ಕೊರೋನಾ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ಆರೋಪ - ದಾಖಲೆಯಿದ್ದರೆ ಬಿಡುಗಡೆ ಮಾಡಲಿ ; ಸಚಿವ ಶ್ರೀರಾಮುಲು
ಸಿದ್ದರಾಮಯ್ಯ ಹೇಳುವುದು ಎರಡು ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು, ಆದರೆ, ನಾವು ಖರೀದಿಸಿರುವುದು ಬರೀ 500-600 ಕೋಟಿ ಅಷ್ಟೆ. ಎರಡು ಸಾವಿರ ಕೋಟಿ ಎಲ್ಲಿಂದ ಭ್ರಷ್ಟಾಚಾರ ಆಗಿದೆ ಗೊತ್ತಾಗುತ್ತಿಲ್ಲ ಎಂದರು.
ಚಿತ್ರದುರ್ಗ(ಜುಲೈ.12): ಕೊರೋನಾ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪ ಮಾಡುತ್ತಿರುವ ಪ್ರತಿಪಕ್ಷದ ಸಿದ್ದರಾಮಯ್ಯ ಯಾವುದೇ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಉಪ್ಪುತಿಂದವರು ನೀರು ಕುಡಿಯಲೇ ಬೇಕು. ಸರ್ಕಾರದ ಹಣ ದುರುಪಯೋಗ ಮಾಡಿ ಯಾರು ಬದುಕಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಕೋವಿಡ್ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ಭ್ರಷ್ಠಾಚಾರ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳು ಇದ್ದರು ಬಿಡುಗಡೆ ಮಾಡಲು ಅವರಿಗೆ ಸ್ವಾತಂತ್ರವಿದೆ. ಅದರ ಬದಲು ಈ ರೀತಿ ಯಾಕೆ ಮಾತನಾಡುತ್ತಾರೆ ತಿಳಿಸುತ್ತಿಲ್ಲ. ಸಿದ್ದರಾಮಯ್ಯ ಹೇಳುವುದು ಎರಡು ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು, ಆದರೆ, ನಾವು ಖರೀದಿಸಿರುವುದು ಬರೀ 500-600 ಕೋಟಿ ಅಷ್ಟೆ. ಎರಡು ಸಾವಿರ ಕೋಟಿ ಎಲ್ಲಿಂದ ಭ್ರಷ್ಟಾಚಾರ ಆಗಿದೆ ಗೊತ್ತಾಗುತ್ತಿಲ್ಲ ಎಂದರು.
ಹಳೇ ಕಥೆ, ಎಕ್ಸಪೈರಿ ಡೇಟ್ ನೆನಪು ಮಾಡಿಕೊಳ್ಳುವುದು ಬಿಡಿ. ನಿಮ್ಮ ಬಳಿ ಇರುವ ದಾಖಲೆ ಬಿಡುಗಡೆ ಮಾಡಿ. ಜೈಲಿಗೆ ಯಾರು ಹೋಗಬೇಕೊ ಅವರು ಹೋಗುತ್ತಾರೆ ಎಂದು ಸಿದ್ದರಾಮಯ್ಯಗೆ ಸಚಿವ ಶ್ರೀರಾಮುಲು ಸವಾಲೆಸೆದರು.
ನೀವು ಬಹಳ ದೊಡ್ಡ ಮನುಷ್ಯ, ದಾನ ವೀರ ಶೂರ ಕರ್ಣ ಎಂದು ಸಿದ್ದರಾಮಯ್ಯ ಅವರನ್ನು ಸಂಬೋಧಿಸಿದ ರಾಮುಲು, ಬಳ್ಳಾರಿಯ ಜನಾರ್ಧನ ರೆಡ್ಡಿ ಅವರನ್ನು ಜೈಲಿಗೆ ಕಳಿಸಿದಿರಿ, ಇವತ್ತು ನಿಮಗೆ ಶಕ್ತಿಯಿದ್ದರೆ ಎಲ್ಲರನ್ನೂ ಜೈಲಿಗೆ ಕಳಿಸು ಯಾರು ಬೇಡ ಅನ್ನುತ್ತಾರೆ. ಯಾವುದನ್ನು ಮುಚ್ಚಿಟ್ಟಿಕೊಳ್ಳಲು ಆಗಲ್ಲ ಎಂದರು.
ಇನ್ನೂ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹತ್ತು ಸಾವಿರ ಬೆಡ್ಗಳ ವ್ಯವಸ್ಥೆ ಮಾಡಿದ್ದಾರೆ. ಪತ್ರಕರ್ತರು ಫ್ರಂಟ್ ಲೈನ್ ವಾರಿಯರ್ಸ್ ಗಳಾಗಿ ಜೀವದ ಹಂಗು ತೊರೆದು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರಿಗೂ ಕೊರೋನಾ ಸೋಂಕು ತಗುಲಿದೆ. ಅದಕ್ಕಾಗಿ ಅವರ ಬೇಡಿಕೆಯಂತೆ ಆದಷ್ಟು ಬೇಗ ಜೀವ ವಿಮೆ ಮಾಡಿಸಲು ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಹರಡಲು ಶುರುವಾಗಿದೆ. ಹಾಗಾಗಿ ಹಳ್ಳಿಯ ಜನರನ್ನ ರಕ್ಷಿಸಲು, ಅವರಿಗೆ ಜಾಗೃತಿ ಮೂಡಿಸಲು ನನ್ನ ನಡೆ ಹಳ್ಳಿಗಳ ಕಡೆ ಎಂಬಂತೆ ಪ್ರವಾಸ ಮಾಡುತ್ತೇನೆ ಎಂದು ಸಚಿವರು ಹೇಳಿದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ