• Home
  • »
  • News
  • »
  • district
  • »
  • Kukke Subrahmanya: ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುತ್ತುಪೌಳಿ ಮರುನಿರ್ಮಾಣಕ್ಕೆ ಸಿದ್ಧತೆ

Kukke Subrahmanya: ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುತ್ತುಪೌಳಿ ಮರುನಿರ್ಮಾಣಕ್ಕೆ ಸಿದ್ಧತೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

Kukke Subrahmanya Temple : ಈ ಬಾರಿ ಮತ್ತೆ ಸುತ್ತುಪೌಳಿ ನಿರ್ಮಿಸುವ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ. ವಿವಾದಿತ ಸ್ಥಳವನ್ನು ಹೊರತುಪಡಿಸಿ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿ ಸುತ್ತುಪೌಳಿಯನ್ನು ಮೊದಲು ನಿರ್ಮಿಸಲು ತೀರ್ಮಾನಿಸಲಾಗಿದೆ.

  • Share this:

ಪುತ್ತೂರು(ನವೆಂಬರ್​ 24): ಕಳೆದ ಕೆಲವು ವರ್ಷಗಳಿಂದ ಮಳೆಗಾಲ ಸಂದರ್ಭದಲ್ಲಿ ಮಳೆಯಲ್ಲಿ ತೊಯ್ಯುತ್ತಿದ್ದ ರಾಜ್ಯದ ಶ್ರೀಮಂತ ದೇಗುಲದ ಸುತ್ತುಪೌಳಿ ದುರಸ್ತಿಗೆ ಕಾನೂನಿನ ವಿಘ್ನ ಎದುರಾಗುತ್ತಿದೆ. ಸುತ್ತುಪೌಳಿಯನ್ನು ಮರು ನಿರ್ಮಿಸಲು ಹಲವು ಬಾರಿ ದೇವಸ್ಥಾನದ ವತಿಯಿಂದ ಪ್ರಯತ್ನಗಳು ನಡೆದರೂ, ಸುತ್ತುಪೌಳಿಯ ಆವರಣದಲ್ಲೇ ಇರುವ ಸಂಪುಟ ನರಸಿಂಹ ಮಠದಿಂದ ಇದಕ್ಕೆ ಆಕ್ಷೇಪಗಳು ಬರುತ್ತಿವೆ. ಈ ಬಾರಿ ಮತ್ತೆ ಸುತ್ತುಪೌಳಿಯ ಮರು ನಿರ್ಮಾಣಕ್ಕೆ ಯೋಜನೆಗಳು ಸಿದ್ಧಗೊಂಡಿದ್ದು, ವಿವಾದಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸುತ್ತುಪೌಳಿ ನಿರ್ಮಿಸಲು ಸರಕಾರ ನಿರ್ಧರಿಸಿದೆ.


ರಾಜ್ಯದ ಶ್ರೀಮಂತ ಕ್ಷೇತ್ರ ಹಾಗೂ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸುತ್ತುಪೌಳಿ ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿವೆ. ಮಳೆಗಾಲದ ಸಂದರ್ಭದಲ್ಲಿ ಈ ಸುತ್ತುಪೌಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿ ಮಳೆ ನೀರು ದೇವಸ್ಥಾನದ ಆವರಣದೊಳಗೆ ಸೋರದಂತೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಕ್ಷೇತ್ರದಿಂದ ನಿರಂತರವಾಗಿ ಸುತ್ತುಪೌಳಿಯ ಮರು ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿದ್ದರೂ, ಕಾಮಗಾರಿಯ ನಿರ್ವಹಣೆಗೆ ಕಾನೂನಿನ ತೊಡಗು ಎದುರಾಗುತ್ತಿತ್ತು. ದೇವಸ್ಥಾನದ ಸುತ್ತುಪೌಳಿಯ ಒಂದು ಭಾಗವನ್ನು ಸಂಪುಟ ನರಸಿಂಹ ಮಠವು ತನ್ನದೆಂದು ವಾದಿಸುತ್ತಿದ್ದು, ಈ ಭಾಗದಲ್ಲಿ ಸಂಪುಟ ನರಸಿಂಹ ಸ್ವಾಮಿ ದೇವಸ್ಥಾನವೂ ಅಸ್ತಿತ್ವದಲ್ಲಿದೆ. ಈ ಕಾರಣಕ್ಕಾಗಿ ಸುತ್ತುಪೌಳಿ ನಿರ್ಮಾಣಕ್ಕೆ ಸಂಪುಟ ನರಸಿಂಹ ಮಠದ ಕಡೆಯಿಂದ ಆಕ್ಷೇಪಗಳೂ ಕೇಳಿ ಬರುತ್ತಿತ್ತು. ಹಲವು ಬಾರಿ ಸುತ್ತುಪೌಳಿಗಾಗಿ ಯೋಜನೆಗಳು ಸಿದ್ಧಗೊಂಡಿದ್ದರೂ, ವಿವಾದಿತ ಸ್ಥಳವಾದ ಕಾರಣ ಯೋಜನೆ ಆರಂಭಿಸಲು ಮಾತ್ರ ಕಾನೂನಿನ ತೊಡಕು ಎದುರಾಗುತ್ತಿತ್ತು.


ಈ ಬಾರಿ ಮತ್ತೆ ಸುತ್ತುಪೌಳಿ ನಿರ್ಮಿಸುವ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ. ವಿವಾದಿತ ಸ್ಥಳವನ್ನು ಹೊರತುಪಡಿಸಿ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿ ಸುತ್ತುಪೌಳಿಯನ್ನು ಮೊದಲು ನಿರ್ಮಿಸಲು ತೀರ್ಮಾನಿಸಲಾಗಿದೆ. ವಿವಾದಿತ ಸ್ಥಳವನ್ನು ಮಾತುಕತೆಯ ಮೂಲಕವೇ ಇಲ್ಲ ಇತರ ಲಭ್ಯವಿರುವ ಅವಕಾಶಗಳನ್ನು ಬಳಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.


ಈಗಾಗಲೇ ಈ ಬಗ್ಗೆ ಡಿಪಿಆರ್ ತಯಾರಿಸಲಾಗಿದ್ದು, ಸರಕಾರದ ಅನುಮೋದನೆ ದೊರೆತ ತಕ್ಷಣವೇ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವವೂ ಸಮೀಪಿಸುತ್ತಿದ್ದು, ಕ್ಷೇತ್ರದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಯೋಜನೆಯನ್ನೂ ಶೀಘ್ರಗತಿಯಲ್ಲಿ ನೆರವೇರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.


ಕೊರೋನಾ ಹಿನ್ನಲೆಯಲ್ಲಿ ಭಕ್ತರ ಹೆಚ್ಚಿನ ಸೇರುವಿಕೆಗೆ ಕೊಂಚ ನಿರ್ಬಂಧವನ್ನು ಈ ಬಾರಿ ಹೇರಲು ಸರಕಾರ ತೀರ್ಮಾನಿಸಿದೆ. ಈ ನಡುವೆ ದೇವಸ್ಥಾನದ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಚಂಪಾಷಷ್ಠಿ ಕಾರ್ಯಕ್ರಮವನ್ನು ನೆರವೇರಿಸಲೂ ನಿರ್ಧರಿಸಲಾಗಿದೆ.


ಇದನ್ನೂ ಓದಿ : ಬಿಡಿಸಿಸಿ ಬ್ಯಾಂಕ್ ಚುನಾವಣೆ ಬೆನ್ನ ಹಿಂದೆಯೇ ಮಾಜಿ ಸಚಿವರ ನಡುವೆ ವಾಕ್ಸಮರ ; ನಿರಾಣಿ, ಪಾಟೀಲ ಕೆಸರೆರಚಾಟ


ಧಾರ್ಮಿಕ ವಿಧಿ -ವಿಧಾನಗಳು ಪ್ರತಿವರ್ಷದಂತೆ ನಡೆಯಲಿದ್ದು, ಬ್ರಹ್ಮರಥ ಎಳೆಯುವ ವಿಚಾರವಾಗಿ ಕೆಲವು ಗೊಂದಲಗಳು ಮೂಡಿ ಬರಲಾರಂಭಿಸಿದೆ. ಈ ಹಿಂದೆ ಸೇವಾರ್ಥಿಗಳು ಬ್ರಹ್ಮರಥ ಎಳೆಯಲು ಅವಕಾಶವನ್ನು ನೀಡಲಾಗುತ್ತಿತ್ತು. ಆದರೆ ಕೋವಿಡ್ ಮಾರ್ಗಸೂಚಿ ಹಿನ್ನಲೆಯಲ್ಲಿ ಈ ಬಾರಿ ಸೇವಾರ್ಥಿಗಳಿಗೆ ಬ್ರಹ್ಮರಥ ಎಳೆಯುವ ಅವಕಾಶವನ್ನು ನಿರಾಕರಿಸುವ ಸಾಧ್ಯತೆಯು ಹೆಚ್ಚಿದೆ. ಅಲ್ಲದೆ ದೇವಸ್ಥಾನದ ಪ್ರಮುಖ ಸೇವೆಗಳಾಗಿ ಗುರುತಿಸಿಕೊಂಡಿರುವ ಎಡೆ ಮಡೆಸ್ನಾನ, ಬೀದಿಮಡೆಸ್ನಾನಕ್ಕೆ ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚೆಗಳು ನಡೆಯಲಾರಂಭಿಸಿದೆ.


ದೇವಸ್ಥಾನಕ್ಕೆ ಬರುವ ಭಕ್ತರ ಆರೋಗ್ಯವನ್ನು ಗಣನೆಗೆ ತೆಗೆದುಕೊಂಡು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲು ಸರಕಾರ ಈಗಾಗಲೇ ತೀರ್ಮಾನಿಸಿದ್ದು, ಎಡೆ ಮಡೆಸ್ನಾನ  ಹಾಗೂ ಬೀದಿ ಮಡೆಸ್ನಾನ ಸೇವೆಗೆ ಈ ಬಾರಿ ಅವಕಾಶ ನಿರಾಕರಿಸುವ ಸಾಧ್ಯತೆಯೂ ಹೆಚ್ಚಾಗಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು