ಕಾರವಾರ: ಡೋಂಗ್ರಿ ಗ್ರಾಮದ ಜನರ ಗೋಳು ಕೇಳೋರ್ಯಾರು? ಈ ಊರಿಗೆ ಸೇತುವೆಯೂ ಇಲ್ಲ, ತೆಪ್ಪವೂ ಇಲ್ಲ!

ನದಿ ದಾಟಲು ಯಾವುದೆ ಅನುಕೂಲ ಇಲ್ಲದಿರೋದ್ರಿಂದ ಈ ರೀತಿಯಲ್ಲಿ ಬಿದಿರಿನ ಗಳದಿಂದ ಮಾಡಿದ ತೆಪ್ಪದಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದರೂ ತೆಪ್ಪ ಮಗುಚಿದರೇ ವಿದ್ಯಾರ್ಥಿಗಳ ಜೀವ ಹೋಗೋದು ಗ್ಯಾರಂಟಿ.

ಕಚ್ಚಾ ತೆಪ್ಪದಲ್ಲಿ ಸಾಗುತ್ತಿರುವ ವಿದ್ಯಾರ್ಥಿಗಳು.

ಕಚ್ಚಾ ತೆಪ್ಪದಲ್ಲಿ ಸಾಗುತ್ತಿರುವ ವಿದ್ಯಾರ್ಥಿಗಳು.

  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಗಂಗಾವಳಿ ನದಿಗೆ ಇದ್ದ ತೂಗು ಸೇತುವೆ 2019ರಲ್ಲಿ ಸಂಭವಿಸಿದ ಗಂಗಾವಳಿ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿ ಇಲ್ಲಿನ ಜನರ ಸಂಪರ್ಕ ಕೊಂಡಿಯೇ ಕಿತ್ತು ಹೋಗಿದೆ. ಇಲ್ಲಿ ಸುತ್ತಮುತ್ತಲಿನ ಮಜಿರೆಯ ಜನರು ಈಗ ಗ್ರಾಮದಿಂದ  ನಗರಕ್ಕೆ ಬರಲು ಗಂಗವಾಳಿ ನದಿಯಲ್ಲಿ ತೆಪ್ಪದ ಸಂಚಾರ ಮಾಡುವ ದುಸ್ಥಿತಿ ಬಂದೊದಗಿದೆ. ಕಳೆದ 2019ರಲ್ಲಿ ಗಂಗವಾಳಿ ನದಿ ಪ್ರವಾಹಕ್ಕೆ ಇಲ್ಲಿನ ತೂಗು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿ ದೊಡ್ಡ ಆವಂತರವೇ ಸೃಷ್ಟಿ ಆಗಿತ್ತು. ಗಂಗವಾಳಿ  ನದಿಯ ಆಚೆ ಇರುವ ಡೋಂಗ್ರಿ  ಗ್ರಾಮದ ಜನರ ಬಹು ವರ್ಷದ ಹೋರಾಟದ ನಿಮಿತ್ತ 2019ರಲ್ಲಿ ಡೋಂಗ್ರಿ ಗ್ರಾಮದ ಜನರಿಗೆ ಓಡಾಡಲು ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ತೂಗು ಸೇತುವೆ ನಿರ್ಮಾಣ ಮಾಡಿಕೊಡಲಾಗಿತ್ತು.

ಆದರೆ, ಆ ತೂಗು ಸೇತುವೆ ಕೇವಲ ಮೂರೇ ವರ್ಷವಷ್ಟೆ ಗ್ರಾಮದ ಜನರಿಗೆ ಉಪಯೋಗ ವಾಯಿತು.  ಪ್ರಕೃತಿಯ ಮುನಿಸಿಗೆ ಇದ್ದ ಮೂಲ ಸೌಕರ್ಯವೂ ಬಲಿ ಆಗಿ ಹೋಯಿತು. ಬಳಿಕ ಇಲ್ಲಿ ಮತ್ತದೆ ಹಳೆ ದಿನಗಳಂತೆ ಗ್ರಾಮದ ಜನರು ನದಿಯಲ್ಲಿ ತೆಪ್ಪದ ಮೂಲಕ ಸಂಚಾರ ಆರಂಭಿಸಿ ತಮ್ಮ ಬೇಕು ಬೇಡಿಕೆಗೆ ನಗರಕ್ಕೆ ಬರಲು ಆರಂಭಿಸಿದ್ದರು. ಶಾಲೆಯ ವಿದ್ಯಾರ್ಥಿಗಳು ಕೂಡಾ ತೆಪ್ಪವನ್ನೆ ನಂಬಿದ್ದು ತೆಪ್ಪದಲ್ಲೆ ಶಾಲೆಗೆ ಹೋಗುತ್ತಿದ್ದಾರೆ..

ಊರಿನ ಹಿರಿಯರು ಪರಿಣಿತಿ ಹೊಂದಿದವರು ನದಿಯಲ್ಲಿ ತೆಪ್ಪ ಚಲಾಯಿಸುತ್ತಾರೆ. ಮತ್ತೆ ತೂಗು ಸೇತುವೆ ನಿರ್ಮಾಣ ಮಾಡಿಕೊಡುವಂತೆ ಈಗಾಗಲೆ ಸಂಭಂದಿಸಿದವರ ಗಮನಕ್ಕೆ ತಂದಿದ್ದಾರೆ. ಆದರೆ, ಇನ್ನು ಕೂಡಾ ಭರವಸೆ ಅಷ್ಟೆ ಸಿಕ್ಕಿದ್ದು ಕನಸು ಸಾಕಾರವಾಗುವ ಆಸೆ ಚಿಗುರಿಲ್ಲ. ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಇಲ್ಲಿನ ಜನ. ತೆಪ್ಪದಲ್ಲಿ ಸಂಚರಿಸುವಾಗ ಒಂದಿಂಚು ಆಯ ತಪ್ಪಿದ್ರು ಅಪಾಯ ಕಟ್ಟಿಟ್ಟ ಬುತ್ತಿ. ಅದೆ ನರಕಯಾತನೆಯಲ್ಲೆ ಜೀವನ ದೂಡುತ್ತಿದ್ದಾರೆ. ಕನಿಷ್ಟಪಕ್ಷ ಒಂದು ದೋಣಿ ಆದ್ರು ಕೊಡಿ ಎನ್ನುತ್ತಿದ್ದಾರೆ ಸ್ಥಳೀಯರು.

ಯಾವಾಗ ನಿರ್ಮಾಣ ವಾಯಿತು ಸೇತುವೆ?

ಸ್ಥಳೀಯ ಜನರ ಬೇಡಿಕೆಗೆ ಅನುಗುಣವಾಗಿ ಸುಂಕಸಾಳ ಮತ್ತು ಡೊಂಗ್ರಿಯಲ್ಲಿ ಗಂಗಾವಳಿ ನದಿ ದಾಟಲು 2016ರಲ್ಲಿ ತೂಗು ಸೇತುವೆ ಮಾಡಲಾಗಿತ್ತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಒಂದು ಕೋಟಿ 64ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದ್ರೆ 2019 ಅಗಸ್ಟ್  ಬಂದ ನೆರೆ ಪ್ರವಾಹಕ್ಕೆ ತೂಗು ಸೇತುವೆ ಕೊಚ್ಚಿ ಛಿದ್ರವಾಗಿದೆ. ಹೀಗಾಗಿ ಇಲ್ಲಿನ ಜನರಿಗೆ ನದಿ ದಾಟಲು ಕಷ್ಟಪಡುತ್ತಿದ್ದಾರೆ.

ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಡೊಂಗ್ರಿ, ಬಿದ್ರಳ್ಳಿ, ಹೆಗ್ಗರಣಿ ಭಾಗದ ಜನರಿಗೆ ಇಲ್ಲಿ ತೂಗು ಸೇತುವೆ ಇದ್ದಿದ್ದರಿಂದ ಸುಂಕಸಾಳ, ಅಂಕೋಲಾ ಹಾಗೂ ಯಲ್ಲಾಪುರ ಕಡೆ ತೆರಳಲು ಅನುಕೂಲ ಆಗುತಿತ್ತು. ಅಲ್ಲದೇ ಶಾಲಾ ವಿದ್ಯಾರ್ಥಿಗಳು ಹೈಸ್ಕೂಲಿಗೆ ತೆರಳಲು ಅತಿ ಸಮೀಪವಾಗುತಿತ್ತು.

ಆದರೆ, ನದಿ ದಾಟಲು ಯಾವುದೆ ಅನುಕೂಲ ಇಲ್ಲದಿರೋದ್ರಿಂದ ಈ ರೀತಿಯಲ್ಲಿ ಬಿದಿರಿನ ಗಳದಿಂದ ಮಾಡಿದ ತೆಪ್ಪದಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದರೂ ತೆಪ್ಪ ಮಗುಚಿದರೇ ವಿದ್ಯಾರ್ಥಿಗಳ ಜೀವ ಹೋಗೋದು ಗ್ಯಾರಂಟಿ. ಹೀಗಾಗಿ ತಮ್ಮೂರಿಗೆ ಸರ್ಕಾರದಿಂದ ಏನಾದ್ರೂ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

ಎಷ್ಟು ಕುಟುಂಬಗಳಿವೆ?

ಈ ಡೊಂಗ್ರಿ, ಬಿದ್ರಳ್ಳಿ ಹಾಗೂ ಹೆಗ್ಗರಣಿಯಲ್ಲಿ ನೂರಾರು ಬಡಕುಟುಂಬಗಳು ವಾಸಿಸುತ್ತಿವೆ. ಅಂಕೋಲಾದಿಂದ ಈ ಗ್ರಾಮಕ್ಕೆ ಪ್ರತಿ ದಿನ ಬೆಳಿಗ್ಗೆ ಒಂದೇ ಒಂದು ಬಸ್ ಸೌಕರ್ಯವಿದೆ. ಅದೊಂದೇ ಬಸ್ ನಲ್ಲಿ ಇಲ್ಲಿನ ಜನರು ಅಂಕೋಲಾಕ್ಕೆ ಹೋಗಬೇಕು. ಆದ್ರೆ ಸುಂಕಸಾಳ ಹೋಗೋದಾದ್ರೆ ದೋಣಿ ಅಥವಾ ಸೇತುವೆ ಇದ್ದರೇ ಬೇಗನೆ ಹೋಗಬಹುದು. ಗ್ರಾಮದಿಂದ ಸುಂಕಸಾಳ ಕೇವಲ ಮೂರು ಕಿಲೋಮೀಟರ್ ಆಗುತ್ತೆ. ಒಂದುವೇಳೆ ಸುತ್ತುವರಿದು ಬರೋದಾದ್ರೆ ಸುಂಕಸಾಳಕ್ಕೆ 20 ಕಿಲೋಮೀಟರ್ ಸುತ್ತಾಕಿ ಬರಬೇಕಾಗುತ್ತೆ.

ಇದನ್ನೂ ಓದಿ: Farmers Protest: ಕೃಷಿ ಕಾಯ್ದೆ ಅನುಷ್ಠಾನವಾಗಲಿ, ರೈತಪರ ಅಲ್ಲವೆನಿಸಿದರೆ ಮತ್ತೆ ಬದಲಾವಣೆಗೆ ಅವಕಾಶವಿದೆ; ಗೋವಿಂದ ಕಾರಜೋಳ

ಹೀಗಾಗಿ ತಮಗೆ ತೊಂದರೆ ಆಗುತ್ತೆ ಅನ್ನೋದು ಇಲ್ಲಿನವರ ಅಭಿಪ್ರಾಯ. ಮಕ್ಕಳನ್ನ ಕೂಡ ಶಾಲೆಗೆ ಕಳಿಸೋದಾದ್ರೆ ಪಾಲಕರೇ ಬಂದು ತೆಪ್ಪದಲ್ಲಿ ಕೂರಿಸಿ ನದಿ ದಾಟಿಸಿ ಹೋಗಬೇಕು. ಇಲ್ಲದಿದ್ದಲ್ಲಿ ಶಾಲೆಗೆ ರಜೆ ಮಾಡಬೇಕಾಗುತ್ತೆ. ಒಮ್ಮೆ ಒಂದೆರಡು ವಿದ್ಯಾರ್ಥಿಗಳನ್ನ ಮಾತ್ರ ನದಿ ದಾಟಿಸಬೇಕು. ತೆಪ್ಪಕೂಡ ನದಿ ನೀರಿನಲ್ಲಿಯೇ ಮುಳುಗಿ ಸಾಗುತ್ತದೆ. ಹೀಗಾಗಿ ಅಪಾಯ ಕಟ್ಟಿಟ್ಟ ಬುತ್ತಿ. ಈ ಗ್ರಾಮದ ವಿದ್ಯಾರ್ಥಿಗಳು ಮತ್ತು ಬಡ ನಾಗರಿಕರ ಜೀವಕ್ಕೆ ಬೆಲೆ ಇಲ್ವಾ ಎಂಬ ಸಂಶಯ ಕಾಡುತ್ತಿದೆ. ದಯವಿಟ್ಟು ತಮಗೆ ದೋಣಿ ವ್ಯವಸ್ಥೆ ಮಾಡಿ,ಇಲ್ಲಾ ಸೇತುವೆ ವ್ಯವಸ್ಥೆಯನ್ನಾದರೂ ಮಾಡಿ ಎಂದು ಸ್ಥಳೀಯರ ಒತ್ತಾಯಿಸುತ್ತಿದ್ದಾರೆ.

ತೂಗು ಸೇತುವೆ ಕೊಚ್ಚಿ ಹೋದ ಮೇಲೆ ಇಲ್ಲಿನ ಜನರು ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಮನವಿ ನೀಡಿದ್ರು. ಒಂದು ಕೋಟಿ ರೂಪಾಯಿ ಇಟ್ಟಿದ್ದೇವೆ ಎಂದಿದ್ದಾರಂತೆ. ಆದರೆ, ಕೆಲಸ ಮಾಡೋದು ಯಾವಾಗ ಅಂತಾ ಗ್ರಾಮಸ್ಥರು ಪ್ರಶ್ನೆ ಮಾಡ್ತಾರೆ. ಒಟ್ಟಿನಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೇ ಮುಂದೆ ಅನಾಹುತ ಆಗೋ ಸಾಧ್ಯತೆ ಜಾಸ್ತಿಯಾಗಿದೆ. ಹೀಗಾಗಿ ಸರ್ಕಾರ, ಜನಪ್ರತಿನಿಧಿಗಳು ಮುಂದಾಗಬಹುದಾದ ಅನಾಹುತ ತಡೆಯುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ.
Published by:MAshok Kumar
First published: