ಗದಗ: ಇಂದು ಬಹಳಷ್ಟು ಕುತೂಹಲ ಮೂಡಿಸಿದ್ದ ಪಂಚರಾಜ್ಯ ಹಾಗೂ ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಕುರಿತು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಗದಗ ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಪಂಚರಾಜ್ಯ ಚುನಾವಣೆಯನ್ನು ರಾಜ್ಯದ ಜನ ಬಹಳಷ್ಟು ಆಸಕ್ತಿಯಿಂದ ಗಮನಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದ ಪರಿಣಾಮವನ್ನು ಗಂಭೀರವಾಗಿ ಗಮನಿಸಿರುವ ಜನರು ದೇಶದ ಪ್ರಧಾನ ಮಂತ್ರಿ ಯಾವ ಕೆಳಮಟ್ಟದ ಚುನಾವಣೆಯನ್ನು ಮಾಡ್ತಾರೆ ಅನ್ನೋದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡರು, ಕೊರೋನಾದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಜನರ ಬದುಕು ಜೀವವನ್ನು ಅತ್ಯಂತ ರಿಸ್ಕ್ ಬರುವ ಹಾಗೆ ಮಾಡಿ ಚುನಾವಣೆಯ ಎಲ್ಲಾ ಪಾವಿತ್ರ್ಯವನ್ನು ಕಳೆದಿದ್ದಾರೆ. ಆ ರೀತಿಯ ಜನವಿರೋಧಿ ನೀತಿಗೆ ಪ್ರಜ್ಞಾವಂತ ಮತದಾರ ತಕ್ಕದಾದ ಬುದ್ಧಿ ಕಲಿಸಿದ್ದಾರೆ ಎಂದ ಅವರು, ಈ ಎಲ್ಲಾ ದುರುಪಯೋಗ ಮಧ್ಯೆಯೂ ಸಹ ಬಿಜೆಪಿ ಮೂರಂಕಿ ದಾಟಿಲ್ಲ ಎಂದು ಹೇಳಿದರು.
ಇದೇ ವೇಳೆ ನಾನು ಮಮತಾ ಬ್ಯಾನರ್ಜಿ ಅವರಿಗೆ ವಿಶೇಷ ಅಭಿನಂದನೆ ಹೇಳುತ್ತೇನೆ. ಅಲ್ಲದೇ ಪ್ರಧಾನಿ ಮಂತ್ರಿಯವರಿಗೆ ಈ ರೀತಿ ಸೋಲಿನ ಅನುಭವ ಉಣಿಸಿದ ಪಶ್ಚಿಮ ಬಂಗಾಳದ ಜನರಿಗೆ ಅಭಿನಂದಿಸುತ್ತೇನೆ ಎಂದರು. ಇನ್ನು ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಎಚ್.ಕೆ.ಪಾಟೀಲ, ಬೆಳಗಾವಿ ಚುನಾವಣೆ ಬಹಳ ಅಂತಿಮ ಘಟ್ಟಕ್ಕೆ ಹೋಗಿ, ಕೊನೆ ಘಳಿಗೆವರೆಗೂ ಇನ್ನೇನು ನಾವು ಗೆದ್ದೆ ಬಿಡುತ್ತೇವೆ ಅನ್ನೋ ನೀರಿಕ್ಷೆ ಇತ್ತು. ಆದರೆ ಗೆಲುವು ನಮ್ಮ ಕೈ ತಪ್ಪಿದೆ. ಆದರೂ ಸಹ ಕಾಂಗ್ರೆಸ್ಸಿನ ಶಕ್ತಿಯನ್ನು ಬೆಳಗಾವಿ ಚುನಾವಣೆಯಲ್ಲಿ ಪ್ರದರ್ಶಿಸಲಾಗಿದೆ. ಈ ಹಿಂದೆ ಸುರೇಶ ಅಂಗಡಿ ಅವರು ಮೂರು ಲಕ್ಷದ ಐವತ್ತುಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಇದೀಗ ಮಂಗಳಾ ಅಂಗಡಿ ಅವರು ಗೆದ್ದಿದ್ದಾರೋ, ಇಲ್ಲವೋ ಅನ್ನೋ ರೀತಿ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಹೀಗಾಗಿ ಇದು ಬಿಜೆಪಿಯ ಗೆಲುವು ಅಲ್ಲವೇ ಅಲ್ಲ ಅಂತಾ ವ್ಯಂಗ್ಯ ಮಾಡಿದರು.
ಇದನ್ನು ಓದಿ: ಮಸ್ಕಿ ಸೋಲಿನ ಹೊಣೆಯನ್ನು ನಾನೂ ಕೂಡ ಹೊರುತ್ತೇನೆ, ಪ್ರತಾಪಗೌಡ ಪಾಟೀಲರ ಹೇಳಿಕೆ ನಾನು ಒಪ್ಪಲ್ಲ; ಬಿವೈ ವಿಜಯೇಂದ್ರ
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪೂರ್ಣವಾಗಿ ಸೋತಿದ್ದು ತಾಂತ್ರಿಕವಾಗಿ ಗೆಲುವು ಆಗಿರಬಹುದು. ಆದರೆ ಮೂರು ಲಕ್ಷ ಐವತ್ತು ಸಾವಿರ ಮತಗಳ ಅಂತರ ಪಡೆದ ಸೀಟು ಇವತ್ತು ಯಾವ ಪರಿಸ್ಥಿತಿಗೆ ಬಂದಿದೆ ನೋಡಿದ್ದೀರಿ ಅಂತಾ ಹೇಳಿದರು. ಮಸ್ಕಿಯಲ್ಲಿ ನಾವು ಮೂವತ್ತು ಸಾವಿರದ ಒಂದನೂರ ಅರವತ್ತು ಮತಗಳ ಅಂತರದಲ್ಲಿ ಗೆದ್ದಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಪ್ರಾರಂಭವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಕೊರೋನಾದ ಈ ಸಂದರ್ಭದಲ್ಲಿ ದುರಾಡಳಿತ, ಭ್ರಷ್ಟಾಚಾರ, ಜನರ ರಕ್ಷಣೆಯಲ್ಲಿ ವಿಫಲ ಆಗಿದ್ದಾರೆ. ನಿಮಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದಾರೆ ಎಂದರು.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ