ಚಿಕ್ಕಮಗಳೂರು (ಸೆಪ್ಟೆಂಬರ್ 04): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಡ್ರಗ್ಸ್ ಮಾಫಿಯಾ ಮತ್ತು ಅದರ ಜೊತೆಗೆ ನಂಟು ಹೊಂದಿರುವ ಸ್ಯಾಂಡಲ್‌ವುಡ್ ಸುದ್ದಿ ಪ್ರಸ್ತುತ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಡೀ ಪೊಲೀಸ್ ವ್ಯವಸ್ಥೆ ಈ ಜಾಲವನ್ನು ಭೇದಿಸಲು ಮುಂದಾಗಿದೆ. ಈ ನಡುವೆ ಈ ಕುರಿತು ಮತ್ತೊಂದು ಆತಂಕಕಾರಿ ಮಾಹಿತಿಯನ್ನು ಹೊರಹಾಕಿರುವ ಸಚಿವ ಸಿ.ಟಿ. ರವಿ, "ಯುವ ಜನತೆಯನ್ನ ಡ್ರಗ್ ಮಾಫಿಯಾದಿಂದ ಮುಕ್ತಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹಾಗಾಗಿ, ಸರ್ಕಾರ ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದರ ನಡುವೆ ತನಿಖಾ ತಂಡದ ಮೇಲೆ ಕೆಲವರು ಒತ್ತಡ ತರುವಂತಹ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ವಿಷಯಾಂತರಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ, ಸರ್ಕಾರ ಇದ್ಯಾವುದಕ್ಕೂ ಬಗ್ಗುವುದಿಲ್ಲ" ಎಂದು ಹೇಳಿಕೆ ನೀಡುವ ಮೂಲಕ ಈ ಪ್ರಕರಣದ ತನಿಖೆಯ ಹಾದಿಯನ್ನು ತಪ್ಪಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆಯೇ? ಎಂಬ ಅನುಮಾನ ಮೂಡಲು ಕಾರಣರಾಗಿದ್ದಾರೆ.
ಡ್ರಗ್ಸ್ ಮಾಫಿಯಾ ಮತ್ತು ಅದರ ವಿರುದ್ಧದ ಕಾರ್ಯಾಚರಣೆಯ ಕುರಿತಾಗಿ ಇಂದು ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಸಚಿವ ಸಿ.ಟಿ. ರವಿ, "ಡ್ರಗ್ ಮಾಫಿಯಾ ಇಂದು-ನಿನ್ನೆಯದ್ದಲ್ಲ. ಆಗಾಗ ನಿಯಂತ್ರಿಸುವ ಕೆಲಸ ನಡೆಯುತ್ತಿದ್ದರೂ ಕೂಡ ಬೇರು ಸಹಿತ ಕಿತ್ತು ಹಾಕುವ ಕೆಲಸ ಸಾಧ್ಯವಾಗಿಲ್ಲ. ಈಗ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. 84ಕ್ಕೂ ಹೆಚ್ಚು ಜನರನ್ನ ವಿಚಾರಣೆಗೊಳಪಡಿಸಿ ಮೇಲ್ನೋಟದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕಸ್ಟಡಿಗೆ ತೆಗೆದುಕೊಂಡಿದೆ.
ಕೆಲವರನ್ನ ವಿಚಾರಣೆ ಬಳಿಕ ಬಿಡಲಾಗಿದೆ. ಇದರಿಂದಲೇ ಗೊತ್ತಾಗುತ್ತೆ ಸರ್ಕಾರ ರಾಜೀ ಮಾಡಿಕೊಂಡಿಲ್ಲ ಎಂದು. ಯಾವ ಒತ್ತಡಕ್ಕೂ ಸರ್ಕಾರ ಮಣಿಯುವುದಿಲ್ಲ ಎಂದು ಈಗಾಗಲೇ ಗೃಹಸಚಿವರು ಹೇಳಿದ್ದಾರೆ. ಎಷ್ಟೆ ಪ್ರಭಾವಿಗಳಿದ್ದರೂ ಗಂಭೀರವಾಗಿ ತೆಗೆದುಕೊಳ್ತೀವಿ ಮತ್ತು ಬೇರು ಸಹಿತ ಕಿತ್ತು ಹಾಕುವ ಕೆಲಸ ಮಾಡುತ್ತೇವೆ. ಆದರೆ, ಪ್ರಕರಣದ ಹಾದಿ ತಪ್ಪಿಸಲು ಕೆಲವರು ತನಿಖಾ ತಂಡದ ಮೇಲೆ ಒತ್ತಡ ಹಾಕುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
"ಇನ್ನು ಡ್ರಗ್ ಮಾಫಿಯಾ ಕೇವಲ ಕರ್ನಾಟಕಕ್ಕಷ್ಟೆ ಸೀಮಿತವಾಗಿಲ್ಲ. ಹೊರರಾಜ್ಯ ಹಾಗೂ ವಿದೇಶಗಳ ಸಂಪರ್ಕವೂ ಇದೆ. ಇದು ಕೆಲವೆಡೆ ಭಯೋತ್ಪಾದಕರು, ರಾಜಕೀಯ ವ್ಯಕ್ತಿಗಳು, ಸಿನಿಮಾ ನಟರು ಹಾಗೂ ಸೆಲಿಬ್ರಿಟಿಗಳ ಜೊತೆ ತಳುಕು ಹಾಕಿಕೊಂಡಿದೆ. ಯಾರೇ ಇದ್ರು ಸರಿಯೇ. ಇದನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಿಸುತ್ತಿದ್ದೇವೆ. ರಾಜೀಯಾಗುವ ಪ್ರಶ್ನೆಯೇ ಇಲ್ಲ. ಒತ್ತಡಕ್ಕೆ ಮಣಿಯುವುದೂ ಇಲ್ಲ" ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಆದರೆ, ಸಚಿವ ಸಿ.ಟಿ. ರವಿ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, "ಸಿ.ಟಿ. ರವಿಯವರು ಯಾರ ಮೇಲೆ, ಯಾರಿಂದ ಒತ್ತಡ ಇದೆ? ಎಂಬುದನ್ನು ಬಹಿರಂಗಪಡಿಸಲಿ. ಅದನ್ನು ಬಿಟ್ಟು ಮೈ ಮೇಲೆ ಎಣ್ಣೆ ಹಾಕ್ಕೊಳ್ಳೋ ರೀತಿಯಲ್ಲಿ ಹೇಳಿಕೆ ಕೊಡಬಾರದು. ಆಡಳಿತ ಪಕ್ಷದ ಮಂತ್ರಿಯಾಗಿ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಮಾಹಿತಿ ಇದ್ರೆ ಅವ್ರು ಬಹಿರಂಗ ಪಡಿಸಲಿ. ಅಥವಾ ಸಿ ಟಿ ರವಿಯವ್ರೇ ಖಾಸಗಿಯಾಗಿ ಗೃಹ ಸಚಿವರನ್ನು ಭೇಟಿ ಮಾಡಿ ಮಾಹಿತಿ ಕೊಡಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ