HOME » NEWS » District » PRIYADARSHINI GI TAGGED HANDLOOM PRODUCTS TO MARKET SAYS PRESIDENT SIDDU SAVADI HK

ಪ್ರಿಯದರ್ಶಿನಿ ಬ್ರಾಂಡ್ ಮೂಲಕ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಉತ್ಪನ್ನಗಳು ಮಾರುಕಟ್ಟೆಗೆ ; ಸಿದ್ದು ಸವದಿ

ವಾರ್ಷಿಕ 10 ಕೋಟಿ ವಹಿವಾಟು ಪ್ರಿಯದರ್ಶಿನಿ ಹ್ಯಾಂಡ್ ಲೂಮ್ಸ್ ಮೂಲಕ ನಡೆಯುತ್ತಿದೆ. ಆನ್ ಲೈನ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಅಮೆಜಾನ್ ಹಾಗೂ ಪ್ಲಿಪ್‌ಕಾರ್ಟ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

news18-kannada
Updated:August 18, 2020, 8:30 PM IST
ಪ್ರಿಯದರ್ಶಿನಿ ಬ್ರಾಂಡ್ ಮೂಲಕ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಉತ್ಪನ್ನಗಳು ಮಾರುಕಟ್ಟೆಗೆ ; ಸಿದ್ದು ಸವದಿ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ‌ ನೂತನ ಅಧ್ಯಕ್ಷ ಸಿದ್ದು ಸವದಿಯನ್ನು ಸನ್ಮಾನಿಸಿದ ಸಚಿವ ಜಗದೀಶ್ ಶೆಟ್ಟರ್​
  • Share this:
ಹುಬ್ಬಳ್ಳಿ(ಆಗಸ್ಟ್. 18): ಪ್ರಿಯದರ್ಶಿನಿ ಬ್ರಾಂಡ್ ಮೂಲಕ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ‌ ನೂತನ ಅಧ್ಯಕ್ಷ ಸಿದ್ದು ಕೆ ಸವದಿ ಹೇಳಿದರು. ಹುಬ್ಬಳ್ಳಿ ವಿದ್ಯಾನಗರದ ನೇಕಾರ ಭವನದಲ್ಲಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಸರ್ಕಾರದ 2020- 21 ನೇಯ ಸಾಲಿನ ಆಯವ್ಯಯದಲ್ಲಿ ಕೈಮಗ್ಗ ನಿಗಮದ ಜಿ.ಐ. ಟ್ಯಾಗ್ ಹೊಂದಿರುವ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ 2 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಆನೇಕಲ್, ತಿಪಟೂರು, ಕೊಳ್ಳೆಗಾಲ, ಕೊಲ್ಲೂರು, ಮೊಳಕಾಲ್ಮೂರು, ಚಿಂತಾಮಣಿಗಳಲ್ಲಿ ರೇಷ್ಮೆ ಕೈಮಗ್ಗಗಳು ಇವೆ. ವಿವಿಧ ರೇಷ್ಮೆ ಉತ್ಪನ್ನಗಳನ್ನು ಪ್ರಿಯದರ್ಶಿನಿ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದರು.

ರಾಜ್ಯದ ಪ್ರಮುಖ ನಗರಗಳಲ್ಲಿರುವ ಪ್ರಿಯದರ್ಶಿನಿ ಮಳಿಗೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ವಾರ್ಷಿಕ 10 ಕೋಟಿ ವಹಿವಾಟು ಪ್ರಿಯದರ್ಶಿನಿ ಹ್ಯಾಂಡ್ ಲೂಮ್ಸ್ ಮೂಲಕ ನಡೆಯುತ್ತಿದೆ. ಆನ್ ಲೈನ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಅಮೆಜಾನ್ ಹಾಗೂ ಪ್ಲಿಪ್‌ಕಾರ್ಟ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಿಗಮದಲ್ಲಿ 9‌ ಸಾವಿರ ನೊಂದಾಯಿತ ನೇಕಾರರಿದ್ದು 6‌ ಸಾವಿರ ಜನರು ಕಾರ್ಯ ನಿರತರಾಗಿದ್ದಾರೆ. ಬನಹಟ್ಟಿ, ರಬಕವಿ, ರಾಮದುರ್ಗ, ಇಳಕಲ್, ರಾಣೆಬೆನ್ನೂರು, ಕಲಬುರ್ಗಿ, ಗದಗ, ಬೆಟಗೇರಿ, ಮೊಳಕಾಲ್ಮೂರು, ಮಂಗಳೂರು ಸೇರಿದಂತೆ ವಿವಿದೆಡೆ 5, 183‌ ಕೈಮಗ್ಗಗಳು ಕಾರ್ಯನಿರತವಾಗಿವೆ ಎಂದು ತಿಳಿಸಿದರು.

ನೇಕಾರರಿಗೆ ದಿನ ಒಂದಕ್ಕೆ 150 ರಿಂದ 200 ಕೂಲಿ ದೊರೆಯುತ್ತಿದೆ. ಶಿಕ್ಷಣ ಇಲಾಖೆಯಿಂದ ಸುಮಾರು 21 ಕೋಟಿ ರೂಪಾಯಿ ಬಾಕಿ ಹಣ ನಿಗಮಕ್ಕೆ ಸಂದಾಯವಾಗಬೇಕಿದೆ. ಮುಂದಿನ ಐದು ವರ್ಷಗಳಿಗೆ ಶಿಕ್ಷಣ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕೂಡ 8 ಲಕ್ಷ ಮೀಟರ್ ಬಟ್ಟೆಯನ್ನು ಕೈಮಗ್ಗದ ಮೂಲಕ ನೇಯ‌ಲಾಗಿದೆ. ಹಲವಾರು ವರ್ಷಗಳಿಂದ ನಿಗಮ 155 ಕೋಟಿ ರೂಪಾಯಿ ಸಂಚಿತ ನಷ್ಟದಲ್ಲಿದೆ. ನಷ್ಟ ಸರಿದೂಗಿಸಲು ಸಹಾಯ ಮಾಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದರು.

ಇದನ್ನೂ ಓದಿ : ಅಲ್ಪಾವಧಿ ಬೆಳೆಗಳ ಜೊತೆ ತೊಗರಿಗೂ ಕುತ್ತು ; ಸಾಕೋ ಸಾಕೋ ಮಳೆರಾಯ ಎನ್ನುತ್ತಿರುವ ಕಲಬುರ್ಗಿ ರೈತರು

ನಿಗಮದಲ್ಲಿ 171 ಮಂದಿ ಕಾಯಂ ಸಿಬ್ಬಂದಿ , 80 ಮಂದಿ ನಿಯೋಜನೆ ಹಾಗೂ 126 ಮಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ನಿಗಮದಿಂದ ನೇಕಾರರಿಗೆ ವಿಶೇಷ ಮಾಸಿಕ ವೃದ್ಧಾಪ್ಯ ವೇತನ, ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ನೀಡಲಾಗುತ್ತಿದೆ. ನೇಕಾರರ ಕಾಲೊನಿಗಳಿಗೆ ಮೂಲ ಸೌಕರ್ಯ ಒದಗಿಸುವುದು. ನಿಗಮದಲ್ಲಿ ನೋಂದಾಯಿತ ನೇಕಾರರಿಗೆ ವಿಶೇಷ ಜೀವವಿಮೆ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಕೈಮಗ್ಗ ನಿಗಮದ ಉತ್ಪನ್ನಗಳನ್ನು ಖರೀದಿಸಲು ಸರ್ಕಾರ ಹಲವು ಇಲಾಖೆಗಳಿಗೆ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಿದೆ. ನಿಗಮದ ಸಗಟು ವಹಿವಾಟು 80 ಕೋಟಿ ರೂಪಾಯಿಗಳಾಗಿದೆ ಎಂದರು.
Published by: G Hareeshkumar
First published: August 18, 2020, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories