ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ; ಚಿಕ್ಕೋಡಿ ಡಿಡಿಪಿಐ ಕಚೇರಿಗೆ ಆಯುಕ್ತರ ದಿಢೀರ್ ಭೇಟಿ

ಕಳಪೆ ಪ್ರದರ್ಶನ ತೋರಿರುವ ಇಲಾಖೆಗೆ ಆಯುಕ್ತರು ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ರಾಜ್ಯಮಟ್ಟದ ಫಲಿತಾಂಶ ತಂದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಇಲಾಖೆ ಆಯುಕ್ತರು ಸನ್ಮಾನ ಮಾಡಿ ಮಕ್ಕಳಿಗೆ ಶುಭ ಕೋರಿದ್ದಾರೆ.

news18-kannada
Updated:August 14, 2020, 4:05 PM IST
ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ; ಚಿಕ್ಕೋಡಿ ಡಿಡಿಪಿಐ ಕಚೇರಿಗೆ ಆಯುಕ್ತರ ದಿಢೀರ್ ಭೇಟಿ
ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ.
  • Share this:
ಧಾರವಾಡ; ಎಸ್​ಎಸ್​ಎಲ್​ಸಿ ಪರಿಕ್ಷೇಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸದಾ ಮುಂಚೂಣಿ ಸ್ಥಾನದಲ್ಲಿ ಇರುತ್ತಿತ್ತು. ಆದರೆ ಈ ಬಾರಿಯ ಫಲಿತಾಂಶದಲ್ಲಿ ಚಿಕ್ಕೋಡಿ ಕಳಪೆ ಪ್ರದರ್ಶನ ತೋರಿದೆ. ಹೀಗಾಗಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ಚಿಕ್ಕೋಡಿ ಡಿಡಿಪಿಐ ಕಚೇರಿಗೆ ಆಗಮಿಸಿ ಜಿಲ್ಲೆಯ ಎಂಟು ವಲಯದ ಬಿಇಒಗಳ ಸಭೆ ನಡೆಸಿ, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫಲಿತಾಂಶ ಕಡಿಮೆ ಬಂದಿರುವ ಕುರಿತು ಸಕಾರಾತ್ಮಕ ಉತ್ತರ ನೀಡಲು ಎಲ್ಲ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಶೈಕ್ಷಣಿಕ ಜಿಲ್ಲೆಯು ಆಟ-ಪಾಠದಲ್ಲಿ ರಾಜ್ಯ ಹಾಗೂ ದೇಶದ ಗಮನ ಸೆಳೆಯುತ್ತಾ ಬಂದಿದೆ. ಕಳೆದ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 82.43 ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13ನೇ ಸ್ಥಾನ ಪಡೆದಿತ್ತು. ಪ್ರಸಕ್ತ ವರ್ಷದಲ್ಲಿ ಶೇ 64.20 ಫಲಿತಾಂಶ ಪಡೆದು ಕಳಪೆ ಮಟ್ಟದ ಸಾಧನೆ ಮಾಡಿರುವುದು ಶಿಕ್ಷಣ ಇಲಾಖೆಯಲ್ಲಿ ಆತ್ಮಾವಲೋಕನ ಶುರುವಾಗಿದೆ.

ಇದಕ್ಕೂ ಮೊದಲು ಶೈಕ್ಷಣಿಕ ಜಿಲ್ಲೆಯು 2016ರಲ್ಲಿ ಶೇ 86 ಫಲಿತಾಂಶ ದಾಖಲಿಸಿ, 6ನೇ ಸ್ಥಾನ ಪಡೆದಿತ್ತು. 2017ರಲ್ಲಿ ಶೇ.80 ರಷ್ಟ್ರು ಫಲಿತಾಂಶ ಪಡೆದು 3ನೇ ಸ್ಥಾನ ಗಳಿಸಿಕೊಂಡಿತ್ತು. 2018ರಲ್ಲಿ ಶೇ.87 ರಷ್ಟು ಫಲಿತಾಂಶ ಪಡೆದು 3ನೇ ಸ್ಥಾನ, 2019ರಲ್ಲಿ ಶೇ.83.43 ಫಲಿತಾಂಶ ದಾಖಲಿಸಿ 13ನೇ ಸ್ಥಾನ ಪಡೆದು ರಾಜ್ಯದ ಗಮನ ಸೆಳೆದಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಭಾರಿ ಕಳಪೆ ಮಟ್ಟದ ಫಲಿತಾಂಶ ಬಂದಿರುವುದಕ್ಕೆ ಕಾರಣ ಏನಿರಬಹುದು ಎಂಬುದರ ಕುರಿತು ಈಗ ಚರ್ಚೆ ಆರಂಭವಾಗಿದೆ.

ಕಳೆದ ವರ್ಷದ ಆಗಷ್ಟ್​ ತಿಂಗಳಲ್ಲಿ ಉಂಟಾದ ಭೀಕರ ಪ್ರವಾಹ, ಪರೀಕ್ಷೆ ಮುಂಚಿತವಾಗಿ ಆವರಿಸಿಕೊಂಡಿರುವ ಕೋವಿಡ್-19, ಲಾಕ್​ಡೌನ್ ಪರಿಣಾಮವೇ ಫಲಿತಾಂಶ ಕುಸಿಯಲು ಕಾರಣ ಎನ್ನಲಾಗುತ್ತಿದೆ. ಪ್ರವಾಹ ಸಂದರ್ಭದಲ್ಲಿ ಮೂರು ತಿಂಗಳು ತರಗತಿಗಳು ನಡೆಯದೇ ಇರುವುದು ಮತ್ತು ಈಗ ಕೋವಿಡ್‍ ಸಂದರ್ಭದಲ್ಲಿ ಮಕ್ಕಳಿಗೆ ಭಯ ಭೀತಿಯಿಂದ ಧೈರ್ಯವಾಗಿ ಮಕ್ಕಳು ಪರೀಕ್ಷೆ ಬರಿಯದೇ ಇರುವುದು ಫಲಿತಾಂಶ ಕುಸಿಯಲು ಕಾರಣ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಈ ಬಾರಿಯು ಬಾಲಕಿಯರು ಮೇಲುಗೈ

ಕೋವಿಡ್-19ರ ಲಾಕ್​ಡೌನ್ ಹಿನ್ನೆಲ್ಲೆಯಲ್ಲಿ ಮೂರು ತಿಂಗಳು ತಡವಾಗಿ ಪರೀಕ್ಷೆ ನಡೆದವು. ಪ್ರಸಕ್ತ ವರ್ಷದ ಪರೀಕ್ಷೆಯಲ್ಲಿ ಶೈಕ್ಷಣಿಕ ಜಿಲ್ಲೆಯಲ್ಲಿ 36262 ವಿದ್ಯಾರ್ಥಿಗಳಲ್ಲಿ 23280 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 64.20 ರಷ್ಟ್ರು ಫಲಿತಾಂಶ ಬಂದಿದೆ. ಇದರಲ್ಲಿ ಪರೀಕ್ಷೆ ಬರೆದ 19216 ಬಾಲಕರಲ್ಲಿ 11028 ಪಾಸಾಗಿದ್ದಾರೆ. 17046 ಬಾಲಕಿಯರಲ್ಲಿ 12252 ಪಾಸಾಗಿದ್ದರೆ. ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಶೈಕ್ಷಣಿಕ ಜಿಲ್ಲೆಯ ಮಾನ ಕಾಪಾಡಿದ ಟಾಪರ್ಸ್‍ಗಳುಕನ್ನಡ ಮಾಧ್ಯಮದಲ್ಲಿ ಚಿಕ್ಕೋಡಿಯ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡರ ಹಾಗೂ ಘಟಪ್ರಭಾದ ಶೃತಿ ಬಸಗೌಡ ಪಾಟೀಲ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾರೂಗೇರಿ ದೀಪಾ ಪಾರೀಸ ನಾಗನೂರ ದ್ವಿತೀಯ ಸ್ಥಾನ ಮತ್ತು  ಮರಾಠಿ ಮಾಧ್ಯಮದಲ್ಲಿ ಕಾರದಗಾದ ವಿದ್ಯಾರ್ಥಿನಿ ಪ್ರತಿಜ್ಞಾ ಪ್ರಕಾಶ ಕಾಶಿದ್ ಉತ್ತಮ ಸಾಧನೆ ಮಾಡಿ ಶೈಕ್ಷಣಿಕ ಜಿಲ್ಲೆಯ ಮಾನ ಕಾಪಾಡಿದ್ದಾರೆ.

ಇದನ್ನು ಓದಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್

ಒಟ್ಟಿನಲ್ಲಿ ಕಳಪೆ ಪ್ರದರ್ಶನ ತೋರಿರುವ ಇಲಾಖೆಗೆ ಆಯುಕ್ತರು ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ರಾಜ್ಯಮಟ್ಟದ ಫಲಿತಾಂಶ ತಂದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಇಲಾಖೆ ಆಯುಕ್ತರು ಸನ್ಮಾನ ಮಾಡಿ ಮಕ್ಕಳಿಗೆ ಶುಭ ಕೋರಿದ್ದಾರೆ.
Published by: HR Ramesh
First published: August 14, 2020, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading