HOME » NEWS » District » PUBLIC AGITATION TO CROSS HIGHWAY NEAR T DASARAHALLI LOCALS DEMAND CONSTRUCTION OF SKYWALK ANLM MAK

ಟಿ.ದಾಸರಹಳ್ಳಿ ಬಳಿ ಹೆದ್ದಾರಿ ದಾಟಲು ಸಾರ್ವಜನಿಕರ ಪರದಾಟ: ಸ್ಕೈವಾಕ್ ನಿರ್ಮಾಣಕ್ಕೆ ಸ್ಥಳೀಯರ ಒತ್ತಾಯ

ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಪಾದಚಾರಿಗಳು ರಸ್ತೆ ದಾಟಲು ಸ್ವಲ್ಪ ಓಪನ್ ಇಟ್ಟು ಜೀಬ್ರಾ ಪಟ್ಟಿ ಹಾಕಲಾಗಿದೆ. ಆದರೆ ಇಲ್ಲಿ ಯಾವುದೇ ಸುರಕ್ಷತೆ ಇಲ್ಲ.‌

news18-kannada
Updated:February 24, 2021, 10:19 PM IST
ಟಿ.ದಾಸರಹಳ್ಳಿ ಬಳಿ ಹೆದ್ದಾರಿ ದಾಟಲು ಸಾರ್ವಜನಿಕರ ಪರದಾಟ: ಸ್ಕೈವಾಕ್ ನಿರ್ಮಾಣಕ್ಕೆ ಸ್ಥಳೀಯರ ಒತ್ತಾಯ
ಟಿ.ದಾಸರಹಳ್ಳಿಯಲ್ಲಿ ರಸ್ತೆ ದಾಟುತ್ತಿರುವ ಜನ.
  • Share this:
ಬೆಂಗಳೂರು (ಫೆಬ್ರವರಿ. 24): ಬೆಂಗಳೂರು-ತುಮಕೂರು-ಪುಣೆ-ದೆಹಲಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇರುವ ಪ್ರಮುಖ ಪ್ರದೇಶ ದಾಸರಹಳ್ಳಿ. ಇದರ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆ ವಾಸಿಸುತ್ತಿದೆ. 90 ರ ದಶಕದಲ್ಲಿ ಅಲ್ಲೊಂದು ಇಲ್ಲೊಂದು ಮನೆಯಿದ್ದ ದಾಸರಹಳ್ಳಿ ಮತ್ತು ಸುತ್ತಮುತ್ತಲಿನ ಭಾಗ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ.  ದಾಸರಹಳ್ಳಿ ಈ ಭಾಗದ ಜನರಿಗೆ ಒಂದು ರೀತಿಯಲ್ಲಿ ಕೆ ಆರ್ ಮಾರುಕಟ್ಟೆ ಇದ್ದ ಹಾಗೆ ಎಂದರೆ ತಪ್ಪಾಗಲಾರದು. ಹೆದ್ದಾರಿ ಪಕ್ಕದ ಮಾರ್ಕೆಟ್ ನಲ್ಲಿ ಎಲ್ಲವೂ ಲಭ್ಯ, ಈ ಭಾಗದಲ್ಲಿ ಕೆಳ ಮತ್ತು ಮಧ್ಯಮ ವರ್ಗದ ಜನರೇ ಅಧಿಕವಾಗಿದ್ದು ಅದರಲ್ಲೂ ಹಳ್ಳಿ ಪ್ರದೇಶಗಳಿಂದ ಬಂದು ಬದುಕು ಕಟ್ಟಿಕೊಂಡವರೇ ಹೆಚ್ಚು. ಏಕೆಂದರೆ ಹೆದ್ದಾರಿ ಪಕ್ಕದಲ್ಲೇ ಇರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಕಾರ್ಖಾನೆಗಳಲ್ಲಿ ಲಕ್ಷಾಂತರ ಮಂದಿ ಕೆಲಸಕ್ಕೆ ಹೋಗುವುದು ಒಂದು ಕಡೆಯಾದರೆ ಊರುಗಳಿಂದ ಬಂದರೆ ಬೇಗ ಮನೆ ಸೇರಬಹುದು ಎನ್ನುವ ಕಾರಣಕ್ಕೆ ದಾಸರಹಳ್ಳಿ ಸುತ್ತಮುತ್ತ ಲಕ್ಷಾಂತರ ಮಂದಿ ವಾಸಿಸುತ್ತಾರೆ.

ಒಂದು ಕಾಲದಲ್ಲಿ ಆಗೊಂದು ಈಗೊಂದು ವಾಹನ ಹಾದು ಹೋಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈಗ ಬಿಡುವಿಲ್ಲದೆ ವಾಹನಗಳು ತಿರುಗುತ್ತವೆ. ಬಿಕೋ ಎನ್ನುತ್ತಿದ್ದ ರಸ್ತೆ ಈಗ ಜನಸಂದಣಿಯಿಂದ ಸದಾ ಗಿಜುಗುಡುತ್ತಿದ್ದು ಅತ್ತಿಂದಿತ್ತ ರಸ್ತೆ ದಾಟುವವರ ಪಾಡು ಹೇಳತೀರದು.

ಮೆಟ್ರೋ ಪ್ರಯಾಣಿಕರಿಗೆ ಸಮಸ್ಯೆ:

ದಾಸರಹಳ್ಳಿಯಲ್ಲಿ ಮೆಟ್ರೋ ನಿಲ್ದಾಣ ಸಹ ಇರುವುದು ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ‌ ಕಾರಣವೇಂದೆ ಹೇಳಬಹುದು, ನಗರದ ಒಳ ಭಾಗದಲ್ಲಿದ್ದವರೆಲ್ಲಾ ಕಡಿಮೆ ಬಾಡಿಗೆ ಮನೆ ಹಿಡಿದು ಮೆಟ್ರೋದಲ್ಲಿ ಅರಾಮವಾಗಿ ಓಡಾಡಲು ಶುರು ಮಾಡಿದ್ದಾರೆ. ಮೆಟ್ರೋದಿಂದ ಬರುವ ಪ್ರಯಾಣಿಕರು ರೈಲು ಇಳಿದು ಹೆದ್ದಾರಿ ಎಡ ಭಾಗಕ್ಕೆ ಚೊಕ್ಕಸಂದ್ರ ಕಡೆಗೆ ಹೋಗುವವರಿಗೆ ಯಾವುದೇ ಮೇಲ್ಸೇತುವೆ ಇಲ್ಲದ ಕಾರಣ ಭಯದಿಂದಲೇ ರಸ್ತೆ ದಾಟುವಂತಾಗಿದೆ. ಮೆಟ್ರೋದಿಂದ ಇಳಿದು ಬರುವವರು ಹಾಗೂ ಚೊಕ್ಕಸಂದ್ರ ಕಡೆಯಿಂದ ಮೆಟ್ರೋಗೆ ಹೋಗುವವರು ಹೆದ್ದಾರಿ ದಾಟಿಯೇ ಹೋಗುವುದು ಅನಿವಾರ್ಯವಾಗಿದೆ.

ಅತೀ ವೇಗದ ಚಾಲನೆ:

ಹೆದ್ದಾರಿ ಆದ ಕಾರಣ ವಾಹನಗಳು ಅತೀ ವೇಗವಾಗಿ ಚಲಿಸುತ್ತಿರುತ್ತವೆ ವಾಹನಗಳ ವೇಗವನ್ನ ನೋಡಿಕೊಂಡು ರಸ್ತೆ ದಾಟುವುದು ಕಷ್ಟಕರವಾಗಿದೆ. ಇನ್ನೂ ವಯಸ್ಸಾದವರು ಹಾಗೂ ಮಕ್ಕಳಿಗಂತೂ ದಿನವೂ ಒಂದು ಜನ್ಮ ಕಂಡಂತಾಗುತ್ತದೆ. ಇದೆಲ್ಲಾ ಒಂದು ಕಡೆಯಾದರೆ  ಎರಡೂ ಕಡೆ ಬಿಎಂಟಿಸಿ ಬಸ್ ನಿಲ್ದಾಣ ಸಹ ಇದ್ದು ಪ್ರತಿದಿನ ನೂರಾರು ಬಸ್ ಗಳು ಇಲ್ಲಿ ಬಂದು ನಿಲ್ಲುತ್ತವೆ.

ಬಸ್ ಗೆ ಹತ್ತುವವರು ಮತ್ತು ಇಳಿಯುವವರು ಸಹ ಅತ್ತಿಂದಿತ್ತ ಹೋಗಬೇಕಾದರೆ ಅದೇ ಸರ್ಕಸ್ ಮಾಡಬೇಕು. ಇಲ್ಲೊಂದು ಸ್ಕೈವಾಕ್ ನಿರ್ಮಿಸಬೇಕೆಂದು ಸ್ಥಳೀಯರು ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿಕೊಂಡಿದ್ದಾರಾದರೂ ಯಾವುದೇ ಪ್ರಯೋಜನವಾಗಿಲ್ಲ.ಸುರಕ್ಷತೆ ಇಲ್ಲ:

ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಪಾದಚಾರಿಗಳು ರಸ್ತೆ ದಾಟಲು ಸ್ವಲ್ಪ ಓಪನ್ ಇಟ್ಟು ಜೀಬ್ರಾ ಪಟ್ಟಿ ಹಾಕಲಾಗಿದೆ. ಆದರೆ ಇಲ್ಲಿ ಯಾವುದೇ ಸುರಕ್ಷತೆ ಇಲ್ಲ.‌ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ರಸ್ತೆ ದಾಟಲು ಅವಕಾಶ ಮಾಡಿಕೊಡುವುದನ್ನು ಬಿಟ್ಟು ಮರೆಯಲ್ಲಿ ನಿಂತು ವಾಹನಗಳನ್ನು ಹಿಡಿಯುವುದಕ್ಕೆ ಸೀಮಿತವಾಗಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಬೆಳೆದ ರೈತ; ಟ್ವಿಟರ್​ನಲ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಬೇಡದೆ ಇರೋ ಕಡೆ ಪ್ಲೈಓವರ್, ಸ್ಕೈವಾಕ್ ನಿರ್ಮಿಸ್ತಾರೆ, ಬೇಕಾದ ಕಡೆ ಇರಲ್ಲ. ದಾಸರಹಳ್ಳಿಯಲ್ಲಿ ಬಸ್ ಇಳಿದು ರಸ್ತೆ ದಾಟಬೇಕು ಅಂದರೆ ದೊಡ್ಡ ಸರ್ಕಸ್ ಮಾಡಬೇಕು. ಸಂಬಂಧಪಟ್ಟ ಶಾಸಕರು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯ ವ್ಯಾಪಾರಿ ಜನಾರ್ಧನ ಮನವಿ ಮಾಡಿದ್ದಾರೆ.

ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಇಲ್ಲಿ ಹೆಚ್ಚು ಸಮಯ ವಾಹನಗಳನ್ನು ತಡೆ ಹಿಡಿದು ಪಾದಚಾರಿಗಳನ್ನು ರಸ್ತೆ ದಾಟಿಸಲು ಸಾಧ್ಯವಿಲ್ಲ. ಪಾದಚಾರಿಗಳು ರಸ್ತೆ ದಾಟುವುದೇ ದೊಡ್ಡ ಸಮಸ್ಯೆ ಆಗಿದೆ. ಆದ್ದರಿಂದ ಇಲ್ಲೊಂದು ಸ್ಕೈವಾಕ್ ನಿರ್ಮಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಹೆಸರು ಹೇಳ ಬಯಸದ ಸಂಚಾರಿ ಪೊಲೀಸ್ ಪೇದೆ.
Published by: MAshok Kumar
First published: February 24, 2021, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories