ಶಾಲಾ- ಕಾಲೇಜುಗಳ ಪುನರಾರಂಭಕ್ಕೆ ಧಾರವಾಡದಲ್ಲಿ ಭರ್ಜರಿ ತಯಾರಿ; ಮಕ್ಕಳ ಸ್ವಾಗತಕ್ಕೆ ಶಿಕ್ಷಕ ವೃಂದ ಸಜ್ಜು

ಜಿಲ್ಲೆಯಲ್ಲಿ 6 ರಿಂದ 10 ನೆಯ ತರಗತಿಯ ಒಟ್ಟು 653 ಸರಕಾರಿ ಶಾಲೆಗಳಲ್ಲಿ 65864 ಮಕ್ಕಳು , 220 ಅನುದಾನಿತ ಶಾಲೆಗಳಲ್ಲಿ 42056 ಮಕ್ಕಳು ಹಾಗೂ 296 ಅನುದಾನರಹಿತ ಶಾಲೆಗಳಲ್ಲಿ 53532 ಮಕ್ಕಳು ಹಾಜರಾಗಲಿದ್ದಾರೆ . ಅಂದರೆ ಜಿಲ್ಲೆಯ 6 ರಿಂದ 10 ನೆಯ ತರಗತಿಯ ಒಟ್ಟು 1169 ಶಾಲೆಗಳಲ್ಲಿ 161452 ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ .

ಶಿಕ್ಷಕ ವೃಂದ.

ಶಿಕ್ಷಕ ವೃಂದ.

  • Share this:
ಧಾರವಾಡ (ಜನವರಿ 1); ಎಸ್​ಎಸ್​ಎಲ್​ಸಿ  ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಹಾಗೂ 6 ರಿಂದ 9 ನೇಯ ತರಗತಿ ಮಕ್ಕಳಿಗೆ ವಿದ್ಯಾಗಮ 2 ರ ಪ್ರಾರಂಭಕ್ಕೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ,ಕಾಲೇಜುಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಶಹರ ಹಾಗೂ ಗ್ರಾಮೀಣ ಪ್ರದೇಶದ ಅನೇಕ ಶಾಲೆ,ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ 19 ರ ತಡೆಗೆ ಸರ್ಕಾರದ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅಳವಡಿಸಿರುವುದನ್ನು ಪರಿಶೀಲಿಸಿದ್ದಾರೆ.ಕರಡಿಗುಡ್ಡ, ಲಕಮಾಪುರ, ಯಾದವಾಡ, ಧಾರವಾಡದ ಆರ್.ಎನ್. ಕ್ರೀಡಾಂಗಣದ ಬಳಿಯ ಸರ್ಕಾರಿ ಪ್ರೌಢಶಾಲೆ , ಕೆ.ಇ.ಬೋರ್ಡ್ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ  ಪುನರಾರಂಭಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ಸರದಿ ಸಾಲಿನಲ್ಲಿ ಬರಲು ಚೌಕಾಕಾರದ ಗುರುತುಗಳು, ಕೊಠಡಿಗಳ ಸ್ಯಾನಿಟೈಸೇಷನ್, ಐಸೋಲೇಷನ್ ರೂಮ್, ಶೌಚಾಲಯ ಮತ್ತಿತರ ವ್ಯವಸ್ಥೆಗಳನ್ನು  ಕೂಲಂಕಷವಾಗಿ ವೀಕ್ಷಿಸಿದರು.

ಎಲ್ಲಾ ಪಾಲಕರ ಸಭೆ ನಡೆಸಿ ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕು. ಮಕ್ಕಳು ಒಟ್ಟುಗೂಡಿ ಸಂದಣಿ ಉಂಟು ಮಾಡಬಾರದು. ಪ್ರಾರ್ಥನೆ, ಊಟ,ಉಪಹಾರಕ್ಕೆ ಅವಕಾಶ ಬೇಡ. ಆಹಾರ ಧಾನ್ಯ ಮಕ್ಕಳಿಗೆ ಮನೆಗೆ ಕಳುಹಿಸಿಕೊಡಬೇಕು. ಮನೆಯಿಂದ ತಂದ  ಬಿಸಿ ನೀರು ಕುಡಿಯಲು ಹೇಳಬೇಕು. ಮಕ್ಕಳಲ್ಲಿ ಕೋವಿಡ್ ಭೀತಿ ಉಂಟಾಗದಂತೆ ಭರವಸೆ ತುಂಬಬೇಕು. ಪರೀಕ್ಷಾ ಭಯ ಬೇಡ, ಇರುವ ಅವಧಿಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸೋಣ ಎಂದು ಜಿಪಂ ಸಿಇಓ ಡಾ.ಬಿ.ಸುಶೀಲಾ ಅವರು ಶಿಕ್ಷಕರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ 6 ರಿಂದ 10 ನೆಯ ತರಗತಿಯ ಒಟ್ಟು 653 ಸರಕಾರಿ ಶಾಲೆಗಳಲ್ಲಿ 65864 ಮಕ್ಕಳು , 220 ಅನುದಾನಿತ ಶಾಲೆಗಳಲ್ಲಿ 42056 ಮಕ್ಕಳು ಹಾಗೂ 296 ಅನುದಾನರಹಿತ ಶಾಲೆಗಳಲ್ಲಿ 53532 ಮಕ್ಕಳು ಹಾಜರಾಗಲಿದ್ದಾರೆ . ಅಂದರೆ ಜಿಲ್ಲೆಯ 6 ರಿಂದ 10 ನೆಯ ತರಗತಿಯ ಒಟ್ಟು 1169 ಶಾಲೆಗಳಲ್ಲಿ 161452 ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ . ಇವರಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೂ ಸೇರಿದ್ದಾರೆ.

ಪೂರ್ವ ಸಿದ್ಧತೆಗಳು:

ಗ್ರಾಮ ಪಂಚಾಯತಿ , ಪಟ್ಟಣ ಪಂಚಾಯತಿ ಹಾಗೂ ಮಹಾನಗರಪಾಲಿಕೆ ಸಹಕಾರದಿಂದ ಅವುಗಳ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಶಾಲೆಗಳನ್ನು ಸ್ಕ್ಯಾನಿಟೈಜೇಶನ್ ಮಾಡಿಸಲಾಗಿದೆ . ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇಲಾಖೆಯಿಂದ , ಸಂಸದರಿಂದ , ಇತರ ದಾನಿಗಳಿಂದ ಕೊಡಮಾಡಲ್ಪಟ್ಟ ಥರ್ಮಲ್ ಸ್ಕ್ಯಾನರ್‌ಗಳನ್ನು ಪ್ರತಿಯೊಂದು ಶಾಲೆಗೆ ವಿತರಣೆಯಾಗುವಂತೆ ಕ್ರಮವಹಿಸಲು ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಶಾಲಾ ಸಂಚಿತ ನಿಧಿಯನ್ನು ಬಳಕೆ ಮಾಡಿಕೊಂಡು ಖರೀದಿಸಲು ತಿಳಿಸಲಾಗಿದೆ .

ಲಭ್ಯವಿರುವ ಅನುದಾನದಲ್ಲಿ ಎಲ್ಲ ಶಾಲೆಗಳೂ ಮಕ್ಕಳ ಸ್ವಚ್ಛತೆ ಹಾಗೂ ಸುರಕ್ಷತೆಗಾಗಿ ಸೋಪು , ಸ್ಯಾನಿಟೈಜರ್ ಹಾಗೂ ಫಿನಾಯಿಲ್ , ಡಸ್ಟ್‌ಬಿನ್ , ಕಸಬರಿಗೆ , ಮಾಸ್ಕ್ ಗಳನ್ನು ಖರೀದಿಸಿದ್ದಾರೆ . ಪ್ರತಿಯೊಬ್ಬ ಶಿಕ್ಷಕರು ಕೋವಿಡ್ ಟೆಸ್ಟ್‌ಗೆ ಒಳಪಡಲು ಸೂಚಿಸಲಾಗಿದೆ . ರೋಗಲಕ್ಷಣವಿರುವ ಯಾವುದೇ ಶಿಕ್ಷಕರು,ಮಕ್ಕಳು ಶಾಲೆ,ಕಾಲೇಜಿಗೆ ಬರದಂತೆ  ಕಟ್ಟುನಿಟ್ಟಾದ ಸೂಚನೆಯನ್ನು ಮುಖ್ಯೋಪಾಧ್ಯಾಯರು,ಪ್ರಾಚಾರ್ಯರ  ಮುಖಾಂತರ ನೀಡಲಾಗಿದೆ .

ಪ್ರತಿಯೊಬ್ಬ ಶಿಕ್ಷಕರು ಹಾಗೂ ಮಕ್ಕಳು ಕಡ್ಡಾಯವಾಗಿ ಮಾಸ್ಕನ್ನು ಧರಿಸಿ , ಶಾಲೆಗೆ ಬರಲು ಸೂಚಿಸಲಾಗಿದೆ . 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ , ಹ್ಯಾಂಡ್ ಗ್ಲೌಸ್, ಹಾಗೂ ಫೇಸ್ ಶೀಲ್ಡ್  ಧರಿಸಿ ಶಾಲೆಗೆ ಬರಲು ಸೂಚಿಸಲಾಗಿದೆ . ಹೆಚ್ಚು ಮಕ್ಕಳಿದ್ದ ಶಾಲೆಗಳಲ್ಲಿ ಸರದಿ ಆಧಾರದಲ್ಲಿ ಶಾಲೆಯನ್ನು ನಡೆಸಿ , ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲದೇ ಮಕ್ಕಳ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ .
ಶಾಲೆಗೆ ಬರಲು ಮಕ್ಕಳನ್ನು ಪ್ರೋತ್ಸಾಹಿಸುವ ಘೋಷಣೆಗಳನ್ನು ಹಾಗೂ ಆರೋಗ್ಯದ ದೃಷ್ಟಿಯಿಂದ ಶಾಲೆಯು ಒಂದು ಸುರಕ್ಷಿತ ತಾಣ ಎಂಬ ಭರವಸೆಯನ್ನು ತುಂಬಲು ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ಶಾಲೆಗಳಲ್ಲಿ ಎಸ್‌ಡಿಎಂಸಿ ಹಾಗೂ ಪಾಲಕರ ಸಭೆಗಳನ್ನು ನಡೆಸಿ ಶಾಲೆ ಪ್ರಾರಂಭದ ಕುರಿತಾಗಿ ಸಮಗ್ರವಾಗಿ ಚರ್ಚುಸಿ, ಪಾಲಕರಿಗೆ ಮಕ್ಕಳ ಸುರಕ್ಷತೆಯ ಬಗೆಗೆ ಮನವರಿಕೆ ಮಾಡಿಕೊಡಲಾಗಿದೆ . ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಪಾಲಕರಿಂದ ಒಪ್ಪಿಗೆ ಪತ್ರವನ್ನು ಪಡೆಯಲಾಗಿದೆ .ಶಾಲೆಗೆ ಬರಲು ಒಪ್ಪದ ಮಕ್ಕಳು ಆನ್‌ಲೈನ್ ಮೂಲಕ ಶಿಕ್ಷಣವನ್ನು ಪಡೆಯಬಹುದಾಗಿದೆ . ಪ್ರತಿಯೊಬ್ಬ ಮಕ್ಕಳು ಕುಡಿಯಲು ಬಿಸಿನೀರನ್ನು ಮನೆಯಿಂದಲೇ ತರಲು ಸೂಚಿಸಲಾಗಿದೆ .

ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿ ವಿನೂತನವಾಗಿ ವಿಶೇಷ ರೀತಿಯಲ್ಲಿ ಮಕ್ಕಳಿಗೆ ಆಕರ್ಷಕವಾಗುವಂತೆ ಶಾಲಾರಂಭವನ್ನು ಮಾಡಲು ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆಯನ್ನು ನೀಡಲಾಗಿದೆ . ತಾಲೂಕ ಹಾಗೂ ಜಿಲ್ಲಾ ಹಂತದ ಮೇಲ್ವಿಚಾರಣಾ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪುನರಾರಂಭದ ಪೂರ್ವ ತಯಾರಿ ಕುರಿತು ಪರಿಶೀಲನೆಯನ್ನು ಮಾಡುತ್ತಿದ್ದಾರೆ .

ಇದನ್ನೂ ಓದಿ: Grama Panchayat Result: ರಾಮನಗರದಲ್ಲಿ ಕಾಂಗ್ರೆಸ್​ ಕೈಹಿಡಿದ ಡಿ.ಕೆ.ಬ್ರದರ್ಸ್ ತಂತ್ರಗಾರಿಕೆ

ಒಟ್ಟಾರೆಯಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಶಾಲಾರಂಭದ ಕುರಿತಾದ ಇಲಾಖೆಯ ಎಸ್‌ಒಪಿ  ( ಪ್ರಮಾಣೀಕೃತ ಕಾರ್ಯನಿರ್ವಹಣಾ ವಿಧಾನ ) ಪ್ರಕಾರ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಕೊಳ್ಳಲು ಜಿಲ್ಲೆಯ ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ಜಿಪಂ ಸಿಇಓ ಅವರು ತಿಳಿಸಿದ್ದಾರೆ.

 20 ಸಾವಿರಕ್ಕೂ ಅಧಿಕ ಪಿಯುಸಿ ವಿದ್ಯಾರ್ಥಿಗಳು;

ಜಿಲ್ಲೆಯಲ್ಲಿ 27 ಸರ್ಕಾರಿ, 38 ಅನುದಾನಿತ ಹಾಗೂ 111 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.ಪ್ರಾರಂಭೋತ್ಸವಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಚಿದಂಬರ ತಿಳಿಸಿದ್ದಾರೆ.
Published by:MAshok Kumar
First published: