ಜಿಎಸ್​ಟಿ ಪರಿಹಾರದ ಪಾಲಿನ ಬದಲಿಗೆ ಆರ್​ಬಿನಿಂದ ಸಾಲ - ಕೇಂದ್ರ ಸರ್ಕಾರ ಸಲಹೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಆರ್ಥಿಕ ಕುಸಿತ ಶುರುವಾಗಿದ್ದು, ಈಗ ಕೊರೋನಾದ ನೆಪ ಇಟ್ಟುಕೊಂಡು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ

news18-kannada
Updated:September 3, 2020, 8:39 PM IST
ಜಿಎಸ್​ಟಿ ಪರಿಹಾರದ ಪಾಲಿನ ಬದಲಿಗೆ ಆರ್​ಬಿನಿಂದ ಸಾಲ - ಕೇಂದ್ರ ಸರ್ಕಾರ ಸಲಹೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ
  • Share this:
ಕಲಬುರ್ಗಿ(ಸೆಪ್ಟೆಂಬರ್​. 03): ಜಿಎಸ್​ಟಿಯ ರಾಜ್ಯದ ಪಾಲು ಮತ್ತು ಪರಿಹಾರ ಪಾವತಿ ಬದಲಿಗೆ ಆರ್​ಬಿಐನಿಂದ ಸಾಲ ಪಡೆಯಲು ಕೇಂದ್ರ ಸರ್ಕಾರ ನೀಡಿರುವ ಸಲಹೆಯನ್ನು ತಿರಸ್ಕರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆರಿಸಿ ಕಳಿಸಿದ್ದಕ್ಕಾಗಿ ರಾಜ್ಯದ ಜನಕ್ಕೆ ಕೇಂದ್ರ ಈ ರೀತಿಯ ಶಿಕ್ಷೆ ನೀಡುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.

ಜಿಎಸ್​ಟಿ ಪಾಲಿನ ವಿಷಯದಲ್ಲಿ ಕೇಂದ್ರ ನೀಡಿರುವ ಸಲಹೆಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು. ಜಿಎಸ್​ಟಿ ತೆರಿಗೆ ವಸೂಲಿಯಲ್ಲಿ ಉಂಟಾಗುವ ನಷ್ಟವನ್ನು 2020ರವರೆಗೆ ಕಟ್ಟಿಕೊಡುವ ಬದ್ಧತೆಯನ್ಜು ಕೇಂದ್ರ 2017ರ ಜಿಎಸ್​ಟಿ ಕಾಯ್ದೆಯಲ್ಲಿ ವ್ಯಕ್ತಪಡಿಸಿದೆ. ಈಗ ಕೇಂದ್ರ ಅದರಂತೆ ನಡೆದುಕೊಳ್ಳಬೇಕಿದೆ ಎಂದಿದ್ದಾರೆ.

ವ್ಯಾಟ್ ಜಾರಿಯಲ್ಲಿದ್ದಾಗ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು ಸಿಗುತ್ತಿತ್ತು. ಯುಪಿಎ ಸರ್ಕಾರ ರೂಪಿಸಿದ್ದ ಉತ್ತಮ ಜಿಎಸ್​ಟಿ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅವೈಜ್ಞಾನಿಕವಾಗಿ ಬದಲಾವಣೆ ಮಾಡಿ ಜಾರಿಗೆ ತಂದಿದೆ. ಇದರಿಂದ ಆರ್ಥಿಕ ವ್ಯವಸ್ಥೆಗೆ ಹಾನಿಯಾಗಲಿದೆ ಎಂದು ಕಾಂಗ್ರೆಸ್ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಪ್ರತಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳದೆ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯ ತೋರಿಸಿತು. ತಾನು ಮಾಡಿದ ತಪ್ಪಿಗೆ ದೇಶದ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಅಸಹನೀಯ ಸಂಗತಿ ಎಂದು ಕಿಡಿಕಾರಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಆರ್ಥಿಕ ಕುಸಿತ ಶುರುವಾಗಿದ್ದು, ಈಗ ಕೊರೋನಾದ ನೆಪ ಇಟ್ಟುಕೊಂಡು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಭಾವನಾತ್ಮಕ ವಿಷಯಗಳನ್ನ ಕೇಂದ್ರಿಕರಿಸಿ ದ್ವೇಷ ರಾಜಕೀಯದಿಂದ ಅಭಿವೃದ್ಧಿಯನ್ನು ಹಳ್ಳ ಹಿಡಿಸಿದ ಬಿಜೆಪಿ, ತಾನು ಮಾಡಿದ ತಪ್ಪಿಗೆ ಜನ ದಂಡ ಕಟ್ಟಬೇಕೆಂದು ಬಯಸುತ್ತಿರುವುದು ಹಿಟ್ಲರ್ ಧೋರಣೆ. ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಮುಲಾಜಿಗೆ ಒಳಗಾಗಬಾರದು. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವರ ಸಲಹೆಯನ್ನು ಸಾರಾಸಗಟಾಗಿ ತಳ್ಳಿಹಾಕಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಹೆಸರು ನಾಮಕರಣ : ರಾಯಣ್ಣ, ಶಿವಾಜಿ ಪ್ರತಿಮೆಗೆ ಗೌರವ ಸಲ್ಲಿಸಿದ ಗ್ರಾಮಸ್ಥರು..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಅವರ ಸಲಹೆ ಒಪ್ಪಿಕೊಂಡು ಸಾಲ ಪಡೆದಿದ್ದೆ ಆದರೆ ಅದರ ಬಡ್ಡಿ ಹೊರೆಯನ್ನು ರಾಜ್ಯದ ಜನರು ಹೊರಬೇಕಾಗುತ್ತದೆ. ನಮ್ಮ ತೆರಿಗೆಯನ್ನು ಕೊಟ್ಟು, ಅದರ ಹಿಡಗಂಟಿನ ಮೇಲೆ ಸಾಲ ಪಡೆದು, ಅದಕ್ಕೆ ಮತ್ತೆ ನಾವೇ ಬಡ್ಡಿ ಕಟ್ಟುವುದು ಎಂತಹ ಶಿಕ್ಷೆ. 25 ಜನ ಸಂಸದರನ್ನು ಆರಿಸಿ ಕಳುಹಿಸಿದ್ದಕ್ಕಾಗಿ ಕನ್ನಡಿಗರಿಗೆ ಈ ಶಿಕ್ಷೆಯೇ ಎಂದು ಪ್ರಿಯಾಂಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಬೊಕ್ಕಸಕ್ಕೆ ಸಾಲದ ಹೊರೆ ಹೊರಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅತಿವೃಷ್ಠಿ, ಅನಾವೃಷ್ಠಿಗಳಿಗೆ ಪರಿಹಾರ ಜೊತೆ ತೆರಿಗೆ ಪಾಲನ್ನೂ ನಿರಾಕರಿಸಿರುವುದು ದೊಡ್ಡ ಆಘಾತಕಾರಿ. ಮೋದಿ ಕಾರಣದಿಂದಾಗಿ ಕನ್ನಡಿಗರಿಗೆ ಜಿಎಸ್​ಟಿ ಜೊತೆಗೆ ಆರ್​ಬಿಐ ಸಾಲ ಹಾಗೂ ಬಿಜೆಪಿಯ ಪಡ್ಡಿಯನ್ನೂ ಪಾವತಿಸುವ ಕರ್ಮ ರಾಜ್ಯದ ಜನತೆಗೆ ಬಂದೊದಗಿಗೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
Published by: G Hareeshkumar
First published: September 3, 2020, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading