ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಒಂದು ಕಡೆ ಕೊರೋನಾ ಆರ್ಭಟ ಮುಂದುವರೆದಿದ್ದರೆ, ಮತ್ತೊಂದು ಕಡೆ ಮೈಷುಗರ್ ಜಟಾಪಟಿ ಜೋರಾಗುತ್ತಿದೆ. ಮೈಷುಗರ್ ಕಾರ್ಖಾನೆ ಆರಂಭದ ವಿಚಾರ ಇದೀಗ ಜಿಲ್ಲೆಯಲ್ಲಿ ಪ್ರತಿಷ್ಠೆಯ ರಾಜಕಾರಣಕ್ಕೆ ತಿರುಗಿದೆ. ಸರ್ಕಾರ ಮತ್ತು ಜಿಲ್ಲೆಯ ಜೆಡಿಎಸ್ ಜನಪ್ರತಿನಿಧಿಗಳು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸಂಘಟನೆಗಳ ಮೂಲಕ ಪ್ರತಿಭಟನೆಗೆ ಮುಂದಾಗಿವೆ.
ಒಂದು ಗುಂಪು ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ನಡೆಸುವಂತೆ ಪ್ರತಿಭಟನೆ ಮಾಡುತ್ತಿದ್ದರೆ, ಮತ್ತೊಂದು ಪ್ರಗತಿಪರ ರೈತ ಸಂಘಟನೆ ಹೆಸರಲ್ಲಿ ಹೇಗಾದರೂ ಮಾಡಿ ಕಾರ್ಖಾನೆ ಆರಂಭಿಸಿ ಎಂದು ಪ್ರತಿಭಟನೆ ನಡೆಯುತ್ತಿವೆ. ಮೈಷುಗರ್ ಕಾರ್ಖಾನೆಯನ್ನು ಸರ್ಕಾರ ಒ ಆ್ಯಂಡ್ ಎಂ ಮಾದರಿಯಲ್ಲಿ ಆರಂಭ ಮಾಡದಂತೆ ರೈತ ಹಿತರಕ್ಷಣಾ ಸಮಿತಿ ಸಂಘಟನೆಯವರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಡಿಸಿಗೆ ಮನವಿ ಸಲ್ಲಿಸಿದ್ದರೆ ಮತ್ತೊಂದು ಪ್ರಗತಿಪರ ರೈತ ಬಣದವರು ಕೂಡಲೇ ಕಾರ್ಖಾನೆ ಆರಂಭಿಸಿ ಜಿಲ್ಲೆಯ ರೈತರನ್ನು ಉಳಿಸುವಂತೆ ಪ್ರತಿಭಟನೆ ಮಾಡಿ ಆಗ್ರಹಿಸಿದ್ದಾರೆ.
ಇನ್ನು ಜಿಲ್ಲೆಯ ಮೈಷುಗರ್ ಕಾರ್ಖಾನೆ ಆರಂಭದ ವಿಚಾರ ಇದೀಗ ರಾಜಕಾರಣದ ಪ್ರತಿಷ್ಠೆಯಾಗಿದೆ. ಜಿಲ್ಲೆಯ ಜೆಡಿಎಸ್ ಶಾಸಕರು ಕಾರ್ಖಾನೆಗೆ ಆರಂಭಕ್ಕೆ ರೈತ ಹಿತರಕ್ಷಣಾ ಸಂಘ ಟನೆ ಮೂಲಕ ಅಡ್ಡಿ ಮಾಡುತ್ತಿರುವ ತಂತ್ರಕ್ಕೆ ಸರ್ಕಾರ ಕೂಡ ಪ್ರತಿತಂತ್ರ ರೂಪಿಸಿದೆ. ಕಾರ್ಖಾನೆ ಆರಂಭಕ್ಕೆ ಅಡ್ಡಿ ಪಡಿಸಿತ್ತಿರುವ ಆ ರೈತ ಹಿತ ರಕ್ಷಣಾ ಸಂಘಟನೆ ಬದಲಾಗಿ ಇದೀಗ ಕಾರ್ಖಾನೆ ಆರಂಭಿಸಬೇಕೆನ್ನುವ ಪ್ರಗತಿಪರ ರೈತರನ್ನು ಎತ್ತಿಕಟ್ಟಿ ಶತಾಯಗತ ಕಾರ್ಖಾನೆ ಆರಂಭಿಸಲು ಮುಂದಾಗಿದೆ. ಅಲ್ಲದೇ ಆ ರೈತ ಹಿತರಕ್ಷಣಾ ಸಮಿತಿ ಕೆಲ ಮುಖಂಡರನ್ನು ಮನವೊಲಿಸಿ ಇತ್ತ ಕರೆತಂದಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಕಾರ್ಖಾನೆ ಈ ಬಾರಿ O&Mನಲ್ಲಿ ಆರಂಭ ಆಗೋದು ಖಚಿತ ಎಂದಿದ್ದು ಆ ರೈತ ಸಂಘಟನೆ ಮತ್ತು ಜೆಡಿಎಸ್ ನವರು ಎಷ್ಟೇ ವಿರೋಧ ಮಾಡಿದರೂ ನಿಜವಾದ ರೈತರ ಸಹಕಾರದಿಂದ ಕಾರ್ಖಾನೆ ಆರಂಭವಾಗಲಿದೆ ಎಂದಿದ್ದಾರೆ.
ಇದನ್ನು ಓದಿ: ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನಲೆ; ಮೊದಲ ಹಂತದಲ್ಲಿ 20 ಸಾವಿರ ಸಿಬ್ಬಂದಿಗೆ ಪರೀಕ್ಷೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ