news18-kannada Updated:August 12, 2020, 8:22 PM IST
ಹಾವೇರಿ ಕೋವಿಡ್ ಆಸ್ಪತ್ರೆ.
ಹಾವೇರಿ; ಜಿಲ್ಲೆಯಲ್ಲಿ ಸಾವಿರ ಗಡಿ ದಾಟಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದಕ್ಕೆ ಪೈಪೋಟಿ ಎಂಬಂತೆ ಸಾವಿನ ಸಂಖ್ಯೆಯೂ ಏರಿಕೆಯತ್ತಾ ಸಾಗುತ್ತಿದೆ. ಕೋವಿಡ್ ವಿಚಾರದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಿಕೊಳ್ಳುವ ಜಿಲ್ಲಾಡಳಿತ, ಶಾಸಕ, ಸಚಿವರು ಸೋಂಕಿತರ ವಿಷಯದಲ್ಲಿ ಪದೇ ಪದೇ ಯಡವಟ್ಟಗಳನ್ನು ಮುಂದುವರಿಸಿದ್ದಾರೆ.
ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ, ಇಂದು ಕೋವಿಡ್ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಗೆ ಸರಿಯಾದ ಚಿಕಿತ್ಸೆ ಸಿಗದೆ ಪರದಾಟ ನಡೆಸಿದ ಮನಕಲುಕುವ ಘಟನೆ ಜಿಲ್ಲಾಡಳಿತದ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಹೌದು, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಓರ್ವ ಕೊರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡರೂ ವೈದ್ಯರಾಗಲಿ, ನರ್ಸ್ಗಳಾಗಲಿ ಯಾರೂ ತಿರುಗಿ ನೋಡದೆ ಬೆಳಗ್ಗೆವರೆಗೂ ಆಕೆ ನೋವಿನಿಂದ ಒದ್ದಾಡುವಂತೆ ಮಾಡಿದ್ದಾರೆ.
ಒಂಬತ್ತು ತಿಂಗಳ ಗರ್ಭಿಣಿಗೆ ಕೊರೋನಾ ಸೋಂಕು ಹಿನ್ನೆಲೆ ಕಳೆದ ಭಾನುವಾರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ತಡರಾತ್ರಿ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಹಿಳೆ ನೋವಿನಿಂದ ಒದ್ದಾಡುತ್ತಿರುವುದನ್ನು ಗಮನಿಸಿದ ಪಕ್ಕದ ಬೆಡ್ ನ ಸೋಂಕಿತ ಮಹಿಳೆಯರು ಆಸ್ಪತ್ರೆಯ ನರ್ಸ್ಗಳಿಗೆ ತಿಳಿಸಿದ್ದಾರೆ. ಆದರೆ, ಇದಕ್ಕೆ ಕ್ಯಾರೆ ಎನ್ನದ ಆಸ್ಪತ್ರೆ ಸಿಬ್ಬಂದಿ ಮಹಿಳೆ ಹೆರಿಗೆ ನೋವಿನಿಂದ ಚೀರಾಟ ಕೇಳಿದರೂ ಕೇಳದಂತೆ ವರ್ತಿಸಿದ್ದಾರೆ. ಹೆರಿಗೆ ನೋವು ತಾಳಲಾರದೆ ಜೊತೆಗೆ ಕೋವಿಡ್ ವಿಭಾಗದಲ್ಲಿರುವ ವ್ಯವಸ್ಥೆ ಕಂಡು ಗರ್ಭಿಣಿ ಪತಿಗೆ ಕರೆ ಮಾಡಿ ನನ್ನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ನಮಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಇಲ್ಲಿದ್ದ ಯಾವ ಮಹಿಳೆಯರಿಗೂ ಸರಿಯಾದ ಆರೈಕೆ ಮಾಡುತ್ತಿಲ್ಲವೆಂದು ಕಣ್ಣೀರು ಹಾಕಿದ್ದಾಳೆ.
ದೂರವಾಣಿಯಲ್ಲಿ ಪತ್ನಿಯನ್ನು ಸಮಾಧಾನ ಪಡಿಸಿದ ಪತಿ ಬ್ಯಾಡಗಿಯಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಪತ್ನಿ ಅನುಭವಿಸುತ್ತಿರುವ ನೋವು ಹಾಗೂ ಅಲ್ಲಿನ ಅವ್ಯವಸ್ಥೆ ಬಗ್ಗೆ ಕೆಲವು ವೈದ್ಯರ ಬಳಿ ಕೇಳಿಕೊಂಡಾಗ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ. ಇಂದು ಬೆಳಗ್ಗೆ ಹನ್ನೆರಡು ಘಂಟೆಗೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಗು, ತಾಯಿ ಆರೋಗ್ಯವಾಗಿದ್ದಾರೆ.
ಇದನ್ನು ಓದಿ: ಮತ್ತೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ, ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ...!
ಇನ್ನೂ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಕೊರೋನಾ ಚಿಕಿತ್ಸೆಗೆ ಸರಿಯಾದ ಸೂಕ್ತ ವ್ಯವಸ್ಥೆ ಇಲ್ಲವೆಂಬುವದು ಎದ್ದು ಕಾಣುತ್ತದೆ. ಕೋವಿಡ್ ಚಿಕಿತ್ಸೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಜಿಲ್ಲಾಡಳಿತಕ್ಕೆ ಮಾಡಿಕೊಂಡಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳುತ್ತಾರೆ. ಆದರೆ, ಯಾವ ಸಿದ್ದತೆಗಳು, ಕ್ರಮಗಳು ಇದುವರೆಗೂ ಕೊರೋನಾ ಸೋಂಕಿತರಿಗೆ ತಲುಪಿಲ್ಲ ಎಂಬುದು ಎದ್ದು ಕಾಣುತ್ತದೆ. ಇದು ಈ ಒಬ್ಬ ಗರ್ಭಿಣಿಯ ಅಳಲಲ್ಲ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಗರ್ಭಿಣಿಯರು ಈಗಾಗಲೇ ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಉಪಚಾರ ಮಾಡುವುದರಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಸಾಕಷ್ಟು ಕೇಳಿ ಬರುತ್ತಿವೆ. ಇನ್ನಾದರೂ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಾ ಎಂದು ಕಾದು ನೋಡಬೇಕು.
Published by:
HR Ramesh
First published:
August 12, 2020, 8:22 PM IST