ಚಿತ್ರದುರ್ಗ: ಮಹಾರಾಷ್ಟ್ರದ ಹುಚ್ಚ, ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನ ಸಂವಿಧಾನ ಬದ್ದವಾಗಿ ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಬೇಕು. ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಬಂದು ಭದ್ರತೆ ನೀಡಬೇಕು ಎಂದು ಕರವೇ ರಾಜ್ಯಾದ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಕನ್ನಡ ಶಾಲು, ಬಾವುಟ ಕಂಡರೆ ಹೊಡೆಯುತ್ತೇವೆ ಎಂದಿರುವ ಶಿವಸೇನೆ ಹಾಗೂ ಎಂಇಎಸ್ ವಿರುದ್ದ ಪ್ರವೀಣ್ ಶೆಟ್ಟಿ ಹೋರಾಟಕ್ಕೆ ಕರೆ ನೀಡಿದ್ದಾರೆ.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್ ಸಂಘಟನೆಯವರು ಕನ್ನಡದ ಶಾಲು, ಭಾವುಟ ನೋಡಿದ್ರೆ ಹೊಡೆಯುತ್ತೇವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನ ಕರ್ನಾಟಕ ರಕ್ಷಣಾ ವೇದಿಕೆ ಸವಾಲಾಗಿ ಸ್ವೀಕರಿಸಿದ್ದೇವೆ. ಹಿಂದುತ್ವವನ್ನ ಬಿಟ್ಟು ಈಗ ಭಾಷೆಯ ಮೇಲೆ ದಬ್ಬಾಳಿಕೆ ಮಾಡುವ ಕೆಲಸವನ್ನ ಶಿವಸೇನೆ ಹಾಗೂ ಎಂಇಎಸ್ ನವರು ಮಾಡುತ್ತಿದ್ದಾರೆ. ಇದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಗುರುವಾರ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಯಿಂದ ಹೊರಟು ಮಹಾರಾಷ್ಟ್ರದ ಗಡಿ ಉಲ್ಲಂಘನೆ ಮಾಡುವ ಕೆಲಸ ಮಾಡುತ್ತೇವೆ. ಯಾರು ಕನ್ನಡದ ಬಾವುಟ ಮತ್ತು ಶಾಲು ನೋಡಿದರೆ ಹೊಡೆಯುತ್ತೇವೆ ಎನ್ನುತ್ತಿದ್ದಾರೋ, ಕನ್ನಡಿಗರ ಮೈಯನ್ನ ಮುಟ್ಟುತ್ತೇವೆ ಅನ್ನುತ್ತಾರೋ, ಅವರಿಗೆ ನಮ್ಮನ್ನ ಮುಟ್ಟುವಂತೆ ಸವಾಲು ಹಾಕುತ್ತೇವೆ. ಈ ಹಿಂದೆಯೂ ಗಡಿ ಕ್ಯಾತೆ ಸೇರಿ ಅನೇಕ ತರಹದ ಕ್ಯಾತೆ ತಗದಾಗಲೂ, ಅನೇಕ ಹೋರಾಟಗಳನ್ನ ಮಾಡಿದ್ದೇವೆ. ನಾವು ಕಪ್ಪು ಮಸಿ ಬಳಿದು ಅವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಈಗಲೂ ಅವರು ಮತ್ತೆ ನಮ್ಮನ್ನ ಕೆಣಕುತ್ತಿದ್ದು ಅದನ್ನು ಸಹಿಸೋ ಪ್ರಶ್ನೆಯೆರ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಿರುಕುಳಕ್ಕೆ ಬೇಸತ್ತು ಡಿಪೋ ಮ್ಯಾನೇಜರ್ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಕಂಡಕ್ಟರ್ ಯತ್ನ
ಇನ್ನು, ನಮ್ಮ ರಾಜ್ಯದ ಗಡಿ ಭಾಗದಲ್ಲಿರುವ ರಾಜಕಾರಣಿಗಳು ಮರಾಠಿಗರು ಮರಾಠಿಯಲ್ಲಿ ಭಾಷಣ ಮಾಡಿದ್ರೆ ಕೇಳಿಕೊಂಡು, ಮರಾಠಿಯಲ್ಲಿ ಪ್ರಾರ್ಥನೆ ಮಾಡಿದ್ರೆ ನಗುತ್ತಾ ಈ ಕಡೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನ ನಾವು ರಾಜ್ಯದ ಕನ್ನಡಿಗರು ಎದುರಿಸುತ್ತಿದ್ದೇವೆ. ರಾಜ್ಯಗಳ ನಡುವೆ ಬಿನ್ನಾಭಿಪ್ರಾಯ ಬರುವಂತೆ ಹೇಳಿಕೆಗಳನ್ನ ನೀಡುವ ಸಮಾಜದ ಸ್ವಾಸ್ಥ್ಯವನ್ನ ಹದಗೆಡಿಸುವ ಅಂತಹ ಗೂಡಾಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒದ್ದು ಒಳಗಡೆ ಹಾಕಬೇಕು ಎಂದು ಆಗ್ರಹ ಮಾಡಿದ್ದಾರೆ.
ಅಲ್ಲದೇ ಮಹಾರಾಷ್ಟ್ರದಲ್ಲಿ ಇರುವ ಕನ್ನಡಿಗರಿಗೆ ಸರ್ಕಾರಗಳು ಭದ್ರತೆ ಕೊಡಬೇಕು ಎಂದು ಒತ್ತಾಯ ಮಾಡಿರುವ ಕರವೇ ಮುಖ್ಯಸ್ಥರು, ಮಹಾರಾಷ್ಟ್ರದಲ್ಲಿ ಜೀವನ ನಡೆಸುತ್ತಿರುವ ಕನ್ನಡಿಗರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದ್ದು ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರಿಗೆ ನೆರವಿಗೆ ಬರಬೇಕು. ಮಹಾರಾಷ್ಟ್ರದ ಹುಚ್ಚ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನ ಸಂವಿಧಾನ ಬದ್ದವಾಗಿ ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹ ಪಡಿಸಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ವಿಡಿಯೋದಲ್ಲಿದ್ದ ಯುವತಿ ಮನೆಯಲ್ಲಿ ಲಕ್ಷಾಂತರ ರೂ. ಪತ್ತೆ
ಗಡಿ ಉಲ್ಲಂಘನೆಯ ಈ ಹೋರಾಟಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹೋರಾಟಗಾರು ಬಂದು ಭಾಗಿಯಾಗಲಿದ್ದಾರೆ. ಅಲ್ಲಿ ಗಡಿ ಪ್ರವೇಶಿಸಿ ಶಾಂತಿಯುತ ಹೋರಾಟ ಮಾಡುತ್ತೇವೆ. ಇದಕ್ಕೆ ರಾಜ್ಯದ ಯಾವುದೇ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿ ಸಹಕರಿಸಿದರೆ ನಾವು ಅವರನ್ನ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ವರದಿ: ವಿನಾಯಕ ತೊಡರನಾಳ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ