ಶಿವಮೊಗ್ಗ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ಸ್ಗಗಿತಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಕಾನೂನು, ನಿಯಮಾವಳಿ ಪ್ರಕಾರ ಪರವಾನಗಿ ಪಡೆದು ಗಣಿಗಾರಿಕೆ ಮತ್ತು ಖನಿಜ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು. ಜಿಲ್ಲಾ ಕ್ವಾರಿ, ಕ್ರಷರ್ ಮತ್ತು ಮರಳು ಸಾಗಾಣಿಕಾ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ ಕ್ವಾರಿಗಳ ಸಮಗ್ರ ಸ್ಥಿತಿಗತಿ ಪರಿಶೀಲನೆಗೆ ಹಾಗೂ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ಡ್ರೋನ್ ಮೂಲಕ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪರವಾನಗಿ ಪಡೆದವರು ನಿಯಮಾವಳಿ ಉಲ್ಲಂಘಿಸದೆ ಗಣಿಗಾರಿಕೆ ಮತ್ತು ಸಾಗಾಟ ನಡೆಸಬೇಕು ಎಂದು ಇದೇ ವೇಳೆ ಸೂಚನೆ ಕೊಟ್ಟರು. ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯದಿಂದ ಗಣಿಗಾರಿಕೆ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದರು. ಸ್ಥಳ ತಪಾಸಣೆ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿ ಸಹ ಉಪಸ್ಥಿತರಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ನಿರ್ವಹಣೆ
ಜನರಿಗೆ ಸುಲಭವಾಗಿ ಮರಳು ಸಿಗುವಂತೆ ಖಾತ್ರಿಪಡಿಸಲು ಸರ್ಕಾರ ಹೊಸ ಮರಳು ನೀತಿಯನ್ನು ಜಾರಿಗೊಳಿಸಿದೆ. ಅದರ ಪ್ರಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಳ್ಳ ತೊರೆಗಳಲ್ಲಿ ಲಭ್ಯವಿರುವ ಮರಳನ್ನು ಗುರುತಿಸಿ ಸ್ಥಳೀಯವಾಗಿ ಅದನ್ನು ವಿಲೇವಾರಿ ಮಾಡಲು ಗ್ರಾಮ ಪಂಚಾಯತ್ ಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತೀರ್ಥಹಳ್ಳಿ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಈಗಾಗಲೇ 24 ಕಡೆಗಳಲ್ಲಿ ಇಂತಹ ಮರಳು ಸಂಗ್ರಹವನ್ನು ಗುರುತಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸಮಿತಿಯು ನಿಗದಿಪಡಿಸಿದ ಪ್ರಮಾಣದ ಮರಳನ್ನು ದೈಹಿಕ ಶ್ರಮದಿಂದ ಹೊರ ತೆಗೆದು ಟ್ರ್ಯಾಕ್ಟರ್, ಚಕ್ಕಡಿಯಂತಹ ಸಣ್ಣ ವಾಹನಗಳ ಮೂಲಕ ಸಾಗಿಸಲು ಮಾತ್ರ ಅವಕಾಶವಿದೆ. ಆಶ್ರಯ ಮನೆ ನಿರ್ಮಾಣ, ಸರ್ಕಾರಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಸ್ಥಳೀಯವಾಗಿ ಮರಳು ನಿರ್ವಹಣೆಗೆ ಗ್ರಾಮ ಪಂಚಾಯತ್ ಪಿಡಿಒ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ನೇರ ಹೊಣೆಯಾಗಿದ್ದು, ಮಾರ್ಗ ಸೂಚಿಯನ್ನು ಉಲ್ಲಂಘಿಸುವವರ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ ಈ ರೀತಿಯಲ್ಲಿ 2.56 ಮೆಟ್ರಿಕ್ ಟನ್ ಮರಳು ಲಭ್ಯವಿದೆ. ಬೇರೆ ತಾಲೂಕುಗಳಲ್ಲಿ ಇಂತಹ ಮರಳು ಸಂಗ್ರಹ ಗುರುತಿಸುವ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ ಕ್ವಾರಿಗಳ ಸಮಗ್ರ ಸ್ಥಿತಿಗತಿ ಪರಿಶೀಲನೆಗೆ ಹಾಗೂ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ಡ್ರೋನ್ ಮೂಲಕ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನು ಓದಿ: 6 ಸಚಿವರು ರಾಜೀನಾಮೆ ಕೊಡಬೇಕು, ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರದ ಕೇಸ್ ಹಾಕಬೇಕು; ಸಿದ್ದರಾಮಯ್ಯ ಪಟ್ಟು
ಪ್ರಸ್ತುತ ವರ್ಷ ಇದುವರೆಗೆ ಜಿಲ್ಲೆಯಲ್ಲಿ ನಾಲ್ಕು ಅಕ್ರಮ ಮರಳು ಸಾಗಾಟ ಮತ್ತು ದಾಸ್ತಾನು ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅನಧಿಕೃತ ಮರಳುಗಾರಿಕೆಯ 33 ಪ್ರಕರಣಗಳಲ್ಲಿ 23.26 ಲಕ್ಷ ರೂ. ದಂಡ ವಿಧಿಸಲಾಗಿದೆ. 18 ಅನಧಿಕೃತ ಕಲ್ಲು ಗಣಿಗಾರಿಕೆ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅನಧಿಕೃತ ಕಲ್ಲು ಗಣಿಗಾರಿಕೆ ಹಾಗೂ ಸಾಗಾಟದ 54 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 41 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ರಾಮ್ಜಿ ಅವರು ತಿಳಿಸಿದರು.
ಎಸ್ ಪಿ ಕೆ.ಬಿ.ಶಾಂತರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಉಪ ವಿಭಾಗಾಧಿಕಾರಿ ಟಿ.ಬಿ.ಪ್ರಕಾಶ್ ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ