news18-kannada Updated:January 26, 2021, 5:55 PM IST
ಜನರಲ್ ಕೆ.ಎಸ್.ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿದ್ದ ಸಚಿವ ವಿ.ಸೋಮಣ್ಣ.
ಕೊಡಗು: ದೇಶ ಕಂಡ ಅಪ್ರತಿಮ ಸೇನಾನಿ, ಸೇನೆಯ ಮೊದಲ ದಂಡಾನಾಯಕ ಜನರಲ್ ಕೆ ಎಸ್. ತಿಮ್ಮಯ್ಯ ಅವರ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರಪತಿ ಫೆಬ್ರವರಿ 6ರಂದು ಮಡಿಕೇರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಉಸ್ತುವಾರಿ ಸಚಿವ ವಿ ಸೋಮಣ್ಣ ಇಂದು ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಿದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಸಿದ್ಧತೆ ಕುರಿತು ಚರ್ಚಿಸಿದರು.
ಜಿಲ್ಲಾಡಳಿತ ಈಗಾಗಲೇ ಎರಡು ದಿನಗಳ ಕಾಲ ತಲಕಾವೇರಿ ಮತ್ತು ಭಾಗಮಂಡಲಕ್ಕೆ ಹೊರಗಿನ ಭಕ್ತರ ಪ್ರವೇಶವನ್ನು ನಿಷೇಧಿಸಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಉಸ್ತುವಾರಿ ಸಚಿವ ಸೋಮಣ್ಣ ಅವರ ಗಮನಕ್ಕೆ ತಂದರು. ಇದೇ ವೇಳೆ ಪೊಲೀಸ್ ಇಲಾಖೆ ಭದ್ರತೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೇ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಇದ್ದು ಎಲ್ಲಾ ಕೆಲಸಗಳು ಸಕಾಲಕ್ಕೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಅದಿಕಾರಿಗಳಿಗೆ ಸೋಮಣ್ಣ ಸೂಚನೆ ನೀಡಿದರು.
ಫೆಬ್ರವರಿ 5 ರಂದೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ 6ನೇ ತಾರೀಖಿನಂದು ಭಾಗಮಂಡಲಕ್ಕೆ ಆಗಮಿಸಲಿದ್ದು, ಅಲ್ಲಿಂದ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ಮಡಿಕೇರಿಗೆ ಆಗಮಿಸಲಿದ್ದು ಮಧ್ಯಾಹ್ನದ 3ರ ವೇಳೆಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಇದೇ ಜಿಲ್ಲೆಯ ಮೂರು ಸ್ಥಳಗಳಲ್ಲಿ ಜಿಲ್ಲಾಡಳಿತ ಈಗಾಗಲೇ ಹೆಲಿಪ್ಯಾಡ್ ಗಳನ್ನು ಮಾಡಲು ನಿರ್ಧರಿಸಿದೆ. ಜನರಲ್ ತಿಮ್ಮಯ್ಯ ಸ್ಟೇಡಿಯಂ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನ ಮತ್ತು ಭಾಗಮಂಡಲ ಮೂರು ಸ್ಥಳಗಳಲ್ಲಿ ಹೆಲಿಪ್ಯಾಡ್ ಗಳನ್ನು ಮಾಡಲಾಗಿದ್ದು ರಾಷ್ಟ್ರಪತಿಯವರ ಪ್ರಯಾಣಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಇದನ್ನು ಓದಿ: ಕಲಬುರ್ಗಿಯಲ್ಲೂ ನೂರಾರು ಟ್ರ್ಯಾಕ್ಟರ್ಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ರೈತರ ಪ್ರತಿಭಟನೆ
ಸಭೆಯಲ್ಲಿ ಭಾಗವಹಿಸಿದ್ದ ಜನರಲ್ ತಿಮ್ಮಯ್ಯ ಫೋರಂನ ಕರ್ನಲ್ ಸುಬ್ಬಯ್ಯ ಸೇರಿದಂತೆ ಪ್ರಮುಖರು ಜನರಲ್ ತಿಮ್ಮಯ್ಯ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಇಬ್ಬರಿಗೂ ಭಾರತ ರತ್ನ ಪ್ರಶಸ್ತಿ ನೀಡುವಂತೆ ರಾಷ್ಟ್ರಪತಿಯವರಿಗೂ ಮನವಿ ಮಾಡಲು ಚರ್ಚಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಭಾರತರತ್ನ ಪ್ರಶಸ್ತಿ ಘೋಷಿಸಬೇಕಾಗಿರುವುದು ರಾಷ್ಟ್ರಪತಿಯವರೇ ಆಗಿರುವುದರಿಂದ ಅವರಿಗೆ ಮನವಿ ಸಲ್ಲಿಸಲು ಸಿಎಂ ಯಡಿಯೂರಪ್ಪನವರ ಗಮನಕ್ಕೆ ಈ ವಿಷಯ ತಿಳಿಸಲಾಗುವುದು ಎಂದರು.
ಸಭೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯರುಗಳು ಹಾಜರಿದ್ದು, ಎಲ್ಲಾ ಸಲಹೆ ಸೂಚನೆಗಳನ್ನು ನೀಡಿದರು. ಸಭೆಗೂ ಮೊದಲು ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿದ ಸಚಿವ ಸೋಮಣ್ಣ, ಮ್ಯೂಸಿಯಂನ ಎಲ್ಲಾ ಕೆಲಸಗಳು ಆಗಿವೆಯೇ ಎಂಬುದನ್ನು ಪರಿಶೀಲಿಸಿದರು. ಅಲ್ಲದೇ ಇಡೀ ಮ್ಯೂಸಿಯಂ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
Published by:
HR Ramesh
First published:
January 26, 2021, 5:55 PM IST