Dakshina Kannada: ಧಾರ್ಮಿಕ ಕ್ಷೇತ್ರಗಳ ತೆರವು ಕಾರ್ಯಾಚರಣೆ, ಹಿಂದುತ್ವದ ಕರ್ಮಭೂಮಿಯಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ

ಧಾರ್ಮಿಕ ಕ್ಷೇತ್ರಗಳನ್ನು ತೆರವುಗೊಳಿಸುವ ನಿರ್ಧಾರಕ್ಕೆ ಸರಕಾರದ ಒಳಗೆಯೇ ಅಸಮಾಧಾನವಿದೆ. ರಾಜ್ಯ ತುಳು ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಧಾರ್ಮಿಕ ಕ್ಷೇತ್ರಗಳ ತೆರವು ತಪ್ಪು ನಿರ್ಧಾರ ಎಂದಿದ್ದು, ಸರಕಾರ ಇದನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದಕ್ಷಿಣ ಕನ್ನಡ(ಸೆ.15): ರಾಜ್ಯದಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಇದೀಗ ರಾಜ್ಯದಾದ್ಯಂತ ಭಾರೀ ವಿರೋಧ ಆರಂಭಗೊಂಡಿದೆ. ಅದರಲ್ಲೂ ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ನಡೆಯುತ್ತಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಒಳಗಾಗಿದೆ. ಹಿಂದುತ್ವದ  ಕರ್ಮಭೂಮಿಯಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ವಿಚಾರದ ಕುರಿತಂತೆ ಹಿಂದೂಪರ ಸಂಘಟನೆಗಳು ಬಿಜೆಪಿ ವಿರುದ್ಧವೇ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧಗೊಂಡಿದೆ.  ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಯ ಸೂಚನೆ‌ ಮೇರೆಗೆ ದಕ್ಷಿಣ ಕನ್ನಡ‌ ಜಿಲ್ಲೆಯಲ್ಲೂ 1500 ಕ್ಕೂ ಮಿಕ್ಕಿದ‌ ಅನಧಿಕೃತ ಧಾರ್ಮಿಕ‌ ಕೇಂದ್ರಗಳ ಪಟ್ಟಿ ಮಾಡಲಾಗಿದ್ದು, ಯಾವುದೇ‌‌ ಸಂದರ್ಭದಲ್ಲಿ ಇವುಗಳ ನೆಲಸಮವಾಗುವ ಸಾಧ್ಯತೆಯೂ ಇದೆ.

ಈ‌ ನಡುವೆ‌ ಹಿಂದೂ‌ಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಸರಕಾರದ ಈ ನಿರ್ಣಯದ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ನಾಳೆಯಿಂದ ಈ ಹೋರಾಟಗಳು ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಆರಂಭಗೊಳ್ಳಲಿದ್ದು, ಇಡೀ ರಾಜ್ಯಕ್ಕೂ ಈ ಹೋರಾಟ ವಿಸ್ತರಿಸುವ ಸೂಚನೆಯನ್ನೂ ಸಂಘಟನೆಗಳು ನೀಡಿವೆ‌. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದಲ್ಲಿ ಕೆಲವು ತಾಲಿಬಾನ್ ಪ್ರೇರಿತ ಅಧಿಕಾರಿಗಳಿದ್ದು, ಇಂಥ ಅಧಿಕಾರಿಗಳಿಂದ ಧಾರ್ಮಿಕ ಕ್ಷೇತ್ರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸರಕಾರ ಕೂಡಲೇ ಇಂಥ ಅಧಿಕಾರಿಗಳನ್ನು ಸರಕಾರ ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕೆಂಬ ಆಗ್ರಹವನ್ನೂ ಸಂಘಟನೆಗಳು ಮಾಡಲಾರಂಭಿಸಿದೆ.

ಇದನ್ನೂ ಓದಿ:Wrong Transaction: ಯಾರದ್ದೋ ಖಾತೆಗೆ ಹೋಗಬೇಕಾದ ಐದೂವರೆ ಲಕ್ಷ ಹಣ ತಪ್ಪಿ ಬಂತು; ಕೇಳಿದ್ರೆ ಮೋದಿ ಕೊಟ್ಟ ಹಣ ಎಂದು ಕೊಡಲು ನಕಾರ

ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲೂ ಹಲವಾರು ಧಾರ್ಮಿಕ ಕ್ಷೇತ್ರಗಳನ್ನು ತೆರವುಗೊಳಿಸಲು ಈಗಾಗಲೇ ಪಟ್ಟಿ ಮಾಡಿರುವ ವಿಚಾರ ಗಮನಕ್ಕೆ ಬಂದಿದ್ದು, ಕೂಡಲೇ ಆ ಪಟ್ಟಿಯನ್ನು ಹಿಂಪಡೆದುಕೊಳಬೇಕೆಂದು ಭಜರಂಗದಳ ಮುಖಂಡ ಶರಣ್‌ ಪಂಪುವೆಲ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ತೆರವುಗೊಳಿಸಿದ ದೇವಸ್ಥಾನವನ್ನು ಪುನರ್ ನಿರ್ಮಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸೆಪ್ಟೆಂಬರ್ ‌16 ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಶರಣ್ ಪಂಪುವೆಲ್ ಮಾಹಿತಿ ನೀಡಿದ್ದಾರೆ‌.

ಧಾರ್ಮಿಕ ಕ್ಷೇತ್ರಗಳನ್ನು ತೆರವುಗೊಳಿಸುವ ನಿರ್ಧಾರಕ್ಕೆ ಸರಕಾರದ ಒಳಗೆಯೇ ಅಸಮಾಧಾನವಿದೆ. ರಾಜ್ಯ ತುಳು ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಧಾರ್ಮಿಕ ಕ್ಷೇತ್ರಗಳ ತೆರವು ತಪ್ಪು ನಿರ್ಧಾರ ಎಂದಿದ್ದು, ಸರಕಾರ ಇದನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ. ಶತಮಾನಗಳ ಹಿಂದೆ ಜನ ತಮ್ಮ ಭಕ್ತಿ ಭಾವನೆಗಳಿಗೆ ಅನುಸಾರವಾಗಿ ತಾವು ಇರುವ ಸ್ಥಳದಲ್ಲಿ ಆರಾಧನಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

ಆದರೆ ಅಂಥ ಧಾರ್ಮಿಕ ಕೇಂದ್ರಗಳನ್ನು ಇದೀಗ ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ತೆರವುಗೊಳಿಸಿದಲ್ಲಿ ಭಕ್ತರ ಭಾವನೆಗೆ ಘಾಸಿಯಾಗಲಿದೆ. ಸುಪ್ರೀಂ ಕೋರ್ಟ್ ನ ಆದೇಶಕ್ಕೆ ಎಲ್ಲರೂ ಮನ್ನಣೆ ನೀಡಬೇಕಾದರೂ, ಸರಕಾರ ಈ ವಿಚಾರದಲ್ಲಿ ವಿವೇಚನೆಯನ್ನು ಪ್ರದರ್ಶಿಸಬೇಕಾಗುತ್ತದೆ. ಇಂಥ ಕ್ಷೇತ್ರಗಳನ್ನು ಉಳಿಸುವ ನಿಟ್ಟಿನಲ್ಲಿ ಕಾನೂನನ್ನು ತರಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಹಿಂದೂಪರ ಸಂಘಟನೆಗಳ ಬೆಂಬಲದಿಂದ ಆಯ್ಕೆಯಾಗಿರುವ ಬಿಜೆಪಿ ಸರಕಾರ ಇದೀಗ ಅದೇ ಸಂಘಟನೆಗಳ ವಿರೋಧ ಕಟ್ಟಿಕೊಳ್ಳುವ ಮೂಲಕ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಇದನ್ನೂ ಓದಿ:Sexual Harassment: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Latha CG
First published: