ಹಾಸನ (ಡಿಸೆಂಬರ್ 22); ರಾಜ್ಯಾದ್ಯಂತ ಇಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಎಲ್ಲಾ ಪಕ್ಷಗಳೂ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ. ಬೆಂಗಳೂರಿನಿಂದ ಜನ ಮತ ಚಲಾಯಿಸಲು ತಮ್ಮ ಗ್ರಾಮಗಳತ್ತ ತೆರಳುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲಾ ಬಸ್ಗಳು ಹೌಸ್ಫುಲ್ ಆಗಿವೆ. ಆದರೆ, ಈ ನಡುವೆ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿರುವ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಕನಿಷ್ಟ 26 ಗ್ರಾಮಗಳ ಜನ ಇಂದು ನಡೆಯಬೇಕಿದ್ದ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಅಸಲಿಗೆ 2020 ಡಿಸೆಂಬರ್ ಅಂತ್ಯದೊಳಗೆ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡುತ್ತಿದ್ದಂತೆ ವರದಿಯನ್ನು ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿಯಿಂದ ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ ಜನ ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.
ಹೀಗಾಗಿ ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಹಾಸನದ ದೇವಾಲದ ಕೆರೆ, ಹೆಗ್ಗದ್ದೆ, ಹೊಂಗಡಹಳ್ಳ ಮತ್ತು ಹೆತ್ತೂರು ಸೇರಿದಂತೆ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗಿದೆ. ಇದಲ್ಲದೆ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕಾರ ಮಾಡಿದ ಪರಿಣಾಮ ಕಣದಲ್ಲಿ ಯಾರೂ ಸ್ಪರ್ಧಿಗಳೇ ಇಲ್ಲದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ