ಕೊರೋನಾ ಎರಡನೇ ಅಲೆಯಿಂದ ಎದ್ದ ಕಣ್ಣೀರ ಕಥೆಗಳು; ಮರುಗದ ಖಾಸಗಿ ಆಸ್ಪತ್ರೆಗಳು

ಕಳೆದ ವರ್ಷ ಕೊರೋನಾ ಉದ್ಭವಿಸಿದ ಆರಂಭದಲ್ಲಿ ಆತಂಕ ಮನೆ ಮಾಡಿದ್ದರೂ ಪರಿಸ್ಥಿತಿ ಹೇಗೋ ನಿಭಾಯಿಸಲಾಗಿತ್ತು. ಆದರೆ, ಈ ಬಾರಿ ಎರಡನೇ ಅಲೆಯಲ್ಲಿ ಅಕ್ಷರಶಃ ಹಾಹಾಕಾರ ಎದ್ದಿದೆ. ರೋಗಿಗಳಿಗೆ ಬೆಡ್​ಗಳು ಸಿಗದೇ ಪರದಾಡುವಂತಾಗಿದೆ. ಇದಕ್ಕೆ ಏನು ಕಾರಣ?

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು: ಕೋರೋನಾದ ನಡುವೆ ಸರ್ಕಾರಕ್ಕೆ ಒಂದಲ್ಲ ಒಂದು‌ ಸಮಸ್ಯೆ ಬಂದು ಸುತ್ತಿಕೊಳ್ಳುತ್ತಿದೆ. ಮೊನ್ನೆ ರೆಮಿಡಿಸಿವರ್ ಅಭಾವ ಆಯಿತು. ನಂತರ ಆಕ್ಸಿಜನ್ ಸಮಸ್ಯೆ ಎದುರಾಯಿತು. ಇದೀಗ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಕೊಡಬೇಕಾದ ಬೆಡ್​ಗಳನ್ನ ಮೀಸಲಿರಿಸದೇ ಇರೋದು ಸಮಸ್ಯೆಯನ್ನ ಹೆಚ್ಚಿಸಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕೋರು ಯಾರು ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದರ ನಡುವೆ ಹಾಸಿಗೆ ಸಿಗದ ಹಿನ್ನೆಲೆ ಕರುಳು ಹಿಂಡುವ ದೃಶ್ಯಗಳು ಒಂದೊಂದೇ ಹುಟ್ಟಿಕೊಳ್ಳುತ್ತಿವೆ.

  ಬೆಂಗಳೂರಿನಲ್ಲಿ ಕೊರೋನಾ ಸೋಂಕು‌ ಶರವೇಗದಲ್ಲಿ ಹೆಚ್ಚುತ್ತಿದೆ. ಉಸಿರಾಟದ ಸಮಸ್ಯೆ ಇರುವ ರೋಗಿಗಳ ಸಂಖ್ಯೆ ಕೂಡ ವೃದ್ದಿಸುತ್ತಿದ್ದು, ಬೆಡ್​ಗಳಿಗೆ ಪರದಾಡುವ ಸ್ಥಿತಿ‌ ನಿರ್ಮಾಣವಾಗಿದೆ. ಆರೋಗ್ಯ ಸಚಿವ ಸುಧಾಕರ್ ಈ ಹಿಂದೆ ಖಾಸಗಿ‌ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಬೆಡ್ ನೀಡುವಂತೆ ಹೇಳಿದ್ದರು. ಬೆಂಗಳೂರಿನ 46 ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ 50% ದಷ್ಟು ಬೆಡ್​ಗಳನ್ನು ಸರ್ಕಾರ ‌ಕಳುಹಿಸುವ ರೋಗಿಗಳಿಗೆ ಮೀಸಲಿರಿಸುವಂತೆ  ಸೂಚಿಸಿತ್ತು.‌ ಆದರೆ, ಕೆಲ ಖಾಸಗಿ ಆಸ್ಪತ್ರೆಗಳು ಸರ್ಕಾರದ ಆದೇಶಕ್ಕೆ ಕಿಮ್ಮತ್ತು‌ ನೀಡುತ್ತಿಲ್ಲ. ಹೀಗಾಗಿ ನಿನ್ನೆ ರಾತ್ರಿ  ಬಿಬಿಎಂಪಿ ಕಮೀಷನರ್ ಗೌರವ್ ಗುಪ್ತ ಕೆಲ ಆಸ್ಪತ್ರೆಗಳಿಗೆ ಭೇಟಿ‌ನೀಡಿ ಖಡಕ್ ಸೂಚನೆ ನೀಡಿದ್ದರು. ಕೊರೋನಾದಂತಹ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಜವಾಬ್ದಾರಿಯ‌ನ್ನು ಮೆರೆಯಬೇಕು. ಅದನ್ನ ಬಿಟ್ಟು ಬೆಡ್ ಮೀಸಲಿರಿಸದೇ ಇರೋದು ಆರೋಗ್ಯ‌ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.

  ಸರ್ಕಾರ ಇಷ್ಟೆಲ್ಲಾ ಹೇಳಿದ ಮೇಲೂ ಸೋಂಕಿತರು ಬೆಡ್ ಸಿಗದೆ ನರಳಾಡುತ್ತಿದ್ದಾರೆ. ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಬೆಡ್ ಕೊಡೋಕೆ ಮೀನಾ ಮೇಷ ಎಣಿಸುತ್ತಿದೆ. ಬಿಜಿಎಸ್ ಆಸ್ಪತ್ರೆ ಬಳಿ ನಾಲ್ಕೈದು ಆಸ್ಪತ್ರೆ ಅಲೆದರೂ ಬೆಡ್ ಸಿಗದೆ ಮಹಿಳೆಯೊಬ್ಬರು ಗೋಳಾಡಿದ ಘಟನೆ ಜರುಗಿದೆ‌. ಕಾಲಿಗೆ ಬೀಳ್ತೇವೆ ದಯವಿಟ್ಟು ಹಾಸಿಗೆ ಒದಗಿಸಿ ಅಂತ ಆ ಮಹಿಳೆ ಕೈ ಮುಗಿದು ಬೇಡಿಕೊಂಡಿದ್ದಾರೆ. ಇದೊಂದೆಡೆಯಾದರೆ, ಇತ್ತ ನಗರದ ಅಂಬೇಡ್ಕರ್ ಆಸ್ಪತ್ರೆ ಬಳಿಯೂ ಮಹಿಳೆಯೊಬ್ಬರು ಹಾಸಿಗೆ ಸಿಗದೆ ಗೇಟ್ ಬಳಿಯೇ ನರಳಾಡಿದ್ದಾರೆ. ಹೀಗಿದ್ರೂ ಆಸ್ಪತ್ರೆ ಸಿಬ್ಬಂದಿ ಬೆಡ್ ಕೊಡದೆ ಅಮಾನವೀಯ ನಡೆ ನಡೆದಿದ್ದಾರೆ.

  ಇದನ್ನೂ ಓದಿ: Corona Virus: ಅಂಗಲಾಚಿದ್ರೂ ಸಿಗಲಿಲ್ಲ ಆಕ್ಸಿಜನ್; ಉಸಿರಾಟದ ಸಮಸ್ಯೆಯಿಂದ ನರಳಾಡಿ ಪ್ರಾಣ ಬಿಟ್ಟ ವ್ಯಕ್ತಿ!

  ಖಾಸಗಿ ಆಸ್ಪತ್ರೆಯ ಅವಾಂತರ - ಕೋವಿಡ್ 19 ಮೃತ ದೇಹ ಅದಲು ಬದಲು:

  ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗಿನ ಜಾವ 4:30ಕ್ಕೆ ಯಾರದ್ದೋ ಮೃತ ದೇಹವನ್ನು ಮತ್ಯಾರಿಗೋ ಕೊಟ್ಟು ಯಡವಟ್ಟು ಮಾಡಿದೆ. ಜಯಲಕ್ಷ್ಮಮ್ಮ ಎಂಬವರು ಸೋಂಕು ದೃಢ ಪಟ್ಟು ಆಸ್ಪತ್ರೆ ಸೇರಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಜಯಲಕ್ಷ್ಮಮ್ಮ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಜಯಲಕ್ಷ್ಮಮ್ಮ ಅವರು ಮೃತ ಪಟ್ಟಿದ್ದಾರೆ ಎಂದಿದ್ದಾರೆ. ಆದರೆ ಮೃತ ದೇಹ ಪಡೆಯಲು ಬಂದ ಜಯಲಕ್ಷ್ಮಮ್ಮ ಕುಟುಂಬಸ್ಥರಿಗೆ ಲಕ್ಷಮ್ಮ ಎಂಬವರ ಮೃತ ದೇಹ ನೀಡಿದ್ದು, ಅದೊಂದು ಅವಾಂತರಕ್ಕೆ ಕಾರಣವಾಗಿದೆ.

  ಬಣ್ಣದ ಲೋಕಕ್ಕೂ ಕೊರೋನಾ ಶಾಕ್.. ಸಂಬಂಧಿಗಳಿಗೆ ಸೋಂಕು ಬಂದು ಪರದಾಡಿದ ತಾರೆಯರು.!!

  ಸಾಮಾನ್ಯ ಜನರಷ್ಟೇ ಅಲ್ಲ ಸ್ಯಾಂಡಲ್ವುಡ್ ತಾರೆಯರಿಗೂ ಕೊರೋನಾ ಸಂಕಟದ ದರ್ಶನವಾಗಿದೆ. ನಟ ಸಂಗೀತಗಾರ ಸಾಧುಕೋಕಿಲ ಕೂಡ ಕೊರೋನದಿಂದ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಮಾತನಾಡಿದ ಸಾಧುಕೋಕಿಲ ನನ್ನ ಅಣ್ಣನ ಮಗನಿಗೆ ಕರೋನಾ ಬಂದಿತ್ತು. ಅವನಿಗೆ ಉಸಿರಾಟದ ತೊಂದರೆ ಆಗಿ ಆಕ್ಷಿಜನ್​ ಹೊಂದಿಸಲು ಬಹಳ ಕಷ್ಟಬೀಳಬೇಕಾಯಿತು. ನಾನು ಒಬ್ಬ ಸೆಲೆಬ್ರಿಟಿ ಯಾಗಿ ಒಂದು ಆಕ್ಸಿಜನ್​ಗೆ ಒಂದಿಡೀ ದಿನ ಓಡಾಡಿದ್ದೇನೆ. ಇನ್ನು ಜನ ಸಾಮಾನ್ಯರ ಕಥೆ ಏನು..? ಹಬ್ಬ ಹರಿದಿನಗಳು ಏನೂ ಬೇಡ. ನಮ್ಮ ಮನೆಯಲ್ಲಿ ನಾವು ಸುಮ್ಮನಿದ್ದೆರೆ ಒಳ್ಳೆಯದು. ದಯವಿಟ್ಟು ನಿರ್ಲಕ್ಷ್ಯ ಬೇಡ. ಟಿವಿ ಚಾನಲ್​ನಲ್ಲಿ ಬರೋ ಸುದ್ದಿಯನ್ನ ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  ಇದರ ಜೊತೆಗೆ ನಟ ಉಪೇಂದ್ರ ಕೂಡ ರಾಜಕೀಯ ಪಡಸಾಲೆಯ ಮೇಲೆ ವಾಗ್ದಾಳಿ ನಡೆಸಿದ್ದಕ್ಕೆ ಕಂದಾಯ‌ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದರು. ಕೊರೋನಾಗೆ ದೊಡ್ಡವರು ಚಿಕ್ಕವರು ಅಂತೇನು ಇಲ್ಲ. ಎಲ್ಲರಿಗೂ ಬೆಡ್ ಹಾಗೂ ಆಕ್ಸಿಜನ್ ಒದಗಿಸಲು ಸರ್ಕಾರ ಬದ್ಧ. ಯಾವ ಕಲಾವಿದರೂ ಭಯ ಪಡುವ ಅಗತ್ಯ ಇಲ್ಲ ಎಂದರು. ಹೀಗೆ ಕೊರೋನಾ ಮತ್ತೊಂದು ಸುತ್ತಿನ ದುರಂತಕ್ಕೆ ಆದಿ ಆಡಿದಂತಿದೆ. ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೆ ಉದ್ದಟತನ ತೋರುತ್ತಿರೋದಕ್ಕೆ ಸದ್ಯಕ್ಕೆ ಕೋವಿಡೇತರ ರೋಗಿಗಳಿದ್ದಾರೆ ಅಂತ ಸಬೂಬು ಕೊಡ್ತಿದೆ. ಆದರೆ ಹೀಗೆ ಮುಂದುವರೆದರೆ ಸಾವಿನ ಸಂಖ್ಯೆ ಅನೂಹ್ಯ ರೀತಿಯಲ್ಲಿ ಏರಿಕೆ ಕಾಣಲಿದೆ.

  ಇದನ್ನೂ ಓದಿ: ಬೇಡಿಕೆಗೆ ತಕ್ಕಷ್ಟು ಆಮ್ಲಜನಕ ಉತ್ಪಾದಿಸಲು ಸಂಸ್ಥೆಗಳಿಗೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸೂಚನೆ

  20% ಬೆಡ್ ನೀಡಿ ಸಬೂಬು ಹೇಳುತ್ತಿರೋ ಖಾಸಗಿ‌ ಆಸ್ಪತ್ರೆಗಳು..!

  ಖಾಸಗಿ ಆಸ್ಪತ್ರೆಗೆ ಎಪ್ರಿಲ್ 6 ರಂದೇ ನೋಟಿಸ್ ನೀಡಿದರೂ  ಕೆಲ ಆಸ್ಪತ್ರೆಗಳು‌ ಒಂದು ಬೆಡ್ ಅನ್ನು ಸಹ ಸರ್ಕಾರ ಸೂಚಿಸಿದ ಕೋವಿಡ್ ರೋಗಿಗಳಿಗೆ ನೀಡಿಲ್ಲ. ನೂರಾರು ಬೆಡ್​ಗಳು ಇರುವ ಆಸ್ಪತ್ರೆಗಳು ಸಹ ಹತ್ತಾರು ಬೆಡ್ ನೀಡಿ ಕೈ ತೊಳೆದುಕೊಳ್ಳಲು ಯತ್ನಿಸುತ್ತಿದೆ. ಮಹದೇವಪುರದ ಯಶೋಮತಿ ಆಸ್ಪತ್ರೆ ಸರ್ಕಾರ ನಿಗದಿ‌ ಮಾಡಿರೋ 102 ಬೆಡ್​ಗಳಲ್ಲಿ‌ ಕೇವಲ 22 ಬೆಡ್ ನೀಡಿದರೆ, ವೈದೇಹಿ ‌ಆಸ್ಪತ್ರೆ ತನ್ನಲ್ಲಿನ 430 ಬೆಡ್​ಗಳ ಪೈಕಿ 108 ನ್ನು ಮಾತ್ರ ನೀಡಿದೆ. ರಾಜಾಜಿನಗರದ ಪ್ರೆಸ್ಟಿನ್ ಆಸ್ಪತ್ರೆ ಸರ್ಕಾರ ಕೇಳಿದ 20 ಬೆಡಲ್ಲಿ ಒಂದೂ ಬೆಡ್​ಗಳನ್ನ ನೀಡದೆ ಇರೋದು ಆರೋಗ್ಯ ಸಚಿವ ಕೆ  ಸುಧಾಕರ್ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ನಿನ್ನೆ ಮಾತನಾಡಿ 48 ಗಂಟೆ ಒಳಗಾಗಿ ಬೆಡ್ ನೀಡದಿದ್ರೆ ಓಪಿಡಿ ಬಂದ್ ಸೇರಿ ಕಠಿಣ ಕ್ರಮದ ಎಚ್ಚರಿಕೆ ರವಾನಿಸಿದ್ದಾರೆ.

  ನಾನ್ ಕೋವಿಡ್ ಕೇಸ್ ಹೆಚ್ಚಿರೋದ್ದಿ. ಅವರೆಲ್ಲ ಗಂಭೀರ ಸ್ಥಿತಿಯಲ್ಲಿರುವುದರಿಂದ ಈ‌ ಕೂಡಲೇ ಡಿಸ್​ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನ ಖಾಸಗಿ ಆಸ್ಪತ್ರೆಗಳು ಮುಂದಿಟ್ಟಿದೆ. ಅದ್ರೆ ಆರೋಗ್ಯ ಅಧಿಕಾರಿಗಳು ಹಂತ ಹಂತವಾಗಿ‌ಯಾದ್ರೂ ಸರ್ಕಾರ ನಿಗದಿಪಡಿಸಿದ ಬೆಡ್​ಗಳನ್ನು ನೀಡಲೇಬೇಕು ಎಂದು ಸೂಚಿಸಿದ್ದಾರೆ. ಅಲ್ಲದೇ ತುರ್ತುಚಿಕಿತ್ಸೆ ಅಗತ್ಯವಿಲ್ಲದ ರೋಗಿಗಳನ್ನು ಆಡ್ಮಿಟ್ ಮಾಡಿಕೊಂಡು ಹೆಚ್ಚು ಬಿಲ್ ಕಟ್ಟಿಸಿಕೊಳ್ಳುತ್ತ ಕೆಲ ಖಾಸಗಿ ಆಸ್ಪತ್ರೆಗಳು ಶೋಷಣೆ ಮಾಡುತ್ತಿವೆ. ಇದನ್ನ ಬಿಟ್ಟು ಅತಿಅಗತ್ಯ ಇರೋರಿಗೆ ಬೆಡ್ ನೀಡುವಂತೆ ಆರೋಗ್ಯ ‌ಇಲಾಖೆ ಸೂಚಿಸಿದೆ. ಈ ಮೂಲಕವಾದರೂ‌ ಬೆಡ್ ಸಮಸ್ಯೆ ಪರಿಹಾರವಾಗುತ್ತಾ ಅನ್ನುವುದನ್ನ ಕಾದುನೋಡಬೇಕು.

  ವರದಿ: ಆಶಿಕ್ ಮುಲ್ಕಿ
  Published by:Vijayasarthy SN
  First published: