HOME » NEWS » District » PROTESTS IN VILLAGES OF RAMAGARA AGAINST JALLI CRUSHERS SNVS

ಜಲ್ಲಿ ಕ್ರಷರ್​ಗಳಿಂದ ರೈತರ ಜಮೀನಿಗೆ ಧಕ್ಕೆ; ರಾಮನಗರದ ಮಂಚೇಗೌಡನಪಾಳ್ಯ, ಸೀಬೆಕಟ್ಟೆಯಲ್ಲಿ ಪ್ರತಿಭಟನೆ

ಜಲ್ಲಿ ಕ್ರಶರ್​ಗಳಿಂದ ರಾಮನಗರ ತಾಲೂಕಿನ ಐದು ಗ್ರಾಮಗಳಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಮಂಚೇಗೌಡನ ಪಾಳ್ಯ ಮತ್ತು ಸೀಬೆಕಟ್ಟೆ ಗ್ರಾಮದ ಜನರು ಭಾನುವಾರ ಪ್ರತಿಭಟನೆ ನಡೆಸಿದರು.

news18-kannada
Updated:September 28, 2020, 9:04 AM IST
ಜಲ್ಲಿ ಕ್ರಷರ್​ಗಳಿಂದ ರೈತರ ಜಮೀನಿಗೆ ಧಕ್ಕೆ; ರಾಮನಗರದ ಮಂಚೇಗೌಡನಪಾಳ್ಯ, ಸೀಬೆಕಟ್ಟೆಯಲ್ಲಿ ಪ್ರತಿಭಟನೆ
ರಾಮನಗರದ ಮಂಚೇಗೌಡನಪಾಳ್ಯದಲ್ಲಿ ಗ್ರಾಮಸ್ಥರ ಪ್ರತಿಭಟನೆ
  • Share this:
ರಾಮನಗರ: ಜಲ್ಲಿ ಕ್ರಷರ್​ಗಳಿಂದ ತೀವ್ರ ಹಾನಿಯಾಗುತ್ತಿದ್ದು ಕೃಷಿ ಭೂಮಿಗೆ ಸಂಪೂರ್ಣವಾಗಿ ಧೂಳು ಆವರಿಸಿಕೊಳ್ಳುತ್ತಿದೆ. ಮಕ್ಕಳು, ವೃದ್ಧರಲ್ಲದೆ ಜಾನುವಾರಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ರಾಮನಗರ ತಾಲೂಕಿನ ಮಂಚೇಗೌಡನಪಾಳ್ಯ ಹಾಗೂ ಸೀಬೆಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಈ ಗ್ರಾಮಗಳ ಜನರು ಜಲ್ಲಿ ಕ್ರಷರ್ ಗಳ ಲಾರಿಗಳನ್ನ ಅಡ್ಡಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಎರಡೂ ಗ್ರಾಮದಿಂದ ಸರಿಸುಮಾರು 180 ಕ್ಕೂ ಹೆಚ್ಚು ಜನ ವಾಸವಾಗಿದ್ದು, ಜೊತೆಗೆ ಬೆಣ್ಣಳ್ಳಿ ಚಿಕ್ಕರಸನಪಾಳ್ಯ, ಪುಟ್ಟೀರಮ್ಮನದೊಡ್ಡಿ ಸೇರಿ ಒಟ್ಟು 5 ಗ್ರಾಮಗಳಿಗೆ ತೀವ್ರವಾಗಿ ತೊಂದರೆಯಾಗ್ತಿದೆ ಎಂದು ಗ್ರಾಮಸ್ಥರು ಅರೋಪಿಸಿದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನ ಸಮಾಧಾನಪಡಿಸಲು ಮುಂದಾದರೂ ಸಹ ಗ್ರಾಮಸ್ಥರು ಪಟ್ಟುಬಿಡದೇ ಪ್ರತಿಭಟನೆ ಮುಂದುವರೆಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಸುತ್ತಮುತ್ತಲ ಗ್ರಾಮಗಳಲ್ಲಿ ಒಟ್ಟು 11ಕ್ರಷರ್‌ ಕೆಲಸ ಮಾಡುತ್ತಿದ್ದು ನಿತ್ಯ ನೂರಾರು ಟಿಪ್ಪರ್‌ಗಳು ಸಂಚರಿಸುತ್ತಿವೆ. ಕಲ್ಲು ಬಂಡೆಗಳನ್ನ ಸಿಡಿಸಲು ಪ್ರಬಲವಾಗಿ ಸ್ಫೋಟಕ ಸಾಮಗ್ರಿ ಬಳಸಿ ಹೊಡೆಯುವುದರಿಂದ ಆ ರಭಸಕ್ಕೆ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಇದನ್ನೂ ಓದಿ: Karnataka Bandh: ಇಂದು ಕರ್ನಾಟಕ ಬಂದ್​; ಭಾರೀ ಬೆಂಬಲ ನಿರೀಕ್ಷೆ: ಏನಿರುತ್ತೆ, ಏನಿರಲ್ಲ?; ಇಲ್ಲಿದೆ ವಿವರ

ಇನ್ನು 2005 ರಿಂದ ಸತತವಾಗಿ ಕ್ರಷರ್ ಕೆಲಸ ನಡೆಯುತ್ತಿದ್ದರೂ ಸಹ ಸ್ಥಳೀಯ ಜನಪ್ರತಿನಿಧಿಗಳು ಈ ಭಾಗದ ರೈತರ ಪರವಾಗಿ ನಿಲ್ಲಲು ಮುಂದೆ ಬರುತ್ತಿಲ್ಲ. ಬದಲಾಗಿ ಕ್ರಷರ್ ಮಾಲೀಕರಿಗೆ ಬೆಂಬಲ ನೀಡ್ತಿದ್ದಾರೆ. ಕ್ರಷರ್ ನ ಧೂಳಿನಿಂದ ಇಲ್ಲಿನ ಮೇವು ಸಹ ಸಂಪೂರ್ಣ ಕಲುಷಿತವಾಗ್ತಿದೆ. ಇದರಿಂದಾಗಿ ದನಕರುಗಳು ಅನಾರೋಗ್ಯದಿಂದ ಸಾವನ್ನಪ್ಪುತ್ತಿವೆ. ಜೊತೆಗೆ ಈ ಭಾಗದ ಪರಿಸರ ಸಂಪೂರ್ಣವಾಗಿ ನಾಶವಾಗ್ತಿದೆ. ಹಾಗಾಗಿ ಈ ಕುರಿತಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕೆಂದು ಗ್ರಾಮಸ್ಥರು ತಿಳಿಸಿದರು.

ಜೊತೆಗೆ ಈ ಭಾಗದಲ್ಲಿ ಕ್ರಷರ್ ಗಳು ತಲೆಎತ್ತಿದ ಬಳಿಕ ಹತ್ತಾರು ಎಕರೆ ರೈತರ ಭೂಮಿ ಸಂಪೂರ್ಣ ನಾಶವಾಗಿದೆ. ಭೂಮಿ ಇದ್ದರೂ ಸಹ ವ್ಯವಸಾಯ ಮಾಡಲಾಗದ ದುಸ್ಥಿತಿಗೆ ನಾವೆಲ್ಲರೂ ತಲುಪಿದ್ದೇವೆ. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮವಹಿಸಿಲ್ಲ. ಹಾಗಾಗಿ ಈಗಲಾದರೂ ಸೂಕ್ತ ಕ್ರಮವಹಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ವರದಿ: ಎ.ಟಿ. ವೆಂಕಟೇಶ್
Published by: Vijayasarthy SN
First published: September 28, 2020, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories