್ಧಾರಕ್ಕೆ ಶಾಲೆಯ ಆಡಳಿತ ಮಂಡಳಿಯೂ ಎಲ್ಲಾ ಸಹಕಾರಗಳನ್ನೂ ನೀಡಿದೆ. ಆಹಾರ ಉತ್ಪನ್ನಗಳ ತಯಾರಿಕೆಗೆ 50 ಸಾವಿರ ರೂಪಾಯಿಗಳ ಮೊದಲ ಬಂಡವಾಳವನ್ನು ಸಂಸ್ಥೆಯೇ ನೀಡಿದೆ. ಅಲ್ಲದೆ ತಿಂಡಿ-ತಿನಿಸುಗಳನ್ನು ತಯಾರಿಸಲು ಶಾಲಾ ಕೊಠಡಿಗಳನ್ನು, ವಿದ್ಯುತ್ ಸಂಪರ್ಕ, ಗ್ಯಾಸ್ ಒಲೆಗಳ ವ್ಯವಸ್ಥೆಯನ್ನು ನೀಡಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಶಿಕ್ಷಕರು ತಯಾರಿಸುವ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ತಲುಪಿಸಲು ಬೇಕಾದ ವಾಹನದ ವ್ಯವಸ್ಥೆಯನ್ನೂ ಶಿಕ್ಷಣ ಸಂಸ್ಥೆಯೇ ನೀಡಲು ಮುಂದಾಗಿದೆ.

ಇದನ್ನೂ ಓದಿ : ಎಟಿಎಂಗೆ ಸ್ಕೀಮ್ಮರ್ ಅಳವಡಿಸಲು ಯತ್ನ; ಇಬ್ಬರು ವಿದೇಶಿ ಪ್ರಜೆಗಳ ಬಂಧನ

ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಕಟ್ಟಿದಂತಹ ಶಿಕ್ಷಣ ಸಂಸ್ಥೆಗೆ ಬ್ಯಾಂಕ್ ಸಾಲದ ಜೊತೆಗೆ ಸಿಬ್ಬಂದಿಗಳ ಸಂಬಳ ನೀಡಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಈ ರೀತಿಯ ವ್ಯವಸ್ಥೆಗಳು ಅನಿವಾರ್ಯವೂ ಆಗಿದೆ ಎನ್ನುವುದು  ಅಂಬಿಕಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಭಿಪ್ರಾಯವಾಗಿದೆ.

ಶಿಕ್ಷಕರ ಸಂಬಳ ನೀಡಲಾಗದೆ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಅರ್ಧ ದಾರಿಯಲ್ಲೇ ಕೈ ಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಆದರೆ ಪುತ್ತೂರಿನ ಈ ಶಿಕ್ಷಣ ಸಂಸ್ಥೆ ತನ್ನ ಜೊತೆ ದುಡಿಯುವ ಶಿಕ್ಷಕರನ್ನು ನಡು ದಾರಿಯಲ್ಲಿ ಕೈ ಬಿಡದೆ, ಶಿಕ್ಷಕರನ್ನೂ ಆರ್ಥಿಕ ಸ್ವಾವಲಂಭಿಗಳನ್ನಾಗಿ ಮಾಡುವ ಕಾರ್ಯದಲ್ಲಿ ಮುಂದಾಗಿದೆ.
First published: