ಕೆಪಿಸಿಸಿ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯರ ಪಟ್ಟಿ ವೈರಲ್; ಆನಂದ್ ನ್ಯಾಮಗೌಡ ಬೆಂಬಲಕ್ಕೆ ನಿಂತ ಬಾಗಲಕೋಟೆ ಯುವಕರು

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಪಿಸಿಸಿ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ನೇಮಕಾತಿಗಾಗಿ ಸಂಭವನೀಯರ ಪಟ್ಟಿಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಆನಂದ್ ನ್ಯಾಮಗೌಡ, ಮಿಥುನ್ ರೈ, ರಕ್ಷಾ ರಾಮಯ್ಯ, ಮೊಹಮ್ಮದ್ ನಲಪಾಡ್ ಸೇರಿದಂತೆ ಒಂಬತ್ತು ಜನರ ಹೆಸರಿದೆ.

news18-kannada
Updated:July 12, 2020, 10:31 PM IST
ಕೆಪಿಸಿಸಿ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯರ ಪಟ್ಟಿ ವೈರಲ್; ಆನಂದ್ ನ್ಯಾಮಗೌಡ ಬೆಂಬಲಕ್ಕೆ ನಿಂತ ಬಾಗಲಕೋಟೆ ಯುವಕರು
ಆನಂದ್ ನ್ಯಾಮಗೌಡ
  • Share this:
ಬಾಗಲಕೋಟೆ(ಜು 12): ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ್ ಪಟ್ಟಾಭಿಷೇಕ ಬೆನ್ನಲ್ಲೇ ಇದೀಗ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷರ ಸಂಭವನೀಯ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಆನಂದ್ ನ್ಯಾಮಗೌಡರ ಹೆಸರು ಸಂಭವನೀಯರ ಪಟ್ಟಿಯಲ್ಲಿದ್ದು, ಅವರ ಬೆಂಬಲಿಗರು ಶಾಸಕ ಆನಂದ್ ನ್ಯಾಮಗೌಡರಿಗೆ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕೆಂದು ಸಾಮಾಜಿಕ ಜಾಲತಾಣದ ಮೂಲಕವೇ ಹಕ್ಕೊತ್ತಾಯ ಮಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಜಮಖಂಡಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಆನಂದ ನ್ಯಾಮಗೌಡ ಸಾಕಷ್ಟು ಗಮನ ಸೆಳೆಯುವ ಚಟುವಟಿಕೆ ನಡೆಸಿದ್ದಾರೆ. ಕಳೆದ ವರ್ಷ ಕೃಷ್ಣಾ ನದಿ ಪ್ರವಾಹ ಬಂದಿದ್ದ ವೇಳೆ ಜಮಖಂಡಿ ಭಾಗದಲ್ಲಿ ಅತೀ ಹೆಚ್ಚು  ಗ್ರಾಮಗಳು ಪ್ರವಾಹಪೀಡಿತಕ್ಕೊಳಗಾಗಿದ್ದವು. ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗೆ ಸ್ವತಃ ಆನಂದ ನ್ಯಾಮಗೌಡರೇ ಟೊಂಕ ಕಟ್ಟಿ ನಿಂತಿದ್ದರು‌. ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್, ಸೂರು, ಅಗತ್ಯ ನೆರವು ಕೊಡಿಸಲು ಹಗಲಿರುಳು ಶ್ರಮಿಸಿದ್ದಾರೆ.

ಇನ್ನು ಬೇಸಿಗೆ ಸಂದರ್ಭದಲ್ಲಿ ಚಿಕ್ಕಪಡಸಲಗಿ ರೈತರ ಶ್ರಮಬಿಂಧು ಬ್ಯಾರೇಜ್​ಗೆ ಹಿಪ್ಪರಗಿ ಜಲಾಶಯದಿಂದ ನೀರು ಬಿಡುವಂತೆ ಆಗ್ರಹಿಸಿ, ರೈತರೊಂದಿಗೆ ಪ್ರತಿಭಟಿಗಿಳಿದು ರೈತರಪರ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷ ನೆರೆ ಸಂತ್ರಸ್ತರ ಪರವಾಗಿ ಬೆಳಗಾವಿ ಚಲೋ ಹಮ್ಮಿಕೊಂಡಿತ್ತು. ಈ ವೇಳೆ ಶಾಸಕ ಆನಂದ್ ನ್ಯಾಮಗೌಡ ಜಮಖಂಡಿಯಿಂದ ಬೆಳಗಾವಿಯವರೆಗೆ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಕೈಗೊಂಡಿದ್ದರು‌. ಜೊತೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸುವುದರೊಂದಿಗೆ ಯುವಕರ ಪಡೆ ಕಟ್ಟುತ್ತಿದ್ದಾರೆ. ಹೀಗಾಗಿ ಶಾಸಕ ಆನಂದ್ ನ್ಯಾಮಗೌಡರಿಗೆ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಹುದ್ದೆ ನೀಡಿ ರಾಜ್ಯದಲ್ಲಿ ಯುವ ಕಾಂಗ್ರೆಸ್ ಪಡೆ ಕಟ್ಟಲು ಅವಕಾಶ ನೀಡಬೇಕೆಂಬುದು ಬೆಂಬಲಿಗರ ಆಗ್ರಹ.

ಇದನ್ನೂ ಓದಿ: ಸಚಿವ ಸಿ.ಟಿ.ರವಿಗೂ ವಕ್ಕರಿಸಿದ ಸೋಂಕು ; ಸಚಿವರೊಂದಿಗೆ ಸುತ್ತಾಡಿದ ನೂರಾರು ಜನರಿಗೆ ಕೊರೋನಾ ಭೀತಿ

ದಿವಂಗತ ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಜಮಖಂಡಿ ಉಪ ಚುನಾವಣೆಯಲ್ಲಿ 40ಸಾವಿರ ಮತಗಳ ಅಂತರದಿಂದ ಅವರ ಮಗ ಆನಂದ್ ನ್ಯಾಮಗೌಡ ಆಯ್ಕೆಯಾಗಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅಂದಿನ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಆನಂದ್ ನ್ಯಾಮಗೌಡರನ್ನು ಗೆಲ್ಲಿಸಿದರೆ ಸೂಕ್ತ ಸ್ಥಾನಮಾನ ನೀಡುವ ಮೂಲಕ ಜಮಖಂಡಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಜನತೆಗೆ ವಾಗ್ದಾನ ಮಾಡಿದ್ದರು. ಮೈತ್ರಿ ಸರ್ಕಾರದಲ್ಲಿ ಶಾಸಕ ಆನಂದ್ ನ್ಯಾಮಗೌಡರಿಗೆ ಯಾವುದೇ ಸೂಕ್ತ ಸ್ಥಾನಮಾನ ಸಿಗಲಿಲ್ಲ‌. ಇದೀಗ ಶಾಸಕ ಆನಂದ್ ನ್ಯಾಮಗೌಡರಿಗೆ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕೆಂಬ ಒತ್ತಡ ಹೆಚ್ಚಿದೆ. ಇದೇ ಹಿನ್ನೆಲೆಯಲ್ಲಿ ಕೆಪಿಸಿಸಿ ಯೂಥ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಂಭವನೀಯರಿರುವ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಭವನೀಯರ ಪಟ್ಟಿ ಕೆಪಿಸಿಸಿಯಿಂದ ಪ್ರಕಟಿತ ಅಧಿಕೃತ ಪಟ್ಟಿ ಎನ್ನುವ ಬಗ್ಗೆ ಖಚಿತತೆ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದ ಯುವ ಮುಖಂಡರು, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮುಖ್ಯಸ್ಥರು ಈ ಸಂಭಾವ್ಯರ ಪಟ್ಟಿ ಹರಿಬಿಟ್ಟಿದ್ದಾರೆನ್ನಲಾಗಿದೆ.

ಸಂಭವನೀಯರ ಪಟ್ಟಿಯಲ್ಲಿ ಯಾರಾರಿದ್ದಾರೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ನೇಮಕಾತಿಗಾಗಿ ಸಂಭವನೀಯರ ಪಟ್ಟಿಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಆನಂದ್ ನ್ಯಾಮಗೌಡ, ಕೆಂಪೇರಾಜಗೌಡ, ರಾಜೇಂದ್ರ ರಾಜಣ್ಣ,ಕೆ ಶಿವಕುಮಾರ್, ಮಿಥುನ್ ರೈ, ರಕ್ಷಾ ರಾಮಯ್ಯ, ಮಂಜುನಾಥ ಗೌಡ, ಮೊಹಮ್ಮದ್ ನಲಪಾಡ್ ಸೇರಿದಂತೆ ಒಂಬತ್ತು ಜನರ ಹೆಸರಿದೆ. ಇದರಲ್ಲಿ ಬೆಂಗಳೂರು ಸೆಂಟ್ರಲ್ ಜಿಲ್ಲಾಧ್ಯಕ್ಷ ಮಹಮದ್ ನಲಪಾಡ್ ಹೆಸರಿರುವುದು ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಮಹಮ್ಮದ್ ನಲಪಾಡ್ ವಿರುದ್ಧ ಸಾಕಷ್ಟು ವಿವಾದಗಳಿರುವುದರಿಂದ ಅವರ ಹೆಸರು ಈ ಪಟ್ಟಿಯಲ್ಲಿರುವುದಕ್ಕೆ ಹಲವರು ಅಚ್ಚರಿ ಪಟ್ಟಿದ್ದಾರೆ.ಇದನ್ನೂ ಓದಿ: ಮಾಹಿತಿ ಸೋರಿಕೆ ಆರೋಪದಲ್ಲಿ ಬಿಡಿಎ ಡಾಟಾ ಎಂಟ್ರಿ ಆಪರೇಟರ್​ಗಳ ಸಾಮೂಹಿಕ ವರ್ಗಾವಣೆ

KPCC youth president probables list
ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂಭಾವ್ಯರ ಪಟ್ಟಿ


ಸಂಭವನೀಯರ ಪಟ್ಟಿ ಬಗ್ಗೆ ನ್ಯಾಮಗೌಡ ಹೇಳೋದೇನು!?

ಈ ಪಟ್ಟಿ ಬಗ್ಗೆ ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ನ್ಯೂಸ್ 18ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ. “ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ನೇಮಕಾತಿಗಾಗಿ  ಸಂಭವನೀಯರ ಪಟ್ಟಿಯೊಂದು ಹರಿದಾಡುತ್ತಿದೆ. ನಾನು ಈ ಬಗ್ಗೆ ನಮ್ಮ ನಾಯಕರ ಬಳಿ ಆಕಾಂಕ್ಷಿ ಎಂದು ಹೇಳಿಲ್ಲ. ಒಂದು ವೇಳೆ ಪಕ್ಷದ ನಾಯಕರು ಜವಾಬ್ದಾರಿ ವಹಿಸಿದರೆ ನಿಭಾಯಿಸುವೆ. ನಮ್ಮ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಿ ಹರಿಬಿಟ್ಟಿದ್ದಾರೆ” ಎಂದಿದ್ಧಾರೆ.ಒಟ್ಟಿನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಬಳಿಕ ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ನೇಮಕಾತಿಗೆ ಕಾಂಗ್ರೆಸ್ ಯುವ ಕಾರ್ಯಕರ್ತರಲ್ಲಿ ಒತ್ತಡ ಹೆಚ್ಚುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಏನು ಮಾಡುತ್ತೆ ಎಂದು ಕಾದು ನೋಡಬೇಕಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by: Vijayasarthy SN
First published: July 12, 2020, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading