ತಲಕಾವೇರಿಯ ಗಜಗಿರಿ ಬೆಟ್ಟ ಕುಸಿಯಲು ಇಂಗು ಗುಂಡಿಗಳೇ ಕಾರಣ

ಗಜಗಿರಿ ಬೆಟ್ಟದಲ್ಲಿ ಇರುವ ಇಂಗು ಗುಂಡಿಗಳನ್ನು ಮುಚ್ಚುವ ಜೊತೆಗೆ ಬೆಟ್ಟಕ್ಕೆ ಯಾವುದೇ ಕಾರಣಕ್ಕೂ ನೀರು ಇಂಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಗಿಡ ಮರಗಳನ್ನು ಬೆಳೆಸಬೇಕಾಗಿದೆ ಎಂದು ವಿಜ್ಞಾನಿಗಳ ತಂಡ ವರದಿ ನೀಡಿದೆ

ಭಾರತೀಯ ಭೂವಿಜ್ಞಾನಿಗಳ ತಂಡ

ಭಾರತೀಯ ಭೂವಿಜ್ಞಾನಿಗಳ ತಂಡ

  • Share this:
ಕೊಡಗು(ಡಿಸೆಂಬರ್​. 31): ಕಳೆದ ಆಗಸ್ಟ್ ತಿಂಗಳಲ್ಲಿ ಕೊಡಗಿನ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತಕ್ಕೆ ಅರಣ್ಯ ಇಲಾಖೆ ಅಲ್ಲಿ ತೆಗೆದಿರುವ ಇಂಗು ಗುಂಡಿಗಳು ಕೂಡ ಪ್ರಮುಖ ಕಾರಣ ಎಂದು ಅಯಿಜಾಜ್ ನೇತೃತ್ಬದಲ್ಲಿ ಭಾರತೀಯ ಭೂವಿಜ್ಞಾನಿಗಳ ತಂಡ ವರದಿ ನೀಡಿದೆ. ಇಂಗು ಗುಂಡಿಗಳ ತೆಗೆದಿದ್ದರಿಂದ ಬೆಟ್ಟಕ್ಕೆ ಹೆಚ್ಚಿನ ಪ್ರಮಾಣದ ನೀರು ಇಂಗಿದೆ. ಇದರಿಂದಾಗಿ ಗಜಗಿರಿ ಬೆಟ್ಟ ಕುಸಿದಿದೆ. ಮುಂದಿನ ಮಳೆಗಾಲದ ಒಳಗೆ ಇಂಗು ಗುಂಡಿಯನ್ನು ಮುಚ್ಚಬೇಕು. ಇಲ್ಲದಿದ್ದರೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ. ಅರಣ್ಯ ಇಲಾಖೆ ಗಜಗಿರಿ ಮತ್ತು ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಬರೋಬ್ಬರಿ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮುನ್ನೂರಕ್ಕೂ ಹೆಚ್ಚು ಇಂಗುಗುಂಡಿಗಳನ್ನು ತೆಗೆದಿತ್ತು. ಇವುಗಳನ್ನು ಮುಚ್ಚುವಂತೆ ಭಾರತೀಯ ಭೂ ವಿಜ್ಞಾನಿಗಳ ತಂಡ ನೀಡಿರುವ ವರದಿಯನ್ನು ಅರಣ್ಯ ಇಲಾಖೆಗೂ ಸಲ್ಲಿಸಲಾಗಿದ್ದು, ಕೂಡಲೇ ಇಂಗು ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ಗಜಗಿರಿ ಬೆಟ್ಟದಲ್ಲಿ ಇರುವ ಇಂಗು ಗುಂಡಿಗಳನ್ನು ಮುಚ್ಚುವ ಜೊತೆಗೆ ಬೆಟ್ಟಕ್ಕೆ ಯಾವುದೇ ಕಾರಣಕ್ಕೂ ನೀರು ಇಂಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಗಿಡ ಮರಗಳನ್ನು ಬೆಳೆಸಬೇಕಾಗಿದೆ ಎಂದು ವಿಜ್ಞಾನಿಗಳ ತಂಡ ವರದಿ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 2017, 2018, 2019 ಮತ್ತು 2020 ರಲ್ಲಿ ಭೂ ಕುಸಿತ ಉಂಟಾಗಿ, ಸಾಕಷ್ಟು ನಷ್ಟ ಉಂಟಾಗಿದೆ. ಆದ್ದರಿಂದ ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಳೆಗಾಲದ ಅವಧಿಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು. ಜೊತೆಗೆ ಶಾಶ್ವತವಾಗಿ ಪುನರ್ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ಭಾಗಮಂಡಲ ಗ್ರಾ.ಪಂ.ನಲ್ಲಿ ‘ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ’ ಇದ್ದು, ಈ ಸಮಿತಿ ಗಮನಕ್ಕೆ ತಂದು ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತಾಗಬೇಕು ಎಂದು ಸಮಿತಿ ವರದಿ ನೀಡಿದೆ. ಗ್ರಾ.ಪಂ.ನೂತನ ಆಡಳಿತ ಬಂದ ನಂತರ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಈ ಭೂಕುಸಿತಕ್ಕೆ ಕಾರಣ ಬಗ್ಗೆ ಮನವರಿಕೆ ಮಾಡಿ, ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದ್ದಾರೆ.

ಇದನ್ನೂ ಓದಿ : ಶಾಲೆಗಳು‌ ಹಾಗೂ ಪದವಿಪೂರ್ವ ತರಗತಿಗಳು ಪುನಾರಂಭ: ಸಿದ್ಧತೆ ಪರಿಶೀಲಿಸಿದ ಸಚಿವ ಸುರೇಶ್ ಕುಮಾರ್

ಗಜಗಿರಿಬೆಟ್ಟದ ತಲಕಾವೇರಿಗೆ ತೆರಳುವ ರಸ್ತೆ ಕೆಳಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 75 ಲಕ್ಷ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಹಂತದಲ್ಲಿದೆ.

ಒಟ್ಟಿನಲ್ಲಿ ಜಿಲ್ಲೆಯ ಪವಿತ್ರ ಧಾರ್ಮಿಕ ಕೇಂದ್ರ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ತೆಗೆದ ಇಂಗು ಗುಂಡಿಗಳೇ ಬೆಟ್ಟ ಕುಸಿಯಲು ಪ್ರಮುಖ ಕಾರಣಗಳಲ್ಲಿ ಒಂದು ಎನ್ನುವುದು ಬಹಿರಂಗವಾಗಿದೆ.
Published by:G Hareeshkumar
First published: