ಕೋಲಾರ: ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ವಾಗಲು ಹಾಗೂ ಕೊರೋನಾ ಹರಡಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆ ಕೋಲಾರದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು, ಅಭ್ಯರ್ಥಿ ರಮೇಶ್‍ಬಾಬು ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಕೋಲಾರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ರಾಮಲಿಂಗಾ ರೆಡ್ಡು ಹರಿಹಾಯ್ದಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಲು ಪ್ರಧಾನಿ ಮೋದಿಯೇ ಕಾರಣ ಎಂದು ಆರೋಪಿಸಿದ ರಾಮಲಿಂಗಾ ರೆಡ್ಡಿ, " ಅಮೇರಿಕಾ ಅಧ್ಯಕ್ಷ್ಯ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಹಿನ್ನಲೆ, ಕೊರೋನಾ ನಡುವೆಯೂ ವಿದೇಶಗರನ್ನ ದೇಶದೊಳಕ್ಕೆ ಬರಲು ಅನುಮತಿ ನೀಡಿದ್ದರಿಂದಲೇ ಕೊರೋನಾ ಹರಡಲು ಸಾಧ್ಯವಾಯಿತು. ಆದರೆ ಇದನ್ನೆಲ್ಲ ಬಿಜೆಪಿಗರು ಒಪ್ಪಲು ತಯಾರಿಲ್ಲ. ಆದರು ಇದು ಸತ್ಯ" ಎಂದು ಕಿಡಿಕಾರಿದ್ದಾರೆ.
"ಇನ್ನು ಲಾಕ್ ಡೌನ್ ನಂತರ ದೇಶದಲ್ಲಿನ ಬಡ ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಊರಿಂದ ಊರಿಗೆ ತೆರಳುವ ಸಂದರ್ಭದಲ್ಲಿ ಮೋದಿ ಸರ್ಕಾರ ಸಹಾಯವೇ ಮಾಡಿಲ್ಲ. ಯಾವುದೇ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸದೆ ಲಕ್ಷಾಂತರ ಕಾರ್ಮಿಕರು ಪರದಾಡಬೇಕಾಯಿತು" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪರಿಷತ್ ಚುನಾವಣೆ, ಬೈ ಎಲೆಕ್ಷನ್ ಮಧ್ಯೆಯೂ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಸ್ತಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಮಧ್ಯೆ ಪೈಪೋಟಿ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ರಾಮಲಿಂಗಾ ರೆಡ್ಡಿ, " ಕಾಂಗ್ರೆಸ್ ನಲ್ಲಿ ಸಿಎಂ ಗಾಧಿಗೆ ಪೈಪೋಟಿ ಇಲ್ಲ. ಶಾಸಕರಿಂದ ಆಯ್ಕೆಯಾದವರೆ ಸಿಎಂ. ಎಲ್ಲಾ ಕಾಂಗ್ರೆಸ್ ಶಾಸಕರು ಪಕ್ಷದಲ್ಲಿದ್ದಾರೆ, ವಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ್ಯ ಎಲ್ಲರು ಪಕ್ಷದಲ್ಲೆ ಇದ್ದಾರೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಆಗೋದು ಖಚಿತ. ಗೆದ್ದ ಎಲ್ಲಾ ಶಾಸಕರು ಸಿಎಂರನ್ನ ಆಯ್ಕೆ ಮಾಡ್ತಾರೆ. ಈಗಿಂದಲೆ ಅದರ ಚರ್ಚೆ ಬೇಕಿಲ್ಲ" ಎಂದರು.
ಇನ್ನು ಕಾಂಗ್ರೆಸ್ ನ ಶಾಸಕರು ಮತ್ತೊಮ್ಮೆ ಬಿಜೆಪಿ ಸೇರುವ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆಗೆ ಟಾಂಗ್ ನೀಡಿದ ರಾಮಲಿಂಗಾರೆಡ್ಡಿ, 'ಮೊದಲು ಬಿಜೆಪಿ ಸೇರಿರುವ ಶಾಸಕರಿಗೆ ಸೂಕ್ತ ಸ್ತಾನಮಾನ ಕೊಡಲಿ' ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಒಬ್ಬ ಆಧುನಿಕ ದುಶ್ಯಾಸನ ಎಂದು ಕಾಂಗ್ರೆಸ್ ಎಮ್ಮೆಲ್ಸಿ ಎಚ್‍ಎಂ ರೇವಣ್ಣ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, "ಮುನಿರತ್ನ ಮಹಿಳೆಯರ ಸೀರೆಯನ್ನ ಎಳೆದಿರೊದು ಎಲ್ಲಿರಿಗು ಗೊತ್ತಾಗಿದೆ. ಚುನಾವಣೆಗೂ ಮೊದಲು ನಕಲೀ ಓಟ್ ಕಾರ್ಡ್‍ಗಳನ್ನ ತಯಾರಿಕೆ ಮಾಡಿರೊ ಕೇಸ್ ಇನ್ನು ಸುಪ್ರೀಂಕೊರ್ಟ್ ಅಂಗಳದಲ್ಲಿದೆ. ಅಂತವರು ಬಿಜೆಪಿ ಅಭ್ಯರ್ಥಿ. ಅವರೊಬ್ಬ ಆಧುನಿಕ ದುಶ್ಯಾಸನ" ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ