ರಾಜಕೀಯ, ಮಾನಸಿಕ ಒತ್ತಡದಿಂದ ಚನ್ನರಾಯಪಟ್ಟಣ ಪಿಎಸ್​ಐ ಕಿರಣ್ ಕುಮಾರ್ ಆತ್ಮಹತ್ಯೆ; ತನಿಖಾ ವರದಿ

ರಾಜ್ಯದಲ್ಲಿ ಗಮನ ಸೆಳೆದಿದ್ದ ಕಿರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಅಂತಿಮವಾಗಿ ತನಿಖಾ ವರದಿ ಹೊರಬಿದ್ದಿದೆ. ಕಿರಣ್ ಕುಮಾರ್ ಅವರಿಗೆ ಮಾನಸಿಕವಾಗಿ ಒತ್ತಡ ಹೇರಿ ಸಾವಿಗೆ ಕಾರಣವಾದವರು ಯಾರು? ಕರೆ ಮಾಡಿದ ವ್ಯಕ್ತಿಗಳು ಯಾರು? ಇವರ ವಿರುದ್ಧ ಸರ್ಕಾರ ಯಾವ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಆತ್ಮಹತ್ಯೆ ಮಾಡಿಕೊಂಡ ಪಿಎಸ್​ಐ ಕಿರಣ್ ಕುಮಾರ್.

ಆತ್ಮಹತ್ಯೆ ಮಾಡಿಕೊಂಡ ಪಿಎಸ್​ಐ ಕಿರಣ್ ಕುಮಾರ್.

  • Share this:
ಹಾಸನ; ರಾಜಕೀಯ ಹಿನ್ನೆಲೆ ಇರುವ ವ್ಯಕ್ತಿಗಳ ಒತ್ತಡ ಹಾಗೂ ಮಾನಸಿಕವಾಗಿ ಖಿನ್ನತೆ ಇದ್ದ ಕಾರಣ ಚನ್ನರಾಯಪಟ್ಟಣ ಠಾಣೆಯ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಕಿರಣ್ ಕುಮಾರ್ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಿರಣ್ ಕುಮಾರ್ ಅವರ ಆತ್ಮಹತ್ಯೆ ನಂತರ ಪ್ರಕರಣ ಸಂಬಂಧ ಅರಸೀಕೆರೆ ಡಿವೈಎಸ್ಪಿ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿತ್ತು. ಹಲವು ದಿನಗಳು ಕೈಗೊಂಡ ಪ್ರಾಮಾಣಿಕ ತನಿಖೆ ಇದೀಗ ಮುಗಿಸಿದ್ದಾರೆ. ಕಿರಣ್ ಕುಮಾರ್ ಅವರ ಆತ್ಮಹತ್ಯೆಗೂ ಮುನ್ನ ಅವರು ಮಾಡಿರುವ ಫೋನ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಿರಣ್ ಕುಮಾರ್ ಅವರಿಗೆ ಬಂದಂತಹ ಪ್ರತಿಯೊಂದು ಕರೆ ಮಾಡಿದವರಿಗೆ ವಿಚಾರಣೆ ನಡೆಸಿರುವ ಡಿವೈಎಸ್ಪಿ ಅವರು ಅಂತಿಮವಾಗಿ ತನಿಖಾ ವರದಿ ಸಿದ್ದಪಡಿಸಿದ್ದಾರೆ. ಈ ಸಂಬಂಧ ಅಧಿಕೃತ ವಿಸ್ತೃತ ವರದಿಯನ್ನು ಡಿವೈಎಸ್ಪಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯನ್ನು ಕೂಲಂಕಷವಾಗಿ ಪರಾಮರ್ಶಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ಶ್ರೀನಿವಾಸಗೌಡ ಸ್ಪಷ್ಟಪಡಿಸಿದ್ದಾರೆ.

ಕಿರಣ್ ಕುಮಾರ್ ಅವರಿಗೆ ಕರೆ ಮಾಡಿರುವ ವ್ಯಕ್ತಿಗಳು ಯಾರು? ರಾಜಕಾರಣಿಗಳು ಯಾರು?  ಹಾಗೂ ರಾಜಕಾರಣಿಗಳ ಬೆಂಬಲಿಗರು ಯಾರು? ಎಂಬ ಬಗ್ಗೆ ಅಧಿಕೃತ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ಲಭ್ಯವಾಗಲಿದೆ.

ಇದನ್ನು ಓದಿ: ಟಿಆರ್​ಎಸ್ ಅಧಿಕಾರ ಕಳೆದುಕೊಳ್ಳುವ ದಿನ ಸಮೀಪಿಸಿದೆ ಎಂಬುದಕ್ಕೆ ಜಿಎಚ್​ಎಂಸಿ ಚುನಾವಣಾ ಫಲಿತಾಂಶವೇ ಸಾಕ್ಷಿ; ಕೆ.ಸುಧಾಕರ್

ಇನ್ನು ಕಿರಣ್ ಕುಮಾರ್ ಅವರಿಗೆ ರಾಜಕೀಯ ವ್ಯಕ್ತಿಗಳು ಕರೆ ಮಾಡಿದ್ದಾರೆ ಹಾಗೂ ಇದೇ ಕಾರಣದಿಂದ ಸಾವಿಗೀಡಾಗಿದ್ದಾರೆ ಎಂದು ಅಂತಿಮವಾಗಿ ಹೇಳಲಾಗದು. ಕಾರಣ ಪೊಲೀಸ್ ಸಿಬ್ಬಂದಿ ಎಂದ ಮೇಲೆ ರಾಜಕಾರಣಿಗಳು ಕರೆ ಮಾಡುವುದು ಸಾಮಾನ್ಯ. ಕಾರಣ ಏನೇ ಇರಲಿ. ಕಿರಣ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಬಾರದಿತ್ತು ಎಂಬುದು ಪೊಲೀಸ್ ಇಲಾಖೆಯಲ್ಲಿನ ಕಿರಣ್ ಸ್ನೇಹಿತರು‌ ಹಾಗೂ ಸಂಬಂಧಿಕರ ಅಭಿಪ್ರಾಯವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಗಮನ ಸೆಳೆದಿದ್ದ ಕಿರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಅಂತಿಮವಾಗಿ ತನಿಖಾ ವರದಿ ಹೊರಬಿದ್ದಿದೆ. ಕಿರಣ್ ಕುಮಾರ್ ಅವರಿಗೆ ಮಾನಸಿಕವಾಗಿ ಒತ್ತಡ ಹೇರಿ ಸಾವಿಗೆ ಕಾರಣವಾದವರು ಯಾರು? ಕರೆ ಮಾಡಿದ ವ್ಯಕ್ತಿಗಳು ಯಾರು? ಇವರ ವಿರುದ್ಧ ಸರ್ಕಾರ ಯಾವ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ - ಡಿಎಂಜಿ ಹಳ್ಳಿ ಅಶೋಕ್
Published by:HR Ramesh
First published: