ಮೈಸೂರು: ದಸರಾ ಮಹೋತ್ಸವ ಈಗ ಜನಪ್ರತಿನಿಧಿಗಳ ಜೇಬು ತುಂಬಿಸುವ ಹಬ್ಬವಾಗಿ ಮಾರ್ಪಟ್ಟಿದೆ. ಸರಳ ದಸರಾಕ್ಕೂ 15 ಕೋಟಿ ರೂ. ಖರ್ಚು ಮಾಡಲು ಹೊರಟಿರುವ ಸರ್ಕಾರದ ನಡೆ ಇಂತಹದ್ದೊಂದು ಆರೋಪಕ್ಕೆ ಆಹಾರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಠಕ್ಕೆ ಬಿದ್ದು ಕೊರೋನಾ ಅಂಟಿಸಲು ಹೊರಟಿದ್ದಾರೆ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಸರಳ ದಸರಾಕ್ಕೂ ಅಷ್ಟೇ ಹಣ, ಅದ್ದೂರಿ ದಸರಾಕ್ಕೂ ಅಷ್ಟೇ ಹಣ ಏಕೆ ಎಂಬ ಪ್ರಶ್ನೆ ದೊಡ್ಡದಾಗಿ ಕಾಡತೊಡಗಿದೆ.
ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ. ಇಷ್ಟೊತ್ತಿಗೆ ಅಂತಿಮ ಹಂತದ ಸಿದ್ಧತೆಗಳು ನಡೆಯಬೇಕಿತ್ತು. ಆದ್ರೆ ಕೊರೋನಾ ಕಾರಣಕ್ಕಾಗಿ ಯಾವೊಂದು ಚಟುವಟಿಕೆಗಳೂ ಕಾಣುತ್ತಿಲ್ಲ. ಆದ್ರೆ ಸರ್ಕಾರ ವ್ಯಯಿಸಲು ಉದ್ದೇಶಿಸಿರುವ ಅನುದಾನದ ಬಗ್ಗೆ ಅಪಸ್ವರಗಳು ಶುರುವಾಗಿವೆ. ಸರಳ ದಸರಾ ಮಾಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ, 15 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಆದ್ರೆ 15 ಕೋಟಿ ಬಗ್ಗೆ ಈಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಕಳೆದ ಬಾರಿ ಅದ್ದೂರಿಯಾಗಿ ದಸರಾ ಮಾಡಿದಾಗಲೂ 15 ಕೋಟಿ ರೂ. ಖರ್ಚಾಗಿತ್ತು. ಈ ವರ್ಷ ದಸರಾವನ್ನೇ ಮಾಡದೆ 15 ಕೋಟಿ ರೂ. ಮಂಜೂರು ಮಾಡಿಸಿಕೊಳ್ಳಲಾಗಿದೆ. ಇನ್ನು ದಸರಾ ಅನುದಾನದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡುತ್ತಿದ್ದಾರೆ, ಅದು ಕೂಡ ಅನುದಾನದ ಹಣದಲ್ಲಿ. ಚಾಮುಂಡಿ ವಿದ್ಯುತ್ ಸರಬರಾಜು ನಿಗಮದಿಂದ ಅದಕ್ಕೆ ನೀಡಲಾಗುತ್ತೆ. ಹಾಗಾದರೆ 15 ಕೋಟಿ ಹಣ ಯಾರ ಜೇಬಿಗೆ ಸೇರುತ್ತಿದೆ ಅಂತ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ದಸರಾಗೆ ಕೊರೋನಾ ವಾರಿಯರ್ಸ್ ಪಟ್ಟಿ ಸಿದ್ಧ; ಎಷ್ಟು ಜನ ಸೇರಬೇಕೆಂಬುದು ಶುಕ್ರವಾರ ನಿರ್ಧಾರ: ಎಸ್.ಟಿ. ಸೋಮಶೇಖರ್
ಕಳೆದ ವರ್ಷ ಆಗಷ್ಟೇ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಸಂಪುಟ ವಿಸ್ತರಣೆ ಆಗಿದ್ದರೂ ಜಿಲ್ಲಾ ಉಸ್ತುವಾರಿಗಳ ನೇಮಕ ಆಗಿರಲಿಲ್ಲ. ಆ ಹಂತದಲ್ಲಿ ಮೈಸೂರಿಗೆ ಬಂದ ವಿ. ಸೋಮಣ್ಣ, ದಸರಾ ಸಿದ್ಧತೆಗಳ ಮೇಲುಸ್ತುವಾರಿ ನೋಡಿಕೊಂಡಿದ್ದರು. ಅತ್ಯಂತ ವಿಜೃಂಭಣೆಯಿಂದ ದಸರಾ ಸಂಘಟಿಸಿದ್ದರು. ಆಗಲೂ ಬಿಡುಗಡೆಯಾಗಿದ್ದು 15 ಕೋಟಿ ರೂ. ವಿಜೃಂಭಣೆಯಿಂದ ದಸರಾ ಮಾಡಿ, 106ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದಾಗಲೂ 15 ಕೋಟಿ ರೂ. ಬಿಡುಗಡೆ ಆಗಿತ್ತು. ಆಗ ಯುವ ದಸರಾ, ಮಹಿಳೆ ದಸರಾ, ಆಹಾರ ಮೇಳ, ಮಕ್ಕಳ ದಸರಾ, ಫಲಪುಷ್ಪ ಪ್ರದರ್ಶನ ಹೀಗೆ ಸಾಕಷ್ಟು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈಗ ಯಾವುದೇ ಕಾರ್ಯಕ್ರಮಗಳಿಲ್ಲ. ಆದರೂ 15 ಕೋಟಿ ರೂ. ಯಾಕೆ? ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಠಕ್ಕೆ ಬಿದ್ದು ದಸರಾ ಮಾಡುತ್ತಿದ್ದಾರೆ. ಒಂದು ವೇಳೆ ದಸರಾದಿಂದಾಗಿ ಕೊರೋನಾ ಸ್ಪೋಟಿಸಿದರೆ ಅವರಿಬ್ಬರೇ ಹೊಣೆ ಅಂತ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಸದ್ಯ ಶಾಲೆ ತೆರೆಯಲ್ಲ; ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಸಿಎಂ ಬಿಎಸ್ ಯಡಿಯೂರಪ್ಪ
ಒಟ್ಟಾರೆ, ಹೆಸರಿಗೆ ಸರಳ ದಸರಾ, ಆದರೆ ಯಾವುದೇ ಕಾರ್ಯಕ್ರಮ ಮಾಡದೆ ಹಣ ಮಾತ್ರ 15 ಕೋಟಿ ಬಿಡುಗಡೆ ಮಾಡಿಕೊಂಡಿರೋದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರೋದಂತು ಸುಳ್ಳಲ್ಲ. ಇನ್ನು ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿಲ್ಲ. ಆದರೂ ಹಣ ಬಿಡುಗಡೆ ಮಾಡಿಕೊಂಡು ದೀಪಾಲಂಕಾರದ ಸಿದ್ದತೆ ಮಾಡಿಕೊಳ್ಳುತ್ತಿರೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ಪುಟ್ಟಪ್ಪ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ