ವರ್ತೂರು ಪ್ರಕಾಶ್​ಗೆ ಭೂ ಸಂಕಷ್ಟ? ಕೋಲಾರ ಮಾಜಿ ತಹಶೀಲ್ದಾರ್ ವಿರುದ್ಧ ತನಿಖೆಗೆ ಆದೇಶ

ಕೋಲಾರದ ಮಾಜಿ ತಹಶೀಲ್ದಾರ್ ವಿಜಯಣ್ಣ ಅವಧಿಯಲ್ಲಿ ಅಕ್ರಮ ಸಾಗುವಳಿ ಚೀಟಿ ಮಂಜೂರಾಗಿದೆ. ಇದಕ್ಕೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಕುಮ್ಮಕ್ಕು ಇದೆ ಎಂದು ಶಾಸಕ ಶ್ರೀನಿವಾಸಗೌಡ ಆರೋಪ ಮಾಡಿದ್ದಾರೆ. ಈಗ ವಿಜಯಣ್ಣ ವಿರುದ್ಧ ತನಿಖೆ ನಡೆಸಲಾಗುತ್ತಿದೆ.

news18-kannada
Updated:October 18, 2020, 5:49 PM IST
ವರ್ತೂರು ಪ್ರಕಾಶ್​ಗೆ ಭೂ ಸಂಕಷ್ಟ? ಕೋಲಾರ ಮಾಜಿ ತಹಶೀಲ್ದಾರ್ ವಿರುದ್ಧ ತನಿಖೆಗೆ ಆದೇಶ
ಕೋಲಾರ ಶಾಸಕ ಶ್ರೀನಿವಾಸಗೌಡ
  • Share this:
ಕೋಲಾರ: ಇಲ್ಲಿಯ ಮಾಜಿ ತಹಶೀಲ್ದಾರ್ ವಿಜಯಣ್ಣ ತಮ್ಮ ಅವಧಿಯಲ್ಲಿ ಅಕ್ರಮವಾಗಿ ಸಾಗುವಳಿ ಚೀಟಿ ಮೂಲಕ ಜಮೀನು ಮಂಜೂರು ಮಾಡಿದ್ದಾರೆಂದು ಕೋಲಾರ ಜೆಡಿಎಸ್ ಹಿರಿಯ ಶಾಸಕ ಶ್ರೀನಿವಾಸಗೌಡ ಆರೋಪಿಸಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ರವರಿಗೆ ದೂರು ನೀಡಿರುವ ಶ್ರೀನಿವಾಸಗೌಡ, 2015 ರಿಂದ 2018 ರವರೆಗೆ ವಿಜಯಣ್ಣ ಅವರು ಕೋಲಾರ ತಹಶೀಲ್ದಾರ್ ಆಗಿದ್ದರು. ಆಗ ಸರ್ಕಾರಿ ಸ್ವಾಮ್ಯದ ಗೋಮಾಳ ಜಮೀನನ್ನ ಸಾಗುವಳಿ ಚೀಟಿ ಮೂಲಕ ಜಮೀನು ಇದ್ದವರಿಗೆ ನೀಡಿ ಅಕ್ರಮ ಎಸಗಿರುವ ಆರೋಪವಿದೆ. ಕೂಡಲೇ ಅವರ ಅವಧಿಯಲ್ಲಿ ಮಂಜೂರು ಮಾಡಿದ್ದ ಸಾಗುವಳಿ ಚೀಟಗಳನ್ನ ರದ್ದು ಮಾಡಿ, ತನಿಖೆ ನಡೆಸುವಂತೆ ಶಾಸಕರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಾಸಕ ಶ್ರೀನಿವಾಸಗೌಡ, ಮಾಜಿ ಶಾಸಕ ವರ್ತೂರು ಪ್ರಕಾಶ್ ಕುಮ್ಮಕ್ಕಿನಿಂದಲೇ, ಮಾಜಿ ತಹಶೀಲ್ದಾರ್ ವಿಜಯಣ್ಣ ಅಕ್ರಮವಾಗಿ ಸಾಗುವಳಿ ಚೀಟಿಗಳನ್ನ ಮಂಜೂರು ಮಾಡಿದ್ದಾರೆಂದು ಆರೋಪಿಸಿ ತನಿಖೆಗೆ ಆಗ್ರಹಿಸಿದ್ದಾರೆ.  ಅಕ್ರಮ ನಡೆದಿದೆ ಎನ್ನಲಾಗಿರುವ ದಿನಾಂಕದಲ್ಲಿ, ದರಖಾಸ್ತು ಸಮಿತಿಯ ಅಧ್ಯಕ್ಷರಾಗಿ ಶಾಸಕ ವರ್ತೂರು ಪ್ರಕಾಶ್ ಇದ್ದರು ಎಂಬುದು ಗೊತ್ತಿರುವ ವಿಚಾರ. ಹಾಗಾಗಿ ಹಿಂದಿನ ತಹಶಿಲ್ದಾರ್ ವಿಜಯಣ್ಣ ಹಾಗು ಶಾಸಕರು ಇಬ್ಬರೂ ಶಾಮೀಲಾಗಿ ಕೃತ್ಯ ಎಸಗಿದ್ದಿರಬಹುದು. ತನಿಖೆಗೆ ನಡೆಸಿದರೆ ಅಕ್ರಮ ಬಯಲಿಗೆ ಬರುತ್ತೆ ಎಂಬುದು ಶಾಸಕ‌ ಶ್ರೀನಿವಾಸಗೌಡ ಅವರ ಲೆಕ್ಕಾಚಾರ.

ಇದನ್ನೂ ಓದಿ: ಭೀಮಾ ಪ್ರವಾಹಕ್ಕೆ ಸೊನ್ನ ಬ್ಯಾರೇಜಿನ ಅಸಮರ್ಪಕ ನೀರು ನಿರ್ವಹಣೆಯೂ ಕಾರಣ: ಇಂಡಿ ಶಾಸಕ ಆರೋಪ

ಭೂ ಅಕ್ರಮ ತನಿಖೆಗೆ ತಂಡ ರಚಿಸಿದ ಕೋಲಾರ ಜಿಲ್ಲಾಧಿಕಾರಿ:

ಶಾಸಕ‌‌ ಶ್ರೀನಿವಾಸಗೌಡ ಅವರ ದೂರಿನ ಮೇರೆಗೆ ಮಾಜಿ ತಹಶಿಲ್ದಾರ್ ವಿಜಯಣ್ಣ ವಿರುದ್ದ ತನಿಖೆ ನಡೆಸಲು ಕೋಲಾರ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸಿಇಒ, ಸಹಾಯಕ ಕಮೀಷನರ್, ಹಾಲಿ ತಹಶಿಲ್ದಾರ್ ನೇತೃತ್ವದಲ್ಲಿ ತಂಡ ರಚಿಸಿದ್ದು ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ವರ್ತೂರು ಪ್ರತ್ಯಾರೋಪ:

ಇತ್ತ ಶಾಸಕರು ಮಾಜಿ ತಹಶಿಲ್ದಾರ್ ವಿರುದ್ದ ತನಿಖೆಗೆ ದೂರು ನೀಡುತ್ತಿದ್ದಂತೆ, ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರು ಹಾಲಿ ಶಾಸಕ ಶ್ರೀನಿವಾಸಗೌಡ ವಿರುದ್ದವೇ ಅಕ್ರಮ ಜಮೀನು ಮಂಜೂರು  ಮಾಡಿಸಿಕೊಂಡ ಆರೋಪ ಹೊರಿಸಿದ್ದಾರೆ. ಶ್ರೀನಿವಾಸಗೌಡರು ಶಾಸಕರಾದ ನಂತರ ತಮ್ಮ ಹುಟ್ಟೂರು ಕುಡುವನಹಳ್ಳಿ ಗ್ರಾಮದಲ್ಲಿ ತಮ್ಮ ಕುಟುಂಬಕ್ಕೆ ಶಾಸಕರಾದ ನಂತರ ಜಮೀನು ಮಂಜೂರು ಮಾಡಿಕೊಂಡಿದ್ದಾರೆಂದು ವರ್ತೂರು ಪ್ರಕಾಶ್ ಆರೋಪಿಸಿದ್ದಾರೆ.ಇದನ್ನೂ ಓದಿ: ಜಾತಿ ಜನಗಣತಿ ಪ್ರಕಟಿಸುತ್ತೇವೆ ಎಂದ ಈಶ್ವರಪ್ಪ; ನಮೋ ನಮೋ ಎಂದ ಸಿದ್ದರಾಮಯ್ಯ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಶ್ರೀನಿವಾಸಗೌಡ, ಅಂತಹ ಕೆಲಸ ನಾನು ಮಾಡೊಲ್ಲ. ವರ್ತೂರು ಪ್ರಕಾಶ್ ದಲಿತರ ಜಮೀನನ್ನ ಕಬಳಿಸಿದ್ದಾರೆ. ಅದು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಂತಹ ಕೆಲಸ ನಾನು ಮಾಡಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ.

ಒಟ್ಟಿನಲ್ಲಿ ಇಬ್ಬರ ಆರೋಪ ಪ್ರತ್ಯಾರೋಪಗಳ ಮಧ್ಯೆ, ಹಿಂದಿನ ತಹಶಿಲ್ದಾರ್ ವಿರುದ್ದ ತನಿಖೆಗೆ ಜಿಲ್ಲಾಧಿಕಾರಿಗಳು ಆದೇಶಿಸಿರುವುದು ಕುತೂಹಲ ಮೂಡಿಸಿದೆ. ಆದರೆ ಈ ಆರೋಪ ಮತ್ತು ಪ್ರತ್ಯಾರೋಪವನ್ನ ಪರಸ್ಚರ ಇಬ್ಬರು ನಾಯಕರು ತಳ್ಳಿಹಾಕಿದ್ದಾರೆ. ನಿಜವಾಗಲೂ ಗೋಮಾಳ ಜಮೀನನ್ನ ಅಧಿಕಾರಿಗಳು ಅಕ್ರಮವಾಗಿ ಮಾರಾಟ ಮಾಡಿ ಹಣವನ್ನ ಲೂಟಿ ಮಾಡಿದ್ದಾರಾ ಇಲ್ಲವಾ ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

ವರದಿ: ರಘುರಾಜ್
Published by: Vijayasarthy SN
First published: October 18, 2020, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading